ಶುಕ್ರವಾರ, ಮೇ 7, 2021
26 °C

ವಿದ್ಯಾರ್ಥಿಗಳಿಗೊಂದು ಪತ್ರ

-ಡಾ. ಎನ್.ಸಿ.ಎಸ್.ಮೂರ್ತಿ Updated:

ಅಕ್ಷರ ಗಾತ್ರ : | |

ನೆಚ್ಚಿನ ವಿದ್ಯಾರ್ಥಿಗಳೇ

ನೀವು ಯುವಕ/ ಯುವತಿಯರೂ ಆಗಿದ್ದೀರಿ. ಪವಿತ್ರವಾದ ಚಾರಿತ್ರ್ಯವನ್ನು ಕಾಯ್ದುಕೊಳ್ಳುವುದು ನಿಮ್ಮ ಧರ್ಮ. ಇಂದಿನ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯಲು ಪೈಪೋಟಿ ನಡೆಸುತ್ತಾರೆ. ಆದರೆ ಸದ್ಗುಣ, ಸದಾಚಾರಗಳನ್ನು ಬೆಳೆಸಿಕೊಳ್ಳಲು ಯಾರೂ ಉತ್ಸಾಹ  ತೋರುವುದಿಲ್ಲ. ಕೇವಲ ಅಂಕಗಳಿಗಾಗಿ ಒದ್ದಾಡಬೇಡಿ. ನಿಮ್ಮ ನಡತೆಗೆ ಕಳಂಕ ಬರದಂತೆ ನೋಡಿಕೊಳ್ಳುವುದು ನಿಮ್ಮ ಧರ್ಮ. ಕಾಲೇಜುಗಳು ಪದವಿಗಾಗಿ, ಹೊಟ್ಟೆಪಾಡಿಗಾಗಿ ಓದುತ್ತಿರುವ ವಿದ್ಯಾರ್ಥಿಗಳಿಂದ ತುಂಬಿರಬಾರದು. ಬದಲಾಗಿ ಸತ್ಯಜ್ಞಾನವನ್ನು ಬಯಸಿ ಬಂದವರಿಂದ ತುಂಬಿರಬೇಕು.ಒಂದು ಕಾಲದಲ್ಲಿ ಶಾಲಾ-ಕಾಲೇಜುಗಳಿಗೆ ಜ್ಞಾನ ಕೇಂದ್ರಗಳು, ಸರಸ್ವತಿ ಮಂದಿರಗಳೆಂಬ ಗೌರವ ಇತ್ತು. ಆದರೆ ಈಗ ಭಯ, ಅಶಿಸ್ತು, ಅತೃಪ್ತಿ, ಹತಾಶೆಗಳಿಂದ ಅವು ರೋಗಪೀಡಿತ ಆಗಿರುವುದನ್ನು ನಾವು ಗಮನಿಸುತ್ತಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸಂಕುಚಿತ ಭಾವನೆಗಳನ್ನು ದೂರ ಸರಿಸಬೇಕು. ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಮನಸ್ಸು, ಮಾತು ಮತ್ತು ಕೃತಿಗಳಲ್ಲಿ ಬಹಳಷ್ಟು ಹೊಂದಾಣಿಕೆ ಇರುವಂತೆ ನಿಮ್ಮ ನಡವಳಿಕೆ ಇರಬೇಕು.ನೀವು ಕಾಲೇಜಿಗೆ ಬರುವ ಉದ್ದೇಶ ಶಿಸ್ತು ಕಲಿಯಲು, ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಲು ಮತ್ತು  ಇಂದ್ರಿಯಾಪೇಕ್ಷೆಗಳನ್ನು ಸರಿಯಾದ ಮಾರ್ಗದಲ್ಲಿ ಪೂರೈಸಿಕೊಳ್ಳಲು. ಈಗಿನ ಶಿಕ್ಷಣ ಪದ್ಧತಿ ನಿಮ್ಮನ್ನು ಆಹಾರ ಸಂಪಾದನೆ ಮಾಡುವವರನ್ನಾಗಿ ಮತ್ತು ನಾಗರಿಕರನ್ನಾಗಿ ಮಾಡುವ ಗುರಿ ಹೊಂದಿದೆಯೇ ವಿನಃ ಸುಖ ಜೀವನದ ರಹಸ್ಯಗಳಾದ ಸತ್ಯ, ಅಸತ್ಯಗಳ ನಡುವಿನ ವಿವೇಚನೆಯನ್ನು ನೀಡುವುದಿಲ್ಲ. `ಮನುಷ್ಯ ವಿವೇಕ ಮತ್ತು ವಿನಯವನ್ನು ಕಳೆದುಕೊಂಡರೆ ಶಿಕ್ಷಣ ಬರೀ ವ್ಯರ್ಥವಷ್ಟೇ ಅಲ್ಲ ಅಪಾಯಕಾರಿಯೂ ಆಗುತ್ತದೆ' ಎಂದಿದ್ದಾರೆ ಡಾ. ಎಸ್.ರಾಧಾಕೃಷ್ಣನ್.ಇಂದಿನ ವಿದ್ಯಾರ್ಥಿಗಳು ಪುಸ್ತಕ ಜ್ಞಾನವನ್ನು ತಲೆಯಲ್ಲಿ ತುಂಬಿಸಿಕೊಂಡು ನಂತರ ಪರೀಕ್ಷೆಯ ಕೋಣೆಯಲ್ಲಿ ಅದನ್ನು ಖಾಲಿ ಮಾಡುತ್ತಾರೆ. ಅವರ ತಲೆಗಳು ಖಾಲಿಯಾಗಿಯೇ ಉಳಿಯುತ್ತವೆ. ಕುವೆಂಪು ಹೇಳುತ್ತಾರೆ `ತಲೆಯು ಬತ್ತ ತುಂಬಿದ ಮೂಟೆಯಂತೆ ಇರಬಾರದು, ಬದಲಾಗಿ ಪ್ರಾಯೋಗಿಕವಾದ ಮತ್ತು ಸೃಷ್ಟಿಶೀಲ ಬೀಜವಾಗಿರಬೇಕು'. ವಿಷಯಗಳನ್ನು ತಲೆಯಲ್ಲಿ ತುಂಬಿಕೊಂಡಿರುವುದೇ ವಿದ್ಯೆಯಲ್ಲ. ಬದಲಾಗಿ ನಡವಳಿಕೆಯಲ್ಲಿ ಪರಿವರ್ತನೆ ಆಗುವುದೇ ನಿಜವಾದ ವಿದ್ಯೆ. ಇದನ್ನೇ ಡಿ.ವಿ.ಗುಂಡಪ್ಪ ಹೀಗೆ ಹೇಳಿದ್ದಾರೆ:

ಭೌತವಿಜ್ಞಾನಿ ರವಿ ತಾರೆ ಧರೆಗಳ ಚಲನ!

ರೀತಿ, ವೇಗವನಳೆದು ಶಕ್ತಿಗಳ ಗುಣೆಪನ್!!

ಪ್ರೀತಿ- ರೋಷಗಳ ನವನಳೆವನೇನ್? ಅವ್ಯಕ್ತ

ಚೇತನವನರಿವನೇಂ?                          

                       - ಮಂಕುತಿಮ್ಮಶಿಕ್ಷಣದಲ್ಲಿ ಎರಡು ವಿಧ. ಮೊದಲನೆಯದು ಹೊರಗಿನ ಹಾಗೂ ಲೌಕಿಕ ಶಿಕ್ಷಣ. ಅದು ಬರೇ ಪುಸ್ತಕದ ಜ್ಞಾನವನ್ನು ಪಡೆಯುವುದು. ಆಧುನಿಕ ಜಗತ್ತಿನಲ್ಲಿ ಈ ವಿಧದ ಅನೇಕ ಪರಿಣತರು ಹಾಗೂ ಅಧಿಕ ಶೈಕ್ಷಣಿಕ ಅರ್ಹತೆ ಪಡೆದವರನ್ನು ನಾವು ಕಾಣುತ್ತೇವೆ. ವಿದ್ಯಾರ್ಥಿಗಳೇ  ನೀವೊಂದು ಮುಖ್ಯವಾದ ವಿಷಯವನ್ನು ತಿಳಿದುಕೊಳ್ಳಬೇಕು. ನೀವು ಕಲಿಯುವ ವಿದ್ಯೆಯೆಲ್ಲ ಪೂರ್ತಿ ವಿದ್ಯೆಯ ನಾಲ್ಕರಲ್ಲಿ ಒಂದು ಭಾಗ ಅಷ್ಟೆ. ಇದು ಜೀವನೋಪಾಯಕ್ಕಾಗಿ ಮಾತ್ರ. ಉಳಿದ ಮೂರು ಭಾಗಗಳನ್ನು ಸಂಪಾದಿಸಿಕೊಂಡಾಗಲೇ ನೀವು ಸಂಪೂರ್ಣ ವಿದ್ಯಾವಂತರಾಗುತ್ತೀರಿ. ಆ ಒಂದು ಭಾಗ ಭೌತಿಕ ವಿದ್ಯೆ. ಇದು ಪುಸ್ತಕಗಳಲ್ಲಿ ಲಭಿಸುತ್ತದೆ. ಉಳಿದ ಮೂರು ಭಾಗಗಳು ಪುಸ್ತಕದಲ್ಲಿ ಲಭಿಸುವುದಿಲ್ಲ. ಅವು ಆಚರಣೆಗೆ ಸಂಬಂಧಿಸಿದವು. `ಎಜುಕೇರ್' ಎಂಬ ಎರಡನೆಯ ವಿಧವು ಮಾನವೀಯ ಮೌಲ್ಯಗಳಿಗೆ ಸಂಬಂಧಿಸಿದ್ದು. ಇದು ಲ್ಯಾಟಿನ್ ಪದ. ಇದನ್ನು ಆಂಗ್ಲ ಭಾಷೆಯಲ್ಲಿ `ಎಜುಕೇಷನ್' ಎಂದು ಕರೆಯಲಾಗಿದೆ. ಈ  `ಎಜುಕೇರ್' ಎಂಬುದೇ ಮೇಲೆ ಹೇಳಿದ ಪೂರ್ತಿ ವಿದ್ಯೆಯ ನಾಲ್ಕರಲ್ಲಿ ಮೂರು ಭಾಗ.  `ಎಜುಕೇರ್' ಎಂಬ ಶಬ್ದಕ್ಕೆ ಒಳಗಿರುವುದನ್ನು ಹೊರಗೆ ತರುವುದು ಎಂದು ಅರ್ಥ.ಮಾನವೀಯ ಮೌಲ್ಯಗಳು ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿವೆ. ಅವುಗಳನ್ನು ಹೊರಗಿನಿಂದ ಪಡೆಯಲು ಸಾಧ್ಯವಿಲ್ಲ. ಅವನ್ನು ಒಳಗಿನಿಂದ ಹೊರತರಬೇಕು. `ಎಜುಕೇರ್' ಎಂದರೆ ಎಲ್ಲ ಆಧ್ಯಾತ್ಮಿಕ ಜ್ಞಾನದ ಸಾರ. ಇದು ಜೀವನದ ಪರಮಗುರಿ ತಲುಪಲು ಸಹಾಯ ಮಾಡುತ್ತದೆ. ಇದು 21ನೇ ಶತಮಾನದ ವೇದ. ಆದ್ದರಿಂದ ಓದುವ ವಿದ್ಯೆ ಒಂದು ಭಾಗವಾದರೆ, ಆಚರಣೆಗೆ ತರುವ ವಿದ್ಯೆ ಉಳಿದ ಮೂರು ಭಾಗಕ್ಕೆ ಸಮ. ಈ ಎರಡೂ ಬಗೆಯ ವಿದ್ಯೆಗಳನ್ನು ಕಲಿತಾಗಲೇ ಸಂಪೂರ್ಣ ವಿದ್ಯೆ ಆಗುತ್ತದೆ. ಪುಸ್ತಕೀಯ ಜ್ಞಾನ ಬೇಡವೆಂದು ಇದರ ಅರ್ಥವಲ್ಲ. ಆದರೆ, ಅದಷ್ಟೇ ವಿದ್ಯೆಯಲ್ಲ.ಸ್ತ್ರೀಯರು ಸೇವೆಯಲ್ಲಿ ಪುರುಷರಿಗಿಂತಲೂ ಮುಂದೆ ಇದ್ದಾರೆ. ಪುರುಷರು ಅಸೂಯೆ ಪಡದೆ ಸ್ತ್ರೀಯರ ಮೇಲ್ಪಂಕ್ತಿಯನ್ನು ಅನುಸರಿಸಬೇಕು.  ಇಂದು ವಿದ್ಯಾರ್ಥಿಗಳು ಸೆಲ್‌ಫೋನ್‌ಗಳನ್ನು ಸ್ವೇಚ್ಛೆಯಾಗಿ ಬಳಸುವುದನ್ನು ಕಂಡಿದ್ದೇವೆ. ಯಾತಕ್ಕಾಗಿ ಇವನ್ನು ಇಟ್ಟುಕೊಂಡಿದ್ದೀರಿ ಎಂದರೆ  ಅದರಿಂದ ಅನುಕೂಲಗಳಿವೆ ಎಂದು ಹೇಳುತ್ತಾರೆ. ಸೆಲ್‌ಫೋನ್‌ನ ದುರ್ಬಳಕೆಯಿಂದ ದುರ್ನಡತೆಗಳು ಹೆಚ್ಚಾಗಿ ಕೆಲವು ಸಲ ವಿದ್ಯಾರ್ಥಿಗಳು ಮಾರಣಾಂತಿಕ ನಿರ್ಧಾರ ತೆಗೆದುಕೊಂಡಿರುವುದನ್ನು ನಾವು ಕಂಡಿದ್ದೇವೆ. ಹೀಗಾಗಿ ಸೆಲ್‌ಫೋನ್‌ನ ದುರ್ಬಳಕೆ ಒಳ್ಳೆಯ ಬೆಳವಣಿಗೆ ಅಲ್ಲ.

ನಿಮಗೆ ಶುಭವಾಗಲಿ

ನಿಮ್ಮ ನೆಚ್ಚಿನ ಶಿಕ್ಷಕ


 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.