ಶುಕ್ರವಾರ, ಆಗಸ್ಟ್ 6, 2021
25 °C

ವಿದ್ಯಾ 'ವಿನೋದ'

ಸಂದರ್ಶನ: ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

`ದಿ ಡರ್ಟಿ ಪಿಕ್ಚರ್' ಹಿಂದಿ ಚಿತ್ರದ ನಂತರ ವಿದ್ಯಾ ಬಾಲನ್ ಸಂಪೂರ್ಣ ಬದಲಾಗಿದ್ದಾರೆ. ಅವರೀಗ ಕೇರಳದ ಸಂಪ್ರದಾಯಸ್ಥ ಕುಟುಂಬದ, ಸೌಮ್ಯ ಸ್ವಭಾವದ ಮಹಿಳೆ ಅಲ್ಲ. ಮಾತಿನಲ್ಲಿ ದಿಟ್ಟತನ, ವಸ್ತ್ರಗಳ ಆಯ್ಕೆಯಲ್ಲಿ ಬಿಡುಬೀಸು. ಹೀಗಿದ್ದೂ ಹಮ್ಮು ಬಿಮ್ಮು ಇಲ್ಲದ ನಡವಳಿಕೆ ಅವರದ್ದು. `ಘನಚಕ್ಕರ್' ಚಿತ್ರದ ಪ್ರಚಾರಕ್ಕಾಗಿ ಅವರು ಬೆಂಗಳೂರಿಗೆ ಬಂದಿದ್ದರು.ನಗುತ್ತ ಎಲ್ಲರತ್ತ ಕೈಬೀಸುತ್ತಲೇ ಬಂದ ನಟಿ ವಿದ್ಯಾ `ಘನಚಕ್ಕರ್' ಚಿತ್ರದಲ್ಲಿ ಪಾತ್ರಕ್ಕೆ ತೊಟ್ಟ ವೇಷಭೂಷಣದಲ್ಲೇ ಇದ್ದರು. ಸಹ ನಟ ಇಮ್ರಾನ್ ಹಶ್ಮಿ ಜತೆಗೂಡಿಯೇ ಬಂದ ಅವರ ಕಣ್ಣಿಗೆ ಅಳವಡಿಸಿದ್ದ ಲೆನ್ಸ್ ಗಮನ ಸೆಳೆಯುತ್ತಿದ್ದವು. ಆಗಾಗ ಜಾರುತ್ತಿದ್ದ ಸ್ಕಾರ್ಫನ್ನು ಪ್ರಸಾಧನ ತಜ್ಞೆ ಕ್ಲಿಪ್ ತೊಡಿಸಿ ಸರಿಪಡಿಸುತ್ತಿದ್ದರು. ಹೋಟೆಲ್ ಎದುರಿಗಿದ್ದ ಬಹುಮಹಡಿ ಕಟ್ಟಡದ ಕಿಟಕಿಗಳಿಂದ ಇಣುಕಿ ನೋಡುತ್ತಿದ್ದವರತ್ತ ಕೈಬೀಸಿ, ಮುತ್ತುಗಳನ್ನು ತೇಲಿಬಿಡುತ್ತಲೇ ಪತ್ರಕರ್ತರೊಂದಿಗೆ ವಿದ್ಯಾ ಮಾತಿಗಳಿದರು. ಬೆಂಗಳೂರಿಗೆ ಬಂದಿದ್ದರಿಂದ ಪತ್ರಕರ್ತರೊಂದಿಗೆ ಕನ್ನಡದಲ್ಲೇ ಒಂದಿಷ್ಟು ಮಾತನಾಡುವ ಪ್ರಯತ್ನ ನಡೆಸಿದರು. ವಿದ್ಯಾ ಅವರ ಸಾಹಸಕ್ಕೆ ನೆರವಾಗಿದ್ದು ಅವರ ಸಹಾಯಕ, ಗುಲ್ಬರ್ಗ ಜಿಲ್ಲೆಯ ಕಮಲಾಪುರದ ಶಾಲಿವಾಹನ.`ನಮಸ್ತೆ. ಚೆನ್ನಾಗಿದ್ದೀರಾ...' ಎಂದು ಶಾಲಿವಾಹನ ಅವರು ಹೇಳಿಕೊಟ್ಟ ಮಾತನ್ನು ಗಿಳಿಪಾಠದಂತೆ ಪತ್ರಕರ್ತರಿಗೆ ಒಪ್ಪಿಸಿ ಸೈ ಎನಿಸಿಕೊಂಡರು ವಿದ್ಯಾ. ಮುಂಬೈನ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಭಾವನವರಿಂದ ವಿದ್ಯಾ ಅವರ ಸಂಪರ್ಕ ಸಾಧಿಸಿದ ಶಾಲಿವಾಹನ ಕಳೆದ ಆರು ವರ್ಷಗಳಿಂದ ವಿದ್ಯಾ ಬಾಲನ್ ಅವರ ಸಹಾಯಕರಾಗಿದ್ದಾರೆ. ಉರ್ದು ಮಿಶ್ರಿತ ಕನ್ನಡ ಮಾತನಾಡುತ್ತಿದ್ದ ಶಾಲಿವಾಹನ ಅವರು ಮುಂಬೈ ಸೇರಿಕೊಂಡ ನಂತರ ಕನ್ನಡವನ್ನು ಭಾಗಶಃ ಮರೆತಿದ್ದರೂ `ಪ್ರಜಾವಾಣಿ' ಎಂದಾಕ್ಷಣ `ಅದು ದೊಡ್ಡ ಪತ್ರಿಕೆ ಅಲ್ಲವೇ' ಎಂದು ಪ್ರಶ್ನಿಸಿದರು. ಬಾಲಿವುಡ್ ಸಂಪರ್ಕ ಸಾಧಿಸಿದ ನಂತರ ಕರ್ನಾಟಕವನ್ನು ಮರೆತಿರುವ ಅವರು `ಕರ್ನಾಟಕದ ಮುಖ್ಯಮಂತ್ರಿ ಯಾರಾದರು' ಎಂಬ ಪ್ರಶ್ನೆಯನ್ನೂ ಕೇಳಿದರು. ಅಷ್ಟು ಹೊತ್ತಿಗಾಗಲೇ ವಿದ್ಯಾ ಅವರೊಂದಿಗೆ ಮಾತಿಗಳಿಯುವ ಸಮಯ ಬಂದಿತ್ತು.ಇತ್ತಿಚಿನ ದಿನಗಳಲ್ಲಿ ನಿಮ್ಮ ಸಿನಿಮಾಗಳು ವಿಭಿನ್ನವಾಗಿವೆ. ಕಥೆಗಳ ಆಯ್ಕೆಯ ಮಾನದಂಡಗಳೇನು?

ಚಿತ್ರಕಥೆಯನ್ನು ಆಲಿಸಿದಾಗ ಈ ಸಿನಿಮಾ ನಾನು ತೆರೆಯ ಮೇಲೆ ನೋಡಲು ಯೋಗ್ಯವಾದದ್ದೇ? ಈ ಚಿತ್ರದ ಮೂಲಕ ನಾನು ಹೇಳಬೇಕೆಂದಿರುವುದು ಇದೇ ಕಥೆಯನ್ನೇ? ನನಗೆ ಅವಕಾಶವಾಗಿ ಒದಗಿಬಂದಿರುವ ಪಾತ್ರದ ಮೂಲಕ ನಾನು ಅದನ್ನು ಹೇಳಲು ಸಾಧ್ಯವೇ? ಎಂಬಿತ್ಯಾದಿ ಪ್ರಶ್ನೆಗಳನ್ನು ನನಗೆ ನಾನೇ ಕೇಳಿಕೊಳ್ಳುತ್ತೇನೆ. ಕೆಲವೊಮ್ಮೆ ಚಿತ್ರಕಥೆಗಳನ್ನು ನಾನು ಸಿನಿಮಾ ಆಗಿ ನೋಡಲು ಇಷ್ಟಪಡುತ್ತೇನೆ. ಇನ್ನು ಕೆಲವು ಚಿತ್ರಕಥೆಗಳಲ್ಲಿನ ಪಾತ್ರಗಳ ಮೂಲಕ ಕಥೆ ಹೇಳಲು ಇಷ್ಟಪಡುತ್ತೇನೆ. ಆದರೆ ಕಥೆ ಹೇಳದ ಬೇರೆ ಪಾತ್ರಗಳಲ್ಲಿ ನಾನು ನಟಿಸಲು ಇಷ್ಟಪಡುವುದಿಲ್ಲ. ಹೀಗಾಗಿ ನನ್ನ ಚಿತ್ರಗಳು ಹಾಗೂ ಪಾತ್ರಗಳ ಆಯ್ಕೆ ಭಿನ್ನವೆಂದೆನಿಸಬಹುದು. ಪಾತ್ರ ಒಪ್ಪಿಗೆಯಾದ ನಂತರ ನಿರ್ದೇಶಕರು, ನಿರ್ಮಾಪಕರ ವಿಷಯವನ್ನು ಗಣನೆಗೆ ತೆಗೆದುಕೊಳ್ಳುತ್ತೇನೆ. ಇಲ್ಲಿ ನಿರ್ದೇಶಕರೂ ಬಹಳ ಮುಖ್ಯ. ಏಕೆಂದರೆ ಇಡೀ ಚಿತ್ರ ಸಂಪೂರ್ಣವಾಗಿ ಅವರ ದೃಷ್ಟಿಕೋನದಲ್ಲೇ ಸಾಗುತ್ತಿರುತ್ತದೆ. ಇದೇ ಸಂದರ್ಭದಲ್ಲಿ ನಿರ್ಮಾಪಕರೂ ಅಷ್ಟೇ ಮುಖ್ಯ. ಏಕೆಂದರೆ ಇಂದು ಚಿತ್ರ ಎಂದರೆ ಕೇವಲ ಸಿನಿಮಾ ತೆಗೆಯುವುದಷ್ಟೇ ಅಲ್ಲ. ನಿರ್ಮಾಪಕರ ಬೇಡಿಕೆಯಂತೆ ಚಿತ್ರ ನಿರ್ಮಾಣವಾಗುತ್ತಿದೆಯೇ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರ ಸರಿಯಾದ ಬಿಡುಗಡೆಗೆ ಸರ್ವಥಾ ಪ್ರಯತ್ನಪಡುವುದು ಅತಿ ಅವಶ್ಯಕ.ನೀವು ನಿರ್ದೇಶಕರ ನಟಿಯೇ?

(ತುಸು ಯೋಚಿಸಿ) ನಾನು ನಿರ್ದೇಶಕರ ನಟಿ. ಸಿನಿಮಾ ಆರಂಭವಾಗುತ್ತಿದ್ದಂತೆ ನಾನು ನನ್ನನ್ನು ಸಂಪೂರ್ಣವಾಗಿ ನಿರ್ದೇಶಕರಿಗೆ ಒಪ್ಪಿಸಿಬಿಡುತ್ತೇನೆ.`ದಿ ಡರ್ಟಿ ಪಿಕ್ಚರ್' ನಂತರ ಮಹಿಳಾ ಪ್ರಧಾನ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೀರಾ?

ಹಾಗೇನೂ ಇಲ್ಲ. ನನಗೆ ಬಗೆಬಗೆಯ ಪಾತ್ರಗಳ ಚಿತ್ರಗಳು ಬರುತ್ತಿವೆ. ಆದರೆ ನನಗೆ ಒಪ್ಪುವ ಚಿತ್ರಗಳಲ್ಲಷ್ಟೇ ನಟಿಸುತ್ತಿದ್ದೇನೆ. `ಘನಚಕ್ಕರ್' ಚಿತ್ರದಲ್ಲಿ ಇಮ್ರಾನ್ ಅವರ ಪಾತ್ರ ಬಹಳ ಮುಖ್ಯವಾದದ್ದು. ಅವರ ಸುತ್ತಲೇ ಚಿತ್ರ ಸಾಗುತ್ತದೆ. ನನಗೆ ಅದರಿಂದ ಏನೂ ತೊಂದರೆ ಇಲ್ಲ. ಚಿತ್ರದ ಕಥೆ ನನಗೆ ಬಹಳ ಇಷ್ಟವಾಗಿದೆ. ನನಗೆ ನಾನು ಯಾವುದೇ ರೀತಿಯ ಕಟ್ಟಳೆಗಳನ್ನು ಹಾಕಿಕೊಂಡಿಲ್ಲ.ಸೌಮ್ಯ ಸ್ವಭಾವದ ಪಾತ್ರಗಳನ್ನಷ್ಟೇ ನಿರ್ವಹಿಸುತ್ತಿದ್ದ ನೀವು ಬಾಲಿವುಡ್‌ನಲ್ಲಿ ಅಷ್ಟಾಗಿ ಸುದ್ದಿ ಮಾಡಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ದಿಟ್ಟ ಮಹಿಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ. ಬಾಲಿವುಡ್‌ನಲ್ಲಿ ನೆಲೆಯೂರಲು ಇದು ಅನಿವಾರ್ಯವೇ?

ಖಂಡಿತಾ ಇಲ್ಲ. ವಿದ್ಯಾ ಬಾಲನ್ ಬದಲಾಗಿಲ್ಲ. ನಾನು ಹಲವು ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದೇನೆ ಅಷ್ಟೆ. `ಲಗೇ ರಹೋ ಮುನ್ನಾಭಾಯ್' ಚಿತ್ರ ಸೌಮ್ಯವಾಗಿರುವಂಥ ಪಾತ್ರ ಬೇಡುತ್ತಿತ್ತು. `ದಿ ಡರ್ಟಿ ಪಿಕ್ಚರ್'ನಲ್ಲಿನ ನನ್ನ ಪಾತ್ರ ಬೋಲ್ಡ್ ಆಗಿರಬೇಕೆಂದಿತ್ತು. ಅದರಂತೆಯೇ `ಕಹಾನಿ' ಚಿತ್ರದಲ್ಲಿ ಮತ್ತೊಂದು ರೀತಿಯ ದಿಟ್ಟ ಮಹಿಳೆಯ ಪಾತ್ರ. `ಘನಚಕ್ಕರ್'ನಲ್ಲಿ ತಮಾಷೆ ಹಾಗೂ ಹುಚ್ಚುತನದ ಪಾತ್ರ ನಿರ್ವಹಿಸಿದ್ದೇನೆ. ಹೀಗಾಗಿ ನನ್ನನ್ನೇ ಪ್ರಧಾನವಾಗಿಟ್ಟುಕೊಂಡ ಚಿತ್ರಗಳ ಅಪೇಕ್ಷೆಯಲ್ಲಿ ನಾನಿಲ್ಲ. ಬದಲಿಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಬೇಕೆಂಬ ಬಯಕೆ ನನ್ನದು. ಭಿನ್ನ ಮನಸ್ಥಿತಿ ಇರುವ ವ್ಯಕ್ತಿಗಳ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆ.ಉಡುಪುಗಳ ಆಯ್ಕೆಯೂ ಬದಲಾಗಿದೆಯಲ್ಲವೇ?

ಎಲ್ಲರಂತೆಯೇ ನಾನೂ ವಸ್ತ್ರ ಮೋಹಿ. ನನಗೆ ಹತ್ತಿಯಿಂದ ತಯಾರಾದ ಬಟ್ಟೆಗಳು, ಸೀರೆ ಉಡುವುದೆಂದರೆ ಇಷ್ಟ. ನಾನು ತೊಡುವುದು ಕೇವಲ ಭಾರತೀಯ ಉಡುಪುಗಳನ್ನು ಮಾತ್ರ. ಅಪರೂಪಕ್ಕೊಮ್ಮೆ ಜೀನ್ಸ್ ತೊಟ್ಟಿದ್ದೂ ಇದೆ. ನನಗಿಷ್ಟವಾಗಿದ್ದನ್ನು ನಾನು ತೊಡುತ್ತೇನೆ. ಇದೇ ಇತ್ತೀಚಿನ ದಿನಗಳಲ್ಲಿ ನನ್ನಲ್ಲಾದ ಬದಲಾವಣೆ.ಪಂಜಾಬಿ ಮಹಿಳೆಯಾಗಿ `ಘನಚಕ್ಕರ್'ನಲ್ಲಿ ಕಾಣಿಸಿಕೊಂಡಿದ್ದೀರಿ. ದಕ್ಷಿಣ ಭಾರತೀಯರಾದ ನಿಮಗೆ ಭಾಷೆ ಮೇಲಿನ ಹಿಡಿತ ಹೇಗೆ ಸಾಧ್ಯವಾಯಿತು?

ಪಂಜಾಬಿ ಬಹಳ ಗಡುಸಾದ ಭಾಷೆ. ಅದನ್ನು ಉಚ್ಚರಿಸುವಾಗ ನಮ್ಮ ದೇಹ ಭಾಷೆಯೂ ಬದಲಾಗಿರುತ್ತದೆ. ಅಂಥ ಪಾತ್ರ ನಿರ್ವಹಿಸುವಾಗ ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ ಎಂಬ ಭಾವದ ಬದಲಾವಣೆ ನನ್ನಲ್ಲಾಗಿದೆ.ಕುಟುಂಬ, ಸಿನಿಮಾ ಎರಡನ್ನೂ ಹೇಗೆ ನಿರ್ವಹಿಸುತ್ತಿದ್ದೀರಿ?

ಮನೆಯಲ್ಲಿ ನನಗೆ ಸಹಕರಿಸಲು ಮಂದಿ ಇದ್ದಾರೆ. ಮನೆ ಶುಚಿಯಾಗಿಡಲು, ಅಡುಗೆ ಮಾಡಲು ಜನರಿದ್ದಾರೆ. ಹೀಗಾಗಿ ನನ್ನ ಕೆಲಸ ಸುಲಭವಾಗಿದೆ. ಆದರೆ ಕುಟುಂಬದ ನಿರ್ವಹಣೆಯ ಮೇಲುಸ್ತುವಾರಿಯನ್ನು ಮಾತ್ರ ನಾನು ಮಾಡುತ್ತಿದ್ದೇನೆ.ಯುಟಿವಿ ನಿರ್ಮಾಪಕರನ್ನು ವಿವಾಹವಾಗಿದ್ದೀರಿ. ಸಿನಿಮಾ ನಿರ್ಮಾಣಕ್ಕೆ ಕೈಹಾಕುವ ಇರಾದೆ ಇದೆಯೇ?

ಖಂಡಿತಾ ಇಲ್ಲ. ನನಗೆ ಸಂಖ್ಯೆಗಳು ಅರ್ಥವಾಗುವುದಿಲ್ಲ. ಹಾಗೆಯೇ ಹಣದ ನಿರ್ವಹಣೆ ಕುರಿತು ಹೆಚ್ಚಿನ ಜ್ಞಾನ ಇಲ್ಲ. ಹೀಗಾಗಿ ನಾನು ನಟಿಯಾಗಿಯೇ ಸಂತೋಷವಾಗಿದ್ದೇನೆ.ಬೆಂಗಳೂರಿನಲ್ಲಿ ಇದ್ದ ನಿಮ್ಮ ಅನುಭವ?

ನೃತ್ಯ ಕಲಿಯಲು ಇಲ್ಲಿ ಕೆಲ ಕಾಲ ಇದ್ದೆ. ಇಲ್ಲೇ ನನ್ನ ಸಂಬಂಧಿಯೊಬ್ಬರ ಮನೆಯಿತ್ತು. ಕೋಷಿಸ್, ಭೀಮಾಸ್ ಮುಂತಾದ ರೆಸ್ಟೋರೆಂಟ್‌ಗಳಲ್ಲಿ ಕಳೆದ ಕ್ಷಣಗಳು, ರೆಕ್ಸ್ ಚಿತ್ರ ಮಂದಿರದಲ್ಲಿ ನೋಡಿದ ಚಿತ್ರಗಳನ್ನು ನಾನಿನ್ನೂ ಮರೆತಿಲ್ಲ.ಬೆಂಗಳೂರು ಹೊರತುಪಡಿಸಿ ನೀವು ಇಷ್ಟಪಡುವ ಮತ್ತೊಂದು ನಗರ?

ಕೊಲ್ಕತ್ತಾ. ಬೆಂಗಳೂರು ಗಾರ್ಡನ್ ಸಿಟಿ ಹೌದು. ಆದರೆ ಕೊಲ್ಕತ್ತಾದೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ನಾನು ಚಿತ್ರರಂಗದಲ್ಲಿನ ಮೊದಲ ಹೆಜ್ಜೆಗಳನ್ನು ಇಟ್ಟಿದ್ದು ಅಲ್ಲಿ. `ಪರಿಣಿತಾ', `ಭೂಲ್‌ಬುಲಯ್ಯ', `ಕಹಾನಿ', `ನೋ ಒನ್ ಕಿಲ್ಡ್ ಜೆಸಿಕಾ' ಚಿತ್ರಗಳಲ್ಲಿ ಬಂಗಾಳದ ಎಳೆ ಇದ್ದೇ ಇದೆ. ಆ ಭಾಷೆ ನನಗೆ ಬಹಳ ಇಷ್ಟ.ರಿತುಪರ್ಣೊ ಅವರೊಂದಿಗೆ ನಟಿಸುವ ಆಸೆ ಕನಸಾಗಿಯೇ ಉಳಿಯಿತಲ್ಲಾ?

ಹೌದು, ಕಳೆದ ಎಂಟು ವರ್ಷಗಳಿಂದ ಅವರ ಚಿತ್ರಗಳಲ್ಲಿ ನಟಿಸಬೇಕೆಂಬ ಯೋಜನೆ ಅದೇಕೋ ಕೈಗೂಡಲಿಲ್ಲ. ಪ್ರತಿವರ್ಷ ಹೊಸ ಕಥೆಯೊಂದಿಗೆ ಅವರು ನನ್ನನ್ನು ಕರೆಯುತ್ತಿದ್ದರು. ಆದರೆ ನನ್ನ ದಿನಾಂಕಗಳು ಹೊಂದಾಣಿಕೆಯಾಗುತ್ತಿರಲಿಲ್ಲ. ಅಷ್ಟರೊಳಗೆ ಅವರು ಹೋಗಿಬಿಟ್ಟರು.ಮದುವೆ ಆಯಿತು. ಮಕ್ಕಳು?

ಅಯ್ಯೋ ಇಷ್ಟು ಬೇಗ ಬೇಡಪ್ಪಾ.ಸ್ಯಾಂಡಲ್‌ವುಡ್‌ಗೆ ಬರುವ ಇರಾದೆ ಇದೆಯೇ?

ಸ್ಯಾಂಡಲ್‌ವುಡ್ ಬಹಳ ಫೇಮಸ್ ಅಲ್ವಾ. ಅದು ಬೆಂಗಳೂರಿನಲ್ಲಿ ಹೆಚ್ಚು ಸಿಗುತ್ತದೆ ನನಗೆ ಗೊತ್ತು ಎಂದರು.

(`ಸ್ಯಾಂಡಲ್‌ವುಡ್' ಎಂದರೆ ಕನ್ನಡ ಚಿತ್ರರಂಗಕ್ಕೆ ಕರೆಯುವ ಹೆಸರು ಎಂದು ಮನವರಿಕೆ ಮಾಡಿಕೊಟ್ಟ ನಂತರ) ಹೌದಾ... ಖಂಡಿತಾ ಅದು ನನಗೆ ಗೊತ್ತಿರಲಿಲ್ಲ. ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ಸೌಂದರ್ಯ ಅವರು ಅಪಘಾತದಲ್ಲಿ ಹೋಗುವ ಮೊದಲು ಬಂದ `ದ್ವೀಪ' ಚಿತ್ರವನ್ನು ನೋಡಿದ್ದೆ. ಅದ್ಭುತ ಸಿನಿಮಾ. ಗಿರೀಶ್ ಕಾಸರವಳ್ಳಿ ಬಹಳ ಉತ್ತಮವಾಗಿ ಆ ಚಿತ್ರವನ್ನು ತೆರೆಮೇಲೆ ತಂದಿದ್ದಾರೆ.ಮೇಡಂ ತಲೆ ಕೆಡಿಸಿಕೊಂಡಿದ್ದಾರೆ

`ಘನಚಕ್ಕರ್' ಕುರಿತು ವಿದ್ಯಾ ತೀರಾ ಉತ್ಸಾಹದಿಂದ ಇದ್ದರು. ನೆರೆದಿದ್ದ ಹತ್ತಾರು ಪತ್ರಕರ್ತರೊಂದಿಗೆ ಬೆರೆತು ಗಂಟೆಗಟ್ಟಲೆ ಮಾತನಾಡಿದರೂ ಅವರನ್ನು ದಣಿವು ಆವರಿಸಿರಲಿಲ್ಲ. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದು ಅವರ ಸಹಾಯಕ ಶಾಲಿವಾಹನ. `ಚಿತ್ರಕ್ಕೆ ವಿದ್ಯಾ ಅವರ ಯಜಮಾನ್ರು ಹಣ ಹಾಕಿದ್ದಾರೆ. ಹೀಗಾಗಿ ಮೇಡಂ ತುಂಬಾ ತಲೆ ಕೆಡಿಸಿಕೊಂಡಿದ್ದಾರೆ' ಎಂದು ಶಾಲಿವಾಹನ ಪಿಸುಗುಟ್ಟಿದರು.ಚಿತ್ರಗಳು: ಬಿ.ಎಚ್. ಶಿವಕುಮಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.