ಭಾನುವಾರ, ಮೇ 22, 2022
23 °C

ವಿದ್ಯುತ್ ಕಡಿತ: ನಾಳೆ ಅಧಿಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಇನ್ನೂ ತಿಂಗಳ ಕಾಲ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಲೋಡ್‌ಶೆಡ್ಡಿಂಗ್ ವೇಳಾಪಟ್ಟಿಯನ್ನು ಸೋಮವಾರದ ನಂತರ ಪ್ರಕಟಿಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಇಲ್ಲಿ ತಿಳಿಸಿದರು.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲಿದ್ದಲು ಕೊರತೆ ಇರುವುದರಿಂದ ಲೋಡ್‌ಶೆಡ್ಡಿಂಗ್ ಅನಿವಾರ್ಯವಾಗಿದೆ. ಇದೇ 14ರಂದು ರಾಜ್ಯದ ನಿಯೋಗವು ನವದೆಹಲಿಗೆ ತೆರಳಿ ವಿದ್ಯುತ್ ಹಾಗೂ ಕಲ್ಲಿದ್ದಲು ಪೂರೈಸುವಂತೆ ಕೇಂದ್ರದ ಇಂಧನ ಸಚಿವ ಸುಶೀಲ್‌ಕುಮಾರ್ ಶಿಂಧೆ, ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರಿಗೆ ಮನವಿ ಸಲ್ಲಿಸಲಿದೆ ಎಂದರು.ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಸಿಂಗರೇಣಿಯಿಂದ ಕಲ್ಲಿದ್ದಲು ಪೂರೈಕೆಗೆ ತೊಂದರೆಯಾಗಿದೆ. ಆದ್ದರಿಂದ ಮಹಾರಾಷ್ಟ್ರದ ನಾಗಪುರ, ಒಡಿಶಾದಿಂದ ಕಲ್ಲಿದ್ದಲು ತರಿಸಿಕೊಳ್ಳಲು ರೈಲ್ವೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು. ಕಲ್ಲಿದ್ದಲು ಪೂರೈಕೆ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳಿದೆ ಎಂದೂ ಟೀಕಿಸಿದರು.ರಾಯಚೂರು ಮತ್ತು ಬಳ್ಳಾರಿಯ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಹಾಗೂ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ಯೋಜನೆಗಳಿಗೆ ಕಲ್ಲಿದ್ದಲು ಕೊರತೆ ಇದೆ. ಹೊಸ ಯೋಜನೆಗಳಿಗೆ ಕೇಂದ್ರ ಇನ್ನೂ ಕಲ್ಲಿದ್ದಲು ಹಂಚಿಕೆ ಮಾಡಿಲ್ಲ. ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಯ ತೀವ್ರತೆ ಅರಿತು ಆದಷ್ಟು ಬೇಗ ರಾಜ್ಯಕ್ಕೆ ಹೆಚ್ಚಿನ ಕಲ್ಲಿದ್ದಲು ಪೂರೈಸಬೇಕು ಎಂದು ಅವರು ಆಗ್ರಹಿಸಿದರು.ಸದ್ಯ ಅನಿಯಮಿತವಾಗಿ ಪದೇ ಪದೇ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ದಿನಕ್ಕೆ ಎಷ್ಟು ಗಂಟೆ, ಯಾವ ವೇಳೆ ಕಡಿತ ಮಾಡಲಾಗುತ್ತದೆ ಎಂಬ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ಆದರೆ ಅಧಿಕೃತ ಲೋಡ್‌ಶೆಡ್ಡಿಂಗ್ ಎಂದಿನಿಂದ ಜಾರಿಯಾಗಲಿದೆ ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.ಹಂಚಿಕೆಯಾಗದ ಕೋಟಾದಿಂದ ನಿತ್ಯ 500 ಮೆಗಾವಾಟ್ ವಿದ್ಯುತ್ ಹಾಗೂ ಹತ್ತು ಸಾವಿರ ಟನ್ ಕಲ್ಲಿದ್ದಲು ಪೂರೈಸುವಂತೆ ಈಗಾಗಲೇ ಕೇಂದ್ರದ ಇಂಧನ ಮತ್ತು ಕಲ್ಲಿದ್ದಲು ಸಚಿವರಿಗೆ ಪತ್ರ ಬರೆಯಲಾಗಿದೆ. ಆದರೆ ಕೇಂದ್ರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ ಎಂದು ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯದ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಆದಷ್ಟು ಬೇಗ ಪೂರೈಕೆಯಲ್ಲಿ ಸುಧಾರಣೆಯಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.ಸ್ಥಗಿತ ಭೀತಿ ಇಲ್ಲ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಸದ್ಯ 1.15 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಿದೆ. ಇದಲ್ಲದೆ ನಿತ್ಯ 12ರಿಂದ 15 ಸಾವಿರ ಟನ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಮೂರು ವಾರ ನಿತ್ಯ ಐದು ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲು ಸಮಸ್ಯೆ ಆಗದು ಎಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತ್ರಿಪಾಠಿ `ಪ್ರಜಾವಾಣಿ~ಗೆ ತಿಳಿಸಿದರು.ನಿಗಮ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಿತ್ಯ ಸರಾಸರಿ 44 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿತ್ತು. ಆದರೆ ಈ ವರ್ಷ 68 ದಶಲಕ್ಷ ಯೂನಿಟ್‌ವರೆಗೂ ಉತ್ಪಾದನೆ ಮಾಡುತ್ತಿದೆ. ಶುಕ್ರವಾರ ನಾಲ್ಕು ರೇಕ್ ಕಲ್ಲಿದ್ದಲು ಪೂರೈಕೆಯಾಗಿದೆ. ತೆಲಂಗಾಣ ಹೋರಾಟದಿಂದ ಸ್ವಲ್ಪಮಟ್ಟಿಗೆ ಸಮಸ್ಯೆ ಆಗಿರುವುದು ನಿಜ. ಆದರೆ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಸ್ಥಿತಿ ಬರಲಾರದು ಎಂದರು.ಪೂರೈಕೆ: ಶುಕ್ರವಾರ ಗರಿಷ್ಠ 6,927 ಮೆಗಾವಾಟ್ ಮತ್ತು ಕನಿಷ್ಠ 5,049 ಮೆಗಾವಾಟ್ ವಿದ್ಯುತ್ ಪೂರೈಕೆಯಾಗಿದೆ. ಒಟ್ಟಾರೆ ಎಲ್ಲ ಮೂಲಗಳಿಂದ 146.32 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಸಲಾಗಿದೆ. ಇದರಲ್ಲಿ 47.55 ದಶಲಕ್ಷ ಯೂನಿಟ್ ಜಲವಿದ್ಯುತ್, 19.02 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿ ಮಾಡಿರುವುದಾಗಿದೆ.ಸದ್ಯಕ್ಕೆ ನಗರದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಸೋಮವಾರದ ಪರಿಸ್ಥಿತಿಯನ್ನು ನೋಡಿಕೊಂಡು ಲೋಡ್‌ಶೆಡ್ಡಿಂಗ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ರಾಜಧಾನಿಯಲ್ಲಿ ವಿದ್ಯುತ್ ಕಡಿತ ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ 4ರಿಂದ 5 ಗಂಟೆ ಮೂರು ಫೇಸ್ ಮತ್ತು 8 ಗಂಟೆಗೂ ಹೆಚ್ಚು ಕಾಲ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದೆ ಎಂದು `ಬೆಸ್ಕಾಂ~ ಅಧಿಕಾರಿಯೊಬ್ಬರು ತಿಳಿಸಿದರು.ಆರ್‌ಟಿಪಿಎಸ್: 5 ಘಟಕಗಳಿಂದ 800ಮೆಗಾವಾಟ್ ಉತ್ಪಾದನೆ

ರಾಯಚೂರು:
ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 8 ಘಟಕಗಳಲ್ಲಿ ಐದು ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಶನಿವಾರವೂ ಮುಂದುವರಿದಿದೆ. ತಾಂತ್ರಿಕ ಸಮಸ್ಯೆಯಿಂದ 3, 4 ಹಾಗೂ 8ನೇ ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ.ಜಪಾನ್ ತಂತ್ರಜ್ಞಾನದಿಂದ ನಿರ್ಮಾಣಗೊಂಡ 4ನೇ ಘಟಕದ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಭಾನುವಾರ ಸಂಜೆ ಉತ್ಪಾದನೆ ಆರಂಭಗೊಳ್ಳುವ ನಿರೀಕ್ಷೆ ಇದೆ. 210 ಮೆಗಾವಾಟ್‌ನ ಈ ಘಟಕ  ಆರಂಭಗೊಂಡರೆ ಕನಿಷ್ಠ 160ರಿಂದ 180 ಮೆಗಾವಾಟ್ ವಿದ್ಯುತ್ ರಾಜ್ಯಕ್ಕೆ ಲಭ್ಯ ಆಗಲಿದೆ.ಆರ್‌ಟಿಪಿಎಸ್ ಅಧಿಕಾರಿ ಹೇಳಿಕೆ: ವಿದ್ಯುತ್ ಉತ್ಪಾದನೆಯಲ್ಲಿ ಸುಧಾರಣೆ ಕಂಡು ಬಂದಿದ್ದು, ಸುಮಾರು 800 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಈಗ ವಿದ್ಯುತ್ ಉತ್ಪಾದಿಸುತ್ತಿರುವ 1, 2, 5, 6 ಮತ್ತು 7ನೇ ಘಟಕಗಳಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು ಆರ್‌ಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ `ಪ್ರಜಾವಾಣಿ~ಗೆ ತಿಳಿಸಿದರು.ಶುಕ್ರವಾರ ತಲಚೇರಿ ಮತ್ತು ವೆಸ್ಟ್ ಕೋಲ್ ಮೈನ್‌ನಿಂದ ಮೂರು ರೇಕ್ (ಒಂದು ರೇಕ್‌ನಲ್ಲಿ 3500 ಮೆಟ್ರಿಕ್ ಟನ್) ಸರಬರಾಜು ಆಗಿದೆ. ಸದ್ಯ ಆರ್‌ಟಿಪಿಎಸ್ ಕಲ್ಲಿದ್ದಲು ಸಂಗ್ರಹಾಗಾರದಲ್ಲಿ 1 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇದೆ. ಭಾನುವಾರ ಮೂರು ರೇಕ್ ಕಲ್ಲಿದ್ದಲು (10,500 ಮೆಟ್ರಿಕ್ ಟನ) ಪೂರೈಕೆ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.250 ಮೆಗಾವಾಟ್‌ನ 8ನೇ ಹೊಸ ಘಟಕ ಈವರೆಗೂ ಅಧಿಕೃತವಾಗಿ ವಿದ್ಯುತ್ ಉತ್ಪಾದನೆ ಆರಂಭಿಸಿಲ್ಲ. ಬಿಎಚ್‌ಇಎಲ್ ಕಂಪೆನಿ ತಂತ್ರಜ್ಞರು ಇನ್ನೂ ಈ ಘಟಕದಲ್ಲಿ ದುರಸ್ತಿ ಕಾರ್ಯ ಮುಂದುವರಿಸಿದ್ದಾರೆ.ನಾಲ್ಕೈದು ದಿನಗಳ ಹಿಂದೆ ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯತ್ತ ಹೆಜ್ಜೆ ಇರಿಸಿದ್ದ ಆರ್‌ಟಿಪಿಎಸ್‌ನ ಘಟಕಗಳು ಮತ್ತೆ ಅತಿಯಾದ ಒತ್ತಡ, ಹೆಚ್ಚಿನ ಲೋಡ್ ಕಾರಣದಿಂದ ಪುನಃ ತಾಂತ್ರಿಕ ಸಮಸ್ಯೆಗೆ ಸಿಲುಕಿವೆ.

ಸಿಂಗರೇಣಿ ಕಲ್ಲಿದ್ದಲು ಪೂರೈಕೆ ಆರ್‌ಟಿಪಿಎಸ್‌ಗೆ ಸದ್ಯಕ್ಕೆ ಮರೀಚಿಕೆ ಎಂಬಂತಾಗಿದೆ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.