ಶುಕ್ರವಾರ, ಮೇ 27, 2022
21 °C

ವಿದ್ಯುತ್ ಖರೀದಿಗೆ ನಿತ್ಯ ರೂ12 ಕೋಟಿ!

ಪ್ರಜಾವಾಣಿ ವಾರ್ತೆ ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಪ್ರತಿನಿತ್ಯ ಸುಮಾರು 1,500 ಮೆಗಾವಾಟ್ ವಿದ್ಯುತ್ ಖರೀದಿಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರತಿದಿನ ಸುಮಾರು 12 ಕೋಟಿ ರೂಪಾಯಿ ವೆಚ್ಚವಾಗಲಿದೆ.ಈ ಮುಂಚೆ ಖರೀದಿಸುತ್ತಿದ್ದ 630 ಮೆಗಾವಾಟ್ ಸೇರಿದಂತೆ ಅಕ್ಟೋಬರ್‌ನಲ್ಲಿ ಸುಮಾರು 1,500 ಮೆಗಾವಾಟ್ ಖರೀದಿಸಲು ತೀರ್ಮಾನಿಸಿದ್ದು, 1,200 ಮೆಗಾವಾಟ್ ವಿದ್ಯುತ್ ಶನಿವಾರವೇ ಪೂರೈಕೆಯಾಗಿದೆ. ಉಳಿದ ವಿದ್ಯುತ್ ಒಂದೆರಡು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ರವಿಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.`ಈ ವರ್ಷ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಾಗಿದೆ. ಕಲ್ಲಿದ್ದಲು ಕೊರತೆ ಉಂಟಾಗಿದೆ. ಹೀಗಾಗಿ ಸೆಪ್ಟೆಂಬರ್‌ನಿಂದಲೇ ಅಧಿಕ ಪ್ರಮಾಣದಲ್ಲಿ ವಿದ್ಯುತ್ ಖರೀದಿ ಮಾಡಬೇಕಾಯಿತು. ಇದುವರೆಗೆ ಜಿಂದಾಲ್‌ನಿಂದ 630 ಮೆಗಾವಾಟ್ ವಿದ್ಯುತ್ ಅನ್ನು ಯೂನಿಟ್‌ಗೆ ರೂ 4.26 ದರದಲ್ಲಿ ಖರೀದಿ ಮಾಡಲಾಗುತ್ತಿತ್ತು. ಆದರೂ ಕೊರತೆ ನೀಗಿಸಲು ಸಾಧ್ಯವಾಗದ ಕಾರಣ ಖರೀದಿ ಪ್ರಮಾಣವನ್ನು ಹೆಚ್ಚಿಸಲಾಗಿದೆ~ ಎಂದರು.`ಹೆಚ್ಚು ಬೇಡಿಕೆ ಇರುವ ಅವಧಿಯಲ್ಲಿ (ಬೆಳಿಗ್ಗೆ 7ರಿಂದ 10 ಮತ್ತು ಸಂಜೆ 7ರಿಂದ ರಾತ್ರಿ 10ರ ವರೆಗೆ) ಯೂನಿಟ್‌ಗೆ ರೂ 5.87 ದರದಲ್ಲಿ 520 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತದೆ. ಯೂನಿಟ್‌ಗೆ ರೂ 4.26ರ ದರದಲ್ಲಿ ಛತ್ತೀಸಗಡದಿಂದ 200 ಮೆಗಾವಾಟ್ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದ್ದು, ಶನಿವಾರ 50 ಮೆಗಾವಾಟ್ ಲಭ್ಯವಾಗಿದೆ. ಉಳಿದ 150 ಮೆಗಾವಾಟ್ ವಿದ್ಯುತ್ ಒಂದೆರಡು ದಿನಗಳಲ್ಲಿ ಲಭ್ಯವಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಛತ್ತೀಸಗಡ ಮುಖ್ಯಮಂತ್ರಿ ಡಾ.ರಮಣಸಿಂಗ್ ಅವರೊಂದಿಗೆ ಶನಿವಾರ ನವದೆಹಲಿಯಲ್ಲಿ ಚರ್ಚೆ ನಡೆಸಿದ್ದಾರೆ~ ಎಂದು ಅವರು ವಿವರಿಸಿದರು.ಇದಲ್ಲದೆ `ಲ್ಯಾಂಕೊ~ದಿಂದ ಯೂನಿಟ್‌ಗೆ ರೂ 4.29 ದರದಲ್ಲಿ 150 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತಿದ್ದು, ಶನಿವಾರ 170 ಮೆಗಾವಾಟ್ ಪೂರೈಕೆಯಾಗಿದೆ. ವಿದ್ಯುತ್ ವಿನಿಮಯ ಕೇಂದ್ರ, ಪವರ್ ಟ್ರೇಡಿಂಗ್ ಕಾರ್ಪೊರೇಷನ್, ಛತ್ತೀಸಗಡ ಸೇರಿದಂತೆ ವಿವಿಧ ಮೂಲಗಳಿಂದ ಯೂನಿಟ್‌ಗೆ ರೂ. 4.26ರಿಂದ ರೂ. 5.87 ದರದಲ್ಲಿ ಖರೀದಿ ಮಾಡುತ್ತಿದ್ದು, ಪ್ರತಿ ಯೂನಿಟ್‌ಗೆ ಸರಾಸರಿ ರೂ. 4.75 ವೆಚ್ಚ ಬೀಳಲಿದೆ.ಗ್ರಾಹಕರಿಗೆ ಹೊರೆ: `ವಿದ್ಯುತ್ ಖರೀದಿಗೆ ತಗಲುವ ವೆಚ್ಚವನ್ನು ಸದ್ಯಕ್ಕೆ ಎಲ್ಲ ಎಸ್ಕಾಂಗಳು ಭರಿಸಲಿವೆ. ಆದರೆ, ಬರುವ ದಿನಗಳಲ್ಲಿ ಇದರ ಹೊರೆ ನೇರವಾಗಿ ಗ್ರಾಹಕರ ಮೇಲೆ ಬೀಳಲಿದೆ. ಖರೀದಿ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷ ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವ ಸಲ್ಲಿಸಲಾಗುವುದು~ ಎಂದು ಅವರು ಹೇಳಿದರು.`ಖರೀದಿಗೆ ತಗಲುವ ವೆಚ್ಚವನ್ನು ಆಧರಿಸಿ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವನ್ನು ಕೋರುತ್ತೇವೆ. ಈ ವರ್ಷದ ಪ್ರಸ್ತಾವವನ್ನು ಈಗಾಗಲೇ ಸಲ್ಲಿಸಲಾಗಿದ್ದು, ಅದರಲ್ಲಿ ಮತ್ತೆ ಬದಲಾವಣೆ ಮಾಡುವಂತೆ ಕೇಳುವುದಿಲ್ಲ. ಆದರೆ ಮುಂದಿನ ವರ್ಷ ಸಲ್ಲಿಸುವ ಪ್ರಸ್ತಾವದಲ್ಲಿ ವಿದ್ಯುತ್ ಖರೀದಿಗಾಗಿ ಮಾಡಿರುವ ವೆಚ್ಚವೂ ಸೇರಿರುತ್ತದೆ. ಸಾರ್ವಜನಿಕರ ಹಣದಲ್ಲೇ ಖರೀದಿ ಮಾಡಿ, ಜನರಿಗೆ ವಿದ್ಯುತ್ ನೀಡುತ್ತೇವೆ~ ಎಂಬುದು ಅವರ ವಿವರಣೆ.`ಗುರುವಾರ ವಿದ್ಯುತ್ ವಿನಿಮಯ ಕೇಂದ್ರದಿಂದ ಯೂನಿಟ್‌ಗೆ ರೂ 9 ದರದಲ್ಲಿ ಖರೀದಿಸಲಾಗಿತ್ತು. ಶುಕ್ರವಾರ 12 ರೂಪಾಯಿ ನೀಡುತ್ತೇವೆ ಎಂದರೂ ಸಿಗಲಿಲ್ಲ. ವಿನಿಮಯ ಕೇಂದ್ರದಿಂದ ವಿದ್ಯುತ್ ಖರೀದಿಸಲು ನಿತ್ಯ ಐದರಿಂದ ಹತ್ತು ಕೋಟಿ ರೂಪಾಯಿ ವೆಚ್ಚವಾಗುತ್ತದೆ. ವಿನಿಮಯ ಕೇಂದ್ರದಿಂದ ಬೇರೆ ರಾಜ್ಯಗಳೂ ವಿದ್ಯುತ್ ಖರೀದಿ ಮಾಡುತ್ತಿರುವುದರಿಂದ ಬಿಡ್‌ನಲ್ಲಿ ಪೈಪೋಟಿ ನಡೆಸಬೇಕಾಗುತ್ತದೆ. ಕೆಲವೊಮ್ಮೆ ಹೆಚ್ಚಿನ ದರದಲ್ಲಿ ಖರೀದಿ ಮಾಡಲು ಮುಂದಾದರೂ, ವಿದ್ಯುತ್ ಲಭ್ಯವಾಗುವುದಿಲ್ಲ~ ಎಂದರು.ವಿದ್ಯುತ್ ಜಾಲದ ಸಮಸ್ಯೆ: ಕರ್ನಾಟಕ ಸೇರಿದಂತೆ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ದಕ್ಷಿಣ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಲು ಉತ್ತರ ಭಾರತದ ಹಲವು ರಾಜ್ಯಗಳು ಮುಂದಾಗಿವೆ. ಆದರೆ ವಿದ್ಯುತ್ ಜಾಲದ ಸಮಸ್ಯೆಯಿಂದಾಗಿ ಎಲ್ಲ ಸಮಯದಲ್ಲೂ ಪಡೆಯಲು ಸಾಧ್ಯವಾಗುತ್ತಿಲ್ಲ. ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕ ಕಲ್ಪಿಸಲು ತಲಚೇರ್ ಮತ್ತು ರಾಮಗುಂಡಂ ಮಾರ್ಗಗಳು ಮಾತ್ರ ಇವೆ. ಈ ಎರಡು ಮಾರ್ಗಗಳಲ್ಲಿಯೇ ಕೇರಳ, ತಮಿಳುನಾಡು ರಾಜ್ಯಗಳು ವಿದ್ಯುತ್ ಪಡೆಯುತ್ತಿರುವುದರಿಂದ ಕೆಲವೊಮ್ಮೆ ಕರ್ನಾಟಕಕ್ಕೆ ವಿದ್ಯುತ್ ಜಾಲದ ಸಮಸ್ಯೆ ಉಂಟಾಗುತ್ತಿದೆ.ಬೇಸಿಗೆಯಲ್ಲಿ ಮತ್ತಷ್ಟು ಬೇಡಿಕೆ: ಸೆಪ್ಟೆಂಬರ್‌ನಲ್ಲಿ ನಿತ್ಯ 136 ದಶಲಕ್ಷ ಯೂನಿಟ್ ಬೇಡಿಕೆ ಇರುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಬೇಡಿಕೆ ಪ್ರಮಾಣ 160ರಿಂದ 165 ದಶಲಕ್ಷ ಯೂನಿಟ್‌ಗೆ ತಲುಪಿತ್ತು. ಇದನ್ನು ಗಮನಿಸಿದರೆ ಬೇಸಿಗೆಯಲ್ಲಿ ಬೇಡಿಕೆ ಪ್ರಮಾಣ 190 ದಶಲಕ್ಷ ಯೂನಿಟ್‌ಗೂ ಹೆಚ್ಚಾಗುವ ನಿರೀಕ್ಷೆ ಇದೆ.ಸಾಮಾನ್ಯವಾಗಿ ಬೇಡಿಕೆ ಪ್ರಮಾಣ ವರ್ಷಕ್ಕೆ ಶೇ 8ರಷ್ಟು ಹೆಚ್ಚಾಗುತ್ತದೆ. ಆದರೆ ಎಲ್ಲ ಲೆಕ್ಕಾಚಾರಗಳನ್ನು ಮೀರಿ ಈ ಬಾರಿ ಜಾಸ್ತಿಯಾಗಿದೆ. ಸೆಪ್ಟೆಂಬರ್ ಎರಡನೇ ವಾರದ ನಂತರ ಮಳೆಯಾಗದೆ ಇರುವುದರಿಂದ ರೈತರು ಪಂಪ್‌ಸೆಟ್‌ಗಳನ್ನು ಚಾಲನೆ ಮಾಡುತ್ತಿರುವುದು ಹಾಗೂ ಬಿಸಿಲಿನ ತಾಪ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣ. ಹೊಸ ಸಂಪರ್ಕಗಳ ಸಂಖ್ಯೆಯೂ ಹೆಚ್ಚಾಗಿರಬಹುದು ಎಂದು ರವಿಕುಮಾರ್ ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.