ಶುಕ್ರವಾರ, ಮೇ 27, 2022
25 °C

ವಿದ್ಯುತ್ ದುರುಪಯೋಗಕ್ಕೆ ಕಡಿವಾಣ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕಳ್ಳತನ, ಸೋರಿಕೆ, ದುರುಪಯೋಗ ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯ ಕಳೆದ ಮೂರು ವರ್ಷಗಳಿಂದ ಚುರುಕುಗೊಂಡಿದೆ. ಆದರೂ ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.ರಾಜ್ಯದಲ್ಲಿ 1.78 ಕೋಟಿ ವಿದ್ಯುತ್ ಸಂಪರ್ಕಗಳಿವೆ. 1999-2000ನೇ ಸಾಲಿನಿಂದ ಕಳೆದ ಆಗಸ್ಟ್‌ವರೆಗೆ ಸುಮಾರು 24.54 ಲಕ್ಷ ವಿದ್ಯುತ್ ಸಂಪರ್ಕಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 4,04,755 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಕಳ್ಳತನ ಮಾಡಿದವರಿಗೆ 567.91 ಕೋಟಿ ರೂಪಾಯಿ ದಂಡ ಹಾಕಲಾಗಿದೆ. ಆದರೆ ದಂಡ ಕಟ್ಟಲು ನಿರಾಕರಿಸಿದ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.ಇದುವರೆಗೆ ಪತ್ತೆಯಾಗಿರುವ ಕಳ್ಳತನ ಪ್ರಕರಣಗಳ ಆಧಾರದ ಮೇಲೆ ಒಟ್ಟಾರೆ ಶೇ 15ಕ್ಕೂ ಹೆಚ್ಚು ವಿದ್ಯುತ್ ಕಳ್ಳತನ ಪ್ರಕರಣಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರತಿ ತಿಂಗಳು 40ರಿಂದ 50 ಸಾವಿರ ಸಂಪರ್ಕಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಸುಮಾರು ಎಂಟು ಸಾವಿರ ಕಳ್ಳತನ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಇಂಧನ ಇಲಾಖೆಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವುದಕ್ಕಾಗಿಯೇ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಜಾಗೃತ ದಳವನ್ನು ರಚಿಸಿದೆ. ವಿದ್ಯುತ್ ಸರಬರಾಜು ಕಂಪೆನಿಗಳಲ್ಲೂ ಪ್ರತ್ಯೇಕವಾದ ಜಾಗೃತ ದಳಗಳಿವೆ. ಇದಲ್ಲದೆ ಪ್ರತಿ ಜಿಲ್ಲೆಯಲ್ಲೂ ವಿದ್ಯುತ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳ ದಾಖಲೆಗೆ ಪ್ರತ್ಯೇಕ ಪೊಲೀಸ್ ಠಾಣೆ ಮತ್ತು ಆ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯಗಳಿವೆ.ಮೊದಲ ಬಾರಿಗೆ ವಿದ್ಯುತ್ ಕಳ್ಳತನ ಪ್ರಕರಣ ಪತ್ತೆಯಾದಾಗ ದಂಡ ಹಾಕುವುದರ ಜೊತೆಗೆ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗುತ್ತದೆ. ನಂತರ ದಂಡದ ಅರ್ಧದಷ್ಟು ಹಣವನ್ನು ಪಾವತಿಸಿದರೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಿ ಸಂಪರ್ಕವನ್ನು ಕಡಿತಗೊಳಿಸಿದ ನಂತರವೂ ಮತ್ತೆ ಕಳ್ಳತನ ಮಾಡಿದರೆ, ಸಂಪರ್ಕ ಕಡಿತಗೊಳಿಸುವುದಷ್ಟೇ ಅಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ.ಸಾಮಾನ್ಯವಾಗಿ ವಿದ್ಯುತ್ ಕಳ್ಳತನ ಪ್ರಕರಣಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜಾಸ್ತಿ ಇವೆ. ರಾಜ್ಯದ ಐದು ವಿದ್ಯುತ್ ಕಂಪೆನಿಗಳ ವ್ಯಾಪ್ತಿಯಲ್ಲೂ ಈ ಹಾವಳಿ ಇದೆ. ವೈನ್‌ಶಾಪ್, ಐಸ್‌ಕ್ಯಾಂಡಿ ಫ್ಯಾಕ್ಟರಿ, ಜಾಹೀರಾತು ಫಲಕಗಳು, ಫಾರ್ಮ್ ಹೌಸ್, ಹಿಟ್ಟಿನ ಗಿರಣಿ ಇತ್ಯಾದಿಗಳಲ್ಲಿ ಕಳ್ಳತನ ಪ್ರಕರಣಗಳು ಪತ್ತೆಯಾಗುತ್ತಿವೆ. ವಿದ್ಯುತ್ ಮಾಪಕವನ್ನು ಬೈಪಾಸ್ ಮಾಡುವುದು, ಮೀಟರ್‌ನಲ್ಲಿ ರಂಧ್ರಗಳನ್ನು ಕೊರೆಯುವ ಮೂಲಕ ವಿದ್ಯುತ್ ಕಳ್ಳತನ ಮಾಡಿರುವ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ಪ್ರಕರಣಗಳು ಕಡಿಮೆ. ರೈತರು ಅನಧಿಕೃತವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ ಎಂಬ ದೂರುಗಳಿವೆ. ಆದರೆ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ನೀಡುವುದರಿಂದ ಅನಧಿಕೃತವಾಗಿ ಸಂಪರ್ಕ ಪಡೆದುಕೊಂಡಿದ್ದರೂ, ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದಿಲ್ಲ. ವಿದ್ಯುತ್ ಪರಿವರ್ತಕಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಅಷ್ಟೇ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಇರುವುದಿಲ್ಲ. ಹೀಗಾಗಿ ಕಳ್ಳತನ ಪ್ರಕರಣಗಳು ಕಡಿಮೆ. ಹೆಚ್ಚೆಂದರೆ ಗೃಹ ಬಳಕೆಗೆ ಪಡೆದಿರುವ ಸಂಪರ್ಕವನ್ನೇ ಕೊಟ್ಟಿಗೆ, ಅಂಗಡಿ ಇನ್ನಿತರ ಬಳಕೆಗೂ ವಿಸ್ತರಿಸಿಕೊಳ್ಳಬಹುದು ಅಷ್ಟೇ.ಆದರೆ ನಗರಗಳಲ್ಲಿ ಪರಿಸ್ಥಿತಿ ಹಾಗಿರುವುದಿಲ್ಲ. ಬಹುತೇಕ ದಿನಪೂರ್ತಿ ವಿದ್ಯುತ್ ಪೂರೈಕೆ ಇರುವುದರಿಂದ ಕಳ್ಳತನ ಪ್ರಕರಣಗಳೂ ಜಾಸ್ತಿ ಇರುತ್ತವೆ. ಕಳ್ಳತನದ ಪ್ರಮಾಣವನ್ನು ಆಧರಿಸಿ ದಂಡ ವಿಧಿಸಿ ಸಂಪರ್ಕವನ್ನು ರದ್ದುಪಡಿಸುವ ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ನಿರ್ಧರಿಸಲಾಗುತ್ತದೆ.ಕಳ್ಳತನ ಪ್ರಮಾಣವನ್ನು ಆಧರಿಸಿ  25 ಸಾವಿರದಿಂದ ಐದು ಲಕ್ಷ ರೂಪಾಯಿಗೂ ಅಧಿಕ ದಂಡ ವಿಧಿಸಲಾಗುತ್ತದೆ. ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯ ಮೊದಲಿನಿಂದಲೂ ನಡೆಯುತ್ತಿದೆ. ಆದರೆ 2008ರಿಂದ ಈಚೆಗೆ ಸ್ವಲ್ಪಮಟ್ಟಿಗೆ ವೇಗ ಪಡೆದುಕೊಂಡಿದೆ.ಜಾಗೃತದಳಕ್ಕೆ ಮೊದಲು ಪೊಲೀಸ್ ಮಹಾನಿರೀಕ್ಷಕರು ಇರಲಿಲ್ಲ. ಆದರೆ ಮೂರು ವರ್ಷಗಳ ಹಿಂದೆ ಮಹಾನಿರೀಕ್ಷಕರ ನೇಮಕವಾಗಿದ್ದು, ತಪಾಸಣೆಗೆ ಒಳಪಡಿಸುವ ಸಂಪರ್ಕಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ ಎಂಬುದಾಗಿ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.