ಸೋಮವಾರ, ಮೇ 17, 2021
23 °C
3 ಆರೋಪಿಗಳ ಬಂಧನ: ಇಬ್ಬರು ಪರಾರಿ

ವಿದ್ಯುತ್ ಹರಿಸಿ ವನ್ಯಜೀವಿ ಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕಾಡಂಚಿನ ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗಗಳಿಂದ ಜಿಂಕ್ ವೈರ್ ಬಳಸಿಕೊಂಡು ಅರಣ್ಯದೊಳಗೆ ವಿದ್ಯುತ್ ಹರಿಸಿ ವನ್ಯಜೀವಿಗಳ ಹತ್ಯೆಗೆ ಯತ್ನಿಸುತ್ತಿದ್ದ ಕಳ್ಳಬೇಟೆಗಾರರ ತಂಡದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ತಾಲ್ಲೂಕಿನ ಮೂಕನಪಾಳ್ಯ ಗ್ರಾಮದ ಶಿವರಾಜು, ಶಂಕರನಾಯ್ಕ, ರವಿನಾಯ್ಕ ಬಂಧಿತರು. ನಾಗನಾಯ್ಕ ಹಾಗೂ ಲಕ್ಷ್ಮಣ ಎಂಬುವರು ಪರಾರಿಯಾಗಿದ್ದಾರೆ. ಬಂಧಿತರಿಂದ 700 ಮೀಟರ್ ಜಿಂಕ್ ವೈರ್, ಬ್ಯಾಟರಿ, ಮಚ್ಚು, ಚೂರಿ ವಶಪಡಿಸಿಕೊಳ್ಳಲಾಗಿದೆ.ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ(ಬಿಆರ್‌ಟಿ) ಕೆ. ಗುಡಿ ವಲಯದ ರಾಮಣ್ಣದೊಡ್ಡಿಹಳ್ಳದ ಅರಣ್ಯ ಪ್ರದೇಶದಲ್ಲಿ ಕೃತ್ಯ ಎಸಗುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕಾಡಂಚಿನಲ್ಲಿ ವಿದ್ಯುತ್ ಮಾರ್ಗ ಹಾದುಹೋಗಿದೆ. ವಿದ್ಯುತ್ ಕಂಬಗಳಿಗೆ ಜಿಂಕ್ ವೈರ್ ಸಂಪರ್ಕ ಕಲ್ಪಿಸುತ್ತಿದ್ದರು. ಬಳಿಕ ಜಿಂಕ್ ವೈರ್ ಅನ್ನು ವನ್ಯಜೀವಿಗಳು ಸಂಚರಿಸುವ ಮಾರ್ಗದಲ್ಲಿ ಹಾಕುತ್ತಿದ್ದರು. ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಪ್ರಾಣಿಗಳ ಮಾಂಸ, ಚರ್ಮ ಮಾರಾಟದ ದಂಧೆಯಲ್ಲಿ ಆರೋಪಿಗಳು ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.ಆರೋಪಿ ಶಿವರಾಜು ಮೇಲೆ ಹುಲಿ ಕಳ್ಳಬೇಟೆಯೊಂದರ ಪ್ರಕರಣದಲ್ಲಿ ಭಾಗಿಯಾದ ಆರೋಪವಿದೆ. ರವಿನಾಯ್ಕ ಸಹೋದರ ಮಂಜುನಾಯ್ಕ ಎಂಬಾತ ಕೂಡ ಹುಲಿ ಕಳ್ಳಬೇಟೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಮಧ್ಯರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಸ್.ಎಸ್. ಲಿಂಗರಾಜ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಅನುಪಮಾ ಅವರ ಮಾರ್ಗದರ್ಶನದಡಿ ಕೆ. ಗುಡಿ ವಲಯ ಅರಣ್ಯ ಅಧಿಕಾರಿ ಎ.ಎ. ಖಾನ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.