ಗುರುವಾರ , ಮೇ 19, 2022
24 °C

ವಿದ್ಯೆಯಿಂದ ಅವಕಾಶಗಳ ಸೃಷ್ಟಿ: ಹೆಗ್ಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯೆಯಿಂದ ಅವಕಾಶಗಳ ಸೃಷ್ಟಿ: ಹೆಗ್ಗಡೆ

ಬೆಂಗಳೂರು:  `ಕಳೆದ 50 ವರ್ಷಗಳಲ್ಲಿ ದೇಶದಲ್ಲಿ ಅಗಾಧ ಪ್ರಗತಿ ಆಗಿದೆ. ಇದಕ್ಕೆ ಶಿಕ್ಷಣವೇ ಕಾರಣ. ವಿದ್ಯೆಯಿಂದ ಅವಕಾಶಗಳ ಸೃಷ್ಟಿ ಆಗುತ್ತದೆ' ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.ನಗರದ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಉಜಿರೆ ಎಸ್‌ಡಿಎಂ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.`ಶಿಕ್ಷಣದಿಂದ ದೇಶದಲ್ಲಿ ಸಾಕಷ್ಟು ಅವಕಾಶಗಳ ಸೃಷ್ಟಿ ಆಗಿದೆ. ಈಗ ಪ್ರೌಢಶಾಲೆಗೆ ತೆರಳಲು 100 ಕಿ.ಮೀ. ಕ್ರಮಿಸಬೇಕಿಲ್ಲ. ಐದು ಕಿ.ಮೀ.ಗೊಂದು ಪ್ರಾಥಮಿಕ ಶಾಲೆ, 15 ಕಿ.ಮೀ.ಗೊಂದು ಪ್ರೌಢಶಾಲೆ ಇದೆ. ಹಳ್ಳಿಗಳಲ್ಲಿ ಈಗ ಸಮೃದ್ಧಿಯ ವಾತಾವರಣ ಕಂಡು ಬರುತ್ತಿದೆ' ಎಂದು ಅವರು ಹೇಳಿದರು.ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, `ಮಾನವ ಜೀವನ ಸಾಧನೆಯ ಜೀವನ. ಎಲ್ಲರೂ ವಿಚಾರವಂತರು, ಸಾಧಕರಾಗಬೇಕು. ಮಾನವತ್ವ ಸಂಪಾದನೆ ಮಾಡಬೇಕು' ಎಂದು ಕಿವಿಮಾತು ಹೇಳಿದರು.ಸಂಘದ ಅಧ್ಯಕ್ಷ ಎನ್.ಸತ್ಯನಾರಾಯಣ ಹೊಳ್ಳ, `ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿವೇತನ ಹಾಗೂ ಪದವೀಧರರು ಉದ್ಯೋಗ ಹುಡುಕಲು ಮಾರ್ಗದರ್ಶನ ನೀಡಲಾಗುವುದು. ಉದ್ಯೋಗ ಅರಸಿ ನಗರಕ್ಕೆ ಬಂದ ಯುವಜನರಿಗೆ ವಸತಿ ಮತ್ತಿತರ ಸೌಕರ್ಯ ಕಲ್ಪಿಸಲಾಗುವುದು' ಎಂದರು.ಈ ಸಂದರ್ಭ ಕಾಲೇಜಿನ ನಿವೃತ್ತ ಉಪನ್ಯಾಸಕ ಟಿ.ಆರ್.ನಾವಡ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ.ಬಿ.ಯಶೋವರ್ಮ, ಸಂಘದ ಕಾರ್ಯದರ್ಶಿ ಅಶೋಕ್ ಎಂ. ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳಿಂದ ಯಕ್ಷಗಾನ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.