ಮಂಗಳವಾರ, ಮೇ 24, 2022
27 °C

ವಿಧಾನ ಪರಿಷತ್ ಚುನಾವಣೆ: ಶಿಕ್ಷಕ ಶೇ 74.95, ಪದವೀಧರ ಕ್ಷೇತ್ರ 64.64

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವಿಧಾನ ಪರಿಷತ್‌ಗೆ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಭಾನುವಾರ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯಿತು.

ನಗರ, ಸೇರಿದಂತೆ ಹರಿಹರ ಮತ್ತು ಜಗಳೂರಿನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶೇ 74.95, ನೈಋತ್ಯ ಪದವೀಧರ ಕ್ಷೇತ್ರಕ್ಕೆ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳಲ್ಲಿ ಶೇ 64.64, ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಹರಪನಹಳ್ಳಿಯಲ್ಲಿ  ಶೇ. 40.84 ಮತದಾನವಾಗಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ 4,311 ಮತದಾರರ ಪೈಕಿ 3231, ನೈಋತ್ಯ ಪದವೀಧರರ ಕ್ಷೇತ್ರಕ್ಕೆ 2,822 ಮತದಾರರ ಪೈಕಿ 1,824, ಈಶಾನ್ಯ ಪದವೀಧರರ ಕ್ಷೇತ್ರಕ್ಕೆ 1,971 ಮತದಾರರ ಪೈಕಿ 805 ಮಂದಿ ಮತ ಚಲಾಯಿಸಿದ್ದಾರೆ.

ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ, ಡಯೆಟ್ ಶಿಕ್ಷಣ ಸಂಸ್ಥೆ ಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಬೆಳಿಗ್ಗೆ 8ರಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಆರಂಭದಲ್ಲಿ ನಿಧಾನಗತಿಯ ಮತದಾನ ಕಂಡು ಬಂದರೂ ಹೊತ್ತು ಏರುತ್ತಿದ್ದಂತೆಯೇ ಸ್ವಲ್ಪ ಚುರುಕುಗೊಂಡಿತು. ಮಧ್ಯಾಹ್ನ 1.45ರ ವೇಳೆಗೆ ಶೇ 52ರಷ್ಟು ಮತದಾನವಾಗಿತ್ತು. ಸಂಜೆ 4ರ ವೇಳೆಗೆ  ಮತದಾನ ಪ್ರಕ್ರಿಯೆ ಸ್ವಲ್ಪ ಪ್ರಗತಿ ಕಾಣತೊಡಗಿತು.

ಮತದಾನದಲ್ಲಿ ಶಿಕ್ಷಕರ ಉತ್ಸಾಹದ ಜತೆಗೆ ವಿವಿಧ ಅಭ್ಯರ್ಥಿಗಳ ಬೆಂಬಲಿಗರ ಪಡೆಯೇ ಹೈಸ್ಕೂಲ್ ಮೈದಾನದಲ್ಲಿ ಸೇರಿತ್ತು. ಶಾಮಿಯಾನ ಹಾಕಿ ವಿವಿಧ ಪಕ್ಷಗಳ ಹಿರಿಯ ಮುಖಂಡರು ಅಭ್ಯರ್ಥಿಗಳ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಅವರ ಪರ ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಶಾಸಕರಾದ ಎಂ. ಬಸವರಾಜ ನಾಯ್ಕ, ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚಿದಾನಂದಪ್ಪ ಐಗೂರು ಮತ್ತಿತರ ಹಿರಿಯ ಮುಖಂಡರು ಸ್ಥಳದಲ್ಲೇ ಹಾಜರಿದ್ದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮಲಿಂಗಪ್ಪ ಅವರು ಹೈಸ್ಕೂಲ್ ಮೈದಾನದ ಗೇಟಿನ ಮುಂಭಾಗವೇ ಪ್ರಚಾರ ನಡೆಸುತ್ತಿದ್ದರು. ಅವರಿಗೆ ಪಾಲಿಕೆ ಸದಸ್ಯರ ಸಹಿತ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು. ಪಿ.ಆರ್. ಬಸವರಾಜ್, ಜೆಡಿಎಸ್ ಅಭ್ಯರ್ಥಿ ಚೌಡಾರೆಡ್ಡಿ, ಅವರ ಪರವೂ ಪ್ರಚಾರದ ಭರಾಟೆ ಜೋರಾಗಿತ್ತು. ಜೆಡಿಎಸ್ ಪರ ಎಚ್.ಎಸ್. ಶಿವಶಂಕರ್, ಟಿ. ದಾಸಕರಿಯಪ್ಪ, ಶ್ರೀನಿವಾಸ ಬಸಾಪತಿ, ಜೆಡಿಯು ಬೆಂಬಲಿತ ಅಭ್ಯರ್ಥಿ ಪುಟ್ಟಸಿದ್ದ ಶೆಟ್ಟಿ ಪರ ಬಿ.ವಿ. ರಾಜಶೇಖರ ಮತ್ತಿತರರು ಪ್ರಚಾರ ನಡೆಸಿದರು. ಒಟ್ಟಿನಲ್ಲಿ ಹೈಸ್ಕೂಲ್ ಮೈದಾನದಲ್ಲಿ ಜಾತ್ರೆಯ ವಾತಾವರಣ ಇತ್ತು.

ಈ ಮಧ್ಯೆ ಕಾರ್ಯಕರ್ತರು ಮತ್ತು ವಿವಿಧ ಮುಖಂಡರು ಪರಸ್ಪರ ಪರ ವಿರೋಧ, ಆರೋಪ- ಪ್ರತ್ಯಾರೋಪ ಮಾಡುತ್ತಾ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಕೊನೆಗೆ ಎಲ್ಲರೂ  ತಮ್ಮ ಅಭ್ಯರ್ಥಿ ಗೆಲ್ಲುತ್ತಾನೆ ಎಂದೇ ವಿಶ್ವಾಸ ವ್ಯಕ್ತಪಡಿಸಿದರು.

ಈ ಮಧ್ಯೆ ಮೈದಾನದಲ್ಲಿ ಕೈಗಡಿಯಾರ ಮಾರುತ್ತಿದ್ದ ಒಬ್ಬನನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಈತ ಅಭ್ಯರ್ಥಿಗಳ ಪರ ಕೈಗಡಿಯಾರ ವಿತರಿಸುತ್ತಿದ್ದಾನೆ ಎಂದು ಆರೋಪಿಸಿದ್ದೂ ನಡೆಯಿತು. ಕೊನೆಗೆ ಪೊಲೀಸರು ಆತನನ್ನು ಹೊರ ಕಳುಹಿಸಿದರು.

ಎಲ್ಲ ಪ್ರಕ್ರಿಯೆಗಳೂ ಶಾಂತಿಯುತವಾಗಿ ನಡೆದವು. ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಸ್ಥಳದಲ್ಲಿ ಹಾಜರಿದ್ದರು. ಹೆಚ್ಚುವರಿ ಎಸ್‌ಪಿ ಬಿ.ಟಿ. ಚವಾಣ್, ಸಿಪಿಐ ಎಂ.ಸಿ. ದಶರಥಮೂರ್ತಿ, ಪಿಎಸ್‌ಐ ಸತೀಶ್, ಸಂತೋಷ್, ಬಿ.ಎ. ಜಾಧವ್ ಇತರರು ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.