ಶನಿವಾರ, ಜನವರಿ 18, 2020
19 °C

ವಿನೀತ್ ಸಕ್ಸೇನಾ ಅಜೇಯ ದ್ವಿಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಹಾಲಿ ಚಾಂಪಿಯನ್ ರಾಜಸ್ತಾನ ತಂಡದವರು ಎರಡನೇ ದಿನ ಗಳಿಸಿದ್ದು ಕೇವಲ 183 ರನ್. ಎದುರಿಸಿದ್ದು 540 ಎಸೆತ. ರನ್‌ರೇಟ್ 2.24. ಅಜೇಯ ದ್ವಿಶತಕ ಗಳಿಸಿರುವ ವಿನೀತ್ ಸಕ್ಸೇನಾ ಎದುರಿಸಿದ್ದು 555 ಎಸೆತ!ರಾಜಸ್ತಾನ ತಂಡದ ರಕ್ಷಣಾತ್ಮಕ ಆಟಕ್ಕೆ ಸುಸ್ತಾಗಿದ್ದು ತಮಿಳುನಾಡು ಬೌಲರ್‌ಗಳು. ಮೊದಲ ದಿನ ವಿಕೆಟ್ ಕಬಳಿಸಲು ವಿಫಲರಾಗ್ದ್ದಿದ ಲಕ್ಷ್ಮಿಪತಿ ಬಾಲಾಜಿ ಬಳಗಕ್ಕೆ ಶುಕ್ರವಾರ ಲಭಿಸಿದ್ದು ಕೇವಲ ಎರಡು ವಿಕೆಟ್.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಎರಡನೇ ದಿನದ ಗೌರವ ಕೂಡ ರಾಜಸ್ತಾನ ತಂಡಕ್ಕೆ ಸಲ್ಲಬೇಕು.

ತುಂಬಾ ನಿಧಾನವಾಗಿ ಆಡುತ್ತಾ ಸಾಗಿರುವ ಈ ತಂಡದವರು ಎರಡನೇ ದಿನದ ಆಟದ ಅಂತ್ಯಕ್ಕೆ 180 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 404 ರನ್ ಗಳಿಸಿದ್ದಾರೆ. ಎದುರಿಸಿದ ಒಟ್ಟು ಎಸೆತಗಳು 1080.ಆರಂಭಿಕ ಬ್ಯಾಟ್ಸ್‌ಮನ್ ಸಕ್ಸೇನಾ (ಬ್ಯಾಟಿಂಗ್ 207; 555 ಎಸೆತ, 25 ಬೌಂಡರಿ, 1 ಸಿಕ್ಸರ್) ತಮಿಳುನಾಡು ತಂಡವನ್ನು ಕಾಡುತ್ತಿರುವ ಪರಿ ಅಷ್ಟಿಷ್ಟಲ್ಲ. ನಾಯಕ ಬಾಲಾಜಿ ಎಂಟು ಮಂದಿ ಬೌಲರ್‌ಗಳನ್ನು ಪ್ರಯೋಗಿಸಿ ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ರನ್‌ವೇಗಕ್ಕೆ ಕಡಿವಾಣ ಬಿತ್ತೇ ಹೊರತು ಸಕ್ಸೇನಾ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅವರು ಈಗಾಗಲೇ 12 ಗಂಟೆ 27 ನಿಮಿಷವನ್ನು ಕ್ರೀಸ್‌ನಲ್ಲಿ ಕಳೆದಿದ್ದಾರೆ.ಕೊಂಚ ಸಮಾಧಾನವೆಂದರೆ ಎದುರಾಳಿಯ ಆರಂಭಿಕ ಜೊತೆಯಾಟವನ್ನು ಬೇರ್ಪಡಿಸಿದರು. ಅಷ್ಟರಲ್ಲಿ 625 ಎಸೆತಗಳನ್ನು ಎದುರಿಸಿದ್ದ ವಿನೀತ್ ಹಾಗೂ ಆಕಾಶ್ ಚೋಪ್ರಾ ಜೋಡಿ ಮೊದಲ ವಿಕೆಟ್‌ಗೆ 236 ರನ್ ಸೇರಿಸಿತ್ತು. ಆದರೆ ಚೋಪ್ರಾ (94; 307 ಎಸೆತ, 10 ಬೌಂಡರಿ) ಕೇವಲ 6 ರನ್‌ಗಳಿಂದ ಶತಕ ತಪ್ಪಿಸಿಕೊಂಡರು.ಈ ಹಂತದಲ್ಲಿ ಜೊತೆಗೂಡಿದ ವಿನೀತ್ ಹಾಗೂ ನಾಯಕ ಹೃಷಿಕೇಶ್ ಕಾನಿಟ್ಕರ್ ಮತ್ತೆ ಎದುರಾಳಿಯನ್ನು ಸತಾಯಿಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 126 ರನ್ ಕಲೆ ಹಾಕಿದರು. ಬಳಿಕ ಆಗಮಿಸಿದ ರಾಬಿನ್ ಬಿಸ್ತ್ ಕೂಡ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. 

ಪ್ರತಿಕ್ರಿಯಿಸಿ (+)