ಶನಿವಾರ, ಮೇ 8, 2021
26 °C

ವಿಪ್ರೊ : ಮಂದಗತಿ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮೂರನೇ ದೊಡ್ಡ ಕಂಪನಿ `ವಿಪ್ರೊ~ 2011-12ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್)  ನಿವ್ವಳ ಲಾಭ ಗಳಿಕೆಯಲ್ಲಿ ಹಿಂದಿನ ವರ್ಷಕ್ಕಿಂತ ಶೇ 8ರಷ್ಟು ಮಾತ್ರ ಪ್ರಗತಿ ದಾಖಲಿಸಿದ್ದು, ಅಲ್ಪ ನಿರಾಶಾದಾಯಕ ಫಲಿತಾಂಶ ನೀಡಿದೆ. ಕಂಪನಿ ರೂ1481 ಕೋಟಿ ನಿವ್ವಳ ಲಾಭ ಗಳಿಸಿದೆ.4ನೇ ತ್ರೈಮಾಸಿಕದಲ್ಲಿ 9869 ಕೋಟಿ ರೂಪಾಯಿ ವರಮಾನ ಗಳಿಸಿರುವ ವಿಪ್ರೊ, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 19ರಷ್ಟು ಪ್ರಗತಿ ತೋರಿದೆ. ಆದರೆ, ಕಂಪನಿಗೆ ಮಾಹಿತಿ ತಂತ್ರಜ್ಞಾನ ಸೇವಾ ಕ್ಷೇತ್ರದಿಂದ ಬರುತ್ತಿದ್ದ ವರಮಾನದಲ್ಲಿ ಗಣನೀಯ ಇಳಿಕೆಯಾಗಿದೆ.

 

ಲಾಭಾಂಶ ರೂ 4
ವಿಪ್ರೊದ 2011-12ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದ ಫಲಿತಾಂಶವನ್ನು ಬುಧವಾರ ಕಂಪನಿ ಕಚೇರಿಯಲ್ಲಿ ಪ್ರಕಟಿಸಿದ ಕಂಪನಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ಪ್ರತಿ ಷೇರಿಗೆ ರೂ 4ರಷ್ಟು ಅಂತಿಮ ಲಾಭಾಂಶ ಘೋಷಿಸಿದರು.

 

ಇದರೊಂದಿಗೆ ಕಂಪನಿ ಕಳೆದ ವರ್ಷ ಒಟ್ಟು ರೂ 6 ಲಾಭಾಂಶ ನೀಡಿದಂತಾಗಿದೆ.

ವಿಪ್ರೊ 2011-12ನೇ ಹಣಕಾಸು ವರ್ಷದಲ್ಲಿ(ನಾಲ್ಕೂ ತ್ರೈಮಾಸಿಕ ಸೇರಿ) ಒಟ್ಟಾರೆ ರೂ 37525 ಕೋಟಿ ವರಮಾನ ಗಳಿಸಿ ವರ್ಷದಿಂದ ವರ್ಷಕ್ಕೆ ಶೇ 21ರಷ್ಟು ಪ್ರಗತಿ ತೋರಿದ್ದರೂ, ನಿವ್ವಳ ಲಾಭ ಗಳಿಕೆಯಲ್ಲಿ ಕೇವಲ ರೂ 5573 ಕೋಟಿ (ಶೇ. 5ರಷ್ಟು) ಸಾಧನೆ ಮಾತ್ರ ಸಾಧ್ಯವಾಗಿದೆ.ಈಗಿನ 4ನೇ ತ್ರೈಮಾಸಿಕವನ್ನು ಹಿಂದಿನ ವರ್ಷದೊಂದಿಗೆ ಹೋಲಿಸಿದಾಗ ವಿಪ್ರೊದ ಐಟಿ ಕ್ಷೇತ್ರದ ಪ್ರಗತಿ ಗತಿ ಇಳಿಮುಖವಾಗಿದೆ. ಹಿಂದಿನ ವರ್ಷದ 4ನೇ ತ್ರೈಮಾಸಿಕದಲ್ಲಿ ಜಾಗತಿಕ ಮಾಧ್ಯಮ ಮತ್ತು ದೂರಸಂಪರ್ಕ ಕ್ಷೇತ್ರದ ಸೇವೆಯಿಂದ ಶೇ. 17.2ರಷ್ಟು ವರಮಾನ ಗಳಿಸಿದ್ದ ವಿಪ್ರೊಗೆ, ಈಗ ಶೇ. 14.9ರಷ್ಟು ಗಳಿಕೆ ಮಾತ್ರ ಸಾಧ್ಯವಾಗಿದೆ. ಜತೆಗೆ ಅಮೆರಿಕ ಮತ್ತು ಯೂರೋಪ್ ದೇಶಗಳಿಂದ ಬರುತ್ತಿದ್ದ ವರಮಾನದಲ್ಲಿಯೂ 4ನೇ ತ್ರೈಮಾಸಿಕದಲ್ಲಿ ಗಣನೀಯ ಇಳಿಕೆ ಆಗಿದೆ.ರೂಪಾಯಿ ಮೌಲ್ಯ ಕುಸಿದಿದ್ದೇ ವಿದೇಶಿ ವರಮಾನ ಇಳಿಮುಖವಾಗಲು ಕಾರಣ ಎಂದು ವಿಪ್ರೊದ ಮುಖ್ಯ ಹಣಕಾಸು ಅಧಿಕಾರಿ ಸುರೇಶ್ ಸೇನಾಪತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ಜತೆಗೆ ವಿಪ್ರೊ 4ನೇ ತ್ರೈಮಾಸಿಕದಲ್ಲಿ ಹೊಸದಾಗಿ ಸಿಬ್ಬಂದಿ ನೇಮಿಸಿಕೊಳ್ಳಲು ಮುಂದಾಗಿಯೇ ಇಲ್ಲ. ಅಷ್ಟೇ ಅಲ್ಲದೆ, 3ನೇ ತ್ರೈಮಾಸಿಕದಲ್ಲಿ 1.36 ಲಕ್ಷದಷ್ಟಿದ್ದ ಸಿಬ್ಬಂದಿ ಸಂಖ್ಯೆಯನ್ನು 4ನೇ ತ್ರೈಮಾಸಿಕದ ವೇಳೆಗೆ 1.35 ಲಕ್ಷಕ್ಕೆ ತಗ್ಗಿಸಿದೆ. 2011ರ ಜನವರಿ-ಮಾರ್ಚ್ ಅವಧಿಯಲ್ಲಿ 68 ಹೊಸ ಗ್ರಾಹಕರು ಸಿಕ್ಕಿದ್ದರೆ, 2012ರ 4ನೇ ತ್ರೈಮಾಸಿಕದಲ್ಲಿ ಕೇವಲ 41 ಹೊಸ ಗ್ರಾಹಕ ಕಂಪನಿಗಳಷ್ಟೇ ವಿಪ್ರೊ ಸೇವೆ ಬಯಸಿವೆ.ಇದೆಲ್ಲದರ ಕಾರಣವಾಗಿ ಐಟಿ ಕ್ಷೇತ್ರದ ವರಮಾನದಲ್ಲಿ 2012-13ನೇ ಸಾಲಿನ 1ನೇ ತ್ರೈಮಾಸಿಕಕ್ಕೆ ದೊಡ್ಡ ಗುರಿಯನ್ನೇನೂ ಕಂಪನಿ ಇಟ್ಟುಕೊಂಡಿಲ್ಲ. ಕಳೆದ 4ನೇ ತ್ರೈಮಾಸಿಕದಲ್ಲಿ 153.60 ಕೋಟಿ ಅಮೆರಿಕನ ಡಾಲರ್ ವರಮಾನ ಗಳಿಸಿದ ಪ್ರಮಾಣದಲ್ಲಿಯೇ ಈಗಿನ 1ನೇ ತ್ರೈಮಾಸಿಕದಲ್ಲಿಯೂ 152ರಿಂದ 155 ಕೋಟಿ ಡಾಲರ್ ವರಮಾನವನ್ನಷ್ಟೇ ನಿರೀಕ್ಷಿಸಿದೆ. ಇದು ಪ್ರಸಕ್ತ ಸಾಲಿನಲ್ಲಿ ದೇಶದ ಐಟಿ ಕ್ಷೇತ್ರದ ಪ್ರಗತಿಗತಿಯ ಬಗ್ಗೆ ಸುಳಿವು ನೀಡುವಂತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.