ವಿಪ್ರೊ: ಶೇ 2 ನಿವ್ವಳ ಲಾಭ

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟವೇರ್ ರಫ್ತು ಕಂಪೆನಿ ವಿಪ್ರೊ, ಡಿಸೆಂಬರ್ನಲ್ಲಿ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ₹2,234 ಕೋಟಿಗಳಷ್ಟು ನಿವ್ವಳ ಲಾಭಗಳಿಸಿದೆ.
ಚೆನ್ನೈ ಮಹಾಮಳೆ ಮತ್ತು ರಜಾದಿನಗಳ ಹೊರತಾಗಿಯೂ ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ವಿಪ್ರೊ ಲಾಭದ ಪ್ರಮಾಣ ಶೇ 2ರಷ್ಟು ಹೆಚ್ಚಳವಾಗಿದೆ.
ಮಾಹಿತಿ ತಂತ್ರಜ್ಞಾನ ಸೇವಾ ವಲಯ ಶೇ 9ರಷ್ಟು ಏರಿಕೆ ಕಾಣುವುದರೊಂದಿಗೆ ₹12,310 ಕೋಟಿ ವರಮಾನ ಗಳಿಸಿದೆ. ಚೆನ್ನೈನಲ್ಲಿಯ ಪ್ರವಾಹದಿಂದಾಗಿ ಐ.ಟಿ ವಹಿವಾಟು ಶೇ 21.8ರಿಂದ ಶೇ 20.2ಕ್ಕೆ ಕುಸಿತದಿದೆ. ಶೇ 13ರಷ್ಟು ವಿಪ್ರೊ ಸಿಬ್ಬಂದಿ ಚೆನ್ನೈನಲ್ಲಿರುವುದು ಇದಕ್ಕೆ ಕಾರಣ ಎಂದು ವಿಪ್ರೊ ಸಿಇಒ ಟಿ.ಕೆ. ಕುರಿಯನ್ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪೆನಿಯು ₹ 2,193 ಕೋಟಿ ನಿವ್ವಳ ಲಾಭ ಮತ್ತು ₹ 12,085 ಕೋಟಿ ವರಮಾನ ಗಳಿಸಿತ್ತು. ಅದಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಇದೇ ಅವಧಿಯಲ್ಲಿ ₹ 12,952 ಕೋಟಿ ಆದಾಯ ಗಳಿಸಿದೆ. ಇದರಿಂದಾಗಿ ವರಮಾನ ಗಳಿಕೆಯ ಪ್ರಮಾಣ ಶೇ 7.1ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಡಿಜಿಟಲ್ ಕ್ರಾಂತಿ ನಡೆಯುತ್ತಿದ್ದು ಎಲ್ಲ ವಹಿವಾಟು ಡಿಜಟಲೀಕರಣವಾಗುತ್ತಿದೆ. ಈ ಬದಲಾವಣೆಯ ಸಂಪೂರ್ಣ ಲಾಭ ಪಡೆಯಲು ವಿಪ್ರೊ ಸಿದ್ಧವಾಗಿದೆ ಎಂದು ನಿಯೋಜಿ ಸಿಇಒ ಅಬಿದ್ ಅಲಿ ನೀಮುಚ್ವಾಲಾ ತಿಳಿಸಿದರು. ಪ್ರತಿಭಾವಂತ ಉದ್ಯೋಗಿಗಳಿಗೆ ಮನ್ನಣೆ ನೀಡುವ ಜತೆಗೆ ಸಂಶೋಧನೆ ಮತ್ತು ಹೊಸ ಆಲೋಚನೆಗಳನ್ನು ಅಳವಡಿಸಲು ಉತ್ತೇಜನ ನೀಡಲಾಗುವುದು ಎಂದರು.
ಕುಸಿದ ವರಮಾನ: ಇಂಧನ, ನೈಸರ್ಗಿಕ ಸಂಪನ್ಮೂಲ, ಸೇವಾ ವಲಯದಲ್ಲಿ ಕಳೆದ ಮೂರನೇ ತ್ರೈಮಾಸಿಕದಲ್ಲಿ ಶೇ 16.4 ರಷ್ಟು ವಹಿವಾಟು ನಡೆಸಿದ್ದ ವಿಪ್ರೊ ವರಮಾನ ಈ ಬಾರಿ ಶೇ 14.4ಕ್ಕೆ ಇಳಿಕೆಯಾಗಿದೆ.
ವರಮಾನ ಹೆಚ್ಚಳ ನಿರೀಕ್ಷೆ
ಮಾರ್ಚ್ 31ಕ್ಕೆ ಕೊನೆಗೊಳ್ಳುವ ನಾಲ್ಕನೇ ತ್ರೈಮಾಸಿಕದಲ್ಲಿ ಐ.ಟಿ ಸೇವಾ ವಹಿವಾಟು ವರಮಾನ ₹ 12.56 ಲಕ್ಷ ಕೋಟಿಗಳಿಂದ ₹12.81 ಲಕ್ಷ ಕೋಟಿಗಳಿಗೆ ಏರುವ ನಿರೀಕ್ಷೆ ಇದೆ ಎಂದು ವಿಪ್ರೊ ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.