ವಿಮಾನ ಅಪಘಾತ: ಇಬ್ಬರ ಸಾವು

ಸ್ಯಾನ್ ಫ್ರಾನ್ಸಿಸ್ಕೊ/ವಾಷಿಂಗ್ಟನ್ (ಪಿಟಿಐ): ದಕ್ಷಿಣ ಕೊರಿಯಾದ ಏಷಿಯಾನ ಏರ್ಲೈನ್ಸ್ನ ವಿಮಾನವೊಂದು ಇಲ್ಲಿನ ವಿಮಾನನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಇಳಿಯುತ್ತಿರುವ ಸಂದರ್ಭದಲ್ಲಿ ರನ್ವೇಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ 180 ಜನರು ಗಾಯಗೊಂಡಿದ್ದಾರೆ. ಮೂವರು ಭಾರತೀಯರು ಸೇರಿದಂತೆ ವಿಮಾನದಲ್ಲಿ 307 ಜನರು ಪ್ರಯಾಣಿಸುತ್ತಿದ್ದರು. ಭಾರತದ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯ ಕಾಲಮಾನ ರಾತ್ರಿ 11.30ರ ಸುಮಾರಿಗೆ ಬೋಯಿಂಗ್ ವಿಮಾನವು ರನ್ವೇಗೆ ಅಪ್ಪಳಿಸಿದ ಸಂದರ್ಭದಲ್ಲಿ ಬೆಂಕಿ ಹತ್ತಿಕೊಂಡಿತಾದರೂ ಪವಾಡಸದೃಶವಾಗಿ ಭಾರಿ ದುರಂತವೊಂದು ತಪ್ಪಿತು.
ದುರ್ಘಟನೆಯಲ್ಲಿ ಚೀನಾದ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಇಬ್ಬರೂ ಚೀನಾದವರಾಗಿದ್ದಾರೆ. 181 ಜನರು ಗಾಯಗೊಂಡಿದ್ದಾರೆ. ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿವೆಯಷ್ಟೇ ಎಂದು ದಕ್ಷಿಣ ಕೊರಿಯಾದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಏಷಿಯಾನ ಏರ್ಲೈನ್ಸ್ ಹೇಳಿದೆ.
ಮಗು ಸೇರಿದಂತೆ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದೂ ಸಂಸ್ಥೆಯ ಮೂಲಗಳು ವಿವರಿಸಿವೆ. ಸೋಲ್ನಿಂದ ಸ್ಯಾನ್ಫ್ರಾನ್ಸಿಸ್ಕೊಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಮೂವರು ಭಾರತೀಯರಲ್ಲಿ ಒಬ್ಬರು ತೀವ್ರಗಾಯಗೊಂಡಿದ್ದು, ಅವರ ಭುಜದ ಎಲುಬು ಮುರಿದಿದೆ. ಉಳಿದಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಭಾರತದ ರಾಯಭಾರಿಯಾಗಿರುವ ವಿಷ್ಣು ಪ್ರಕಾಶ್ ಹೇಳಿದ್ದಾರೆ.
ವಿಮಾನದಲ್ಲಿ 291 ಪ್ರಯಾಣಿಕರು ಮತ್ತು 16 ಸಿಬ್ಬಂದಿಗಳಿದ್ದರು ಎಂದು ಏಷಿಯಾನ ಏರ್ಲೈನ್ಸ್ ತಿಳಿಸಿದೆ. `ಅವಘಡಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಸ್ಥೆ ಶ್ರಮಿಸುತ್ತಿದೆ. ಅಮೆರಿಕದ ಭದ್ರತಾ ಸಂಸ್ಥೆಗಳು ನಡೆಸಲಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು' ಎಂದು ಏರ್ಲೈನ್ಸ್ ತಿಳಿಸಿದೆ.
`ಪಾರಾಗಿದ್ದೇ ಪವಾಡ'
ಸ್ಯಾನ್ ಫ್ರಾನ್ಸಿಸ್ಕೊ (ಪಿಟಿಐ): `ನಾವು ಪ್ರಾಣಾಪಾಯದಿಂದ ಪಾರಾಗಿದ್ದೇ ಬಹು ದೊಡ್ಡ ಪವಾಡ' ಎಂದು ರನ್ವೇಗೆ ಅಪ್ಪಳಿಸಿದ ಏಷಿಯಾನ ಏರ್ಲೈನ್ಸ್ ವಿಮಾನದಲ್ಲಿ ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದ ಭಾರತದ ವೇದಪಾಲ್ ಸಿಂಗ್ ಹೇಳಿದ್ದಾರೆ.
ವಿಮಾನ ಅಪಘಾತಕ್ಕೀಡಾಗುವುದಕ್ಕಿಂತಲೂ ಮೊದಲು ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ನೀಡಿರಲಿಲ್ಲ ಎಂದೂ ಅವರು ಹೇಳಿದ್ದಾರೆ.
`ಎಲ್ಲೋ ಭಾರಿ ಪ್ರಮಾದವಾಗಿದೆ ಎಂದು ತಿಳಿದಿತ್ತು. ಆದರೆ, ಪೈಲಟ್ ಆಗಲೀ, ವಿಮಾನದ ಇತರ ಸಿಬ್ಬಂದಿಯಾಗಲೀ ನಮಗೆ ಮುನ್ನೆಚ್ಚರಿಕೆ ಸಂದೇಶ ನೀಡಿರಲಿಲ್ಲ' ಎಂದು ಆಘಾತಕ್ಕೊಳಗಾಗಿದ್ದ ಸಿಂಗ್ ಹೇಳಿದ್ದಾರೆ.
ವಿಮಾನದ ಮಧ್ಯ ಭಾಗದಲ್ಲಿ ಕುಟುಂಬದ ಜತೆ ಕುಳಿತಿದ್ದ ಸಿಂಗ್ ಅವರ ಭುಜದ ಎಲುಬು ಮುರಿದಿದೆ. ಕೇವಲ 10 ಸೆಕೆಂಡುಗಳಲ್ಲಿ ನಡೆದು ಹೋದ ಅನಾಹುತದ ಸಂದರ್ಭದಲ್ಲಿ ಲಗೇಜ್ಗಳೆಲ್ಲಾ ಪ್ರಯಾಣಕರ ತಲೆ ಮೇಲೆ ಬೀಳುತ್ತಿದ್ದವು ಎಂದು ಸಿಂಗ್ ಅವರ 15 ವರ್ಷದ ಪುತ್ರ ಹೇಳಿದ್ದಾನೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.