ಗುರುವಾರ , ಮೇ 19, 2022
21 °C

ವಿವಾದದ ಸುಳಿಯಲ್ಲಿ ಜೆಟ್- ಎತಿಹಾದ್ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಬುಧಾಬಿಯೊಂದಿಗೆ ಮಾಡಿಕೊಂಡಿರುವ  ರೂ.  2,058 ಕೋಟಿ ವೆಚ್ಚದ ಜೆಟ್ - ಎತಿಹಾದ್ ಒಪ್ಪಂದ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.ಕೆಲವು ಸಂಸದರು ಆಕ್ಷೇಪ ವ್ಯಕ್ತಪಡಿಸಿದರೂ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಇದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

`ಒಪ್ಪಂದ ವಿರೋಧಿಸುವವರಿಗೆ ವಾಸ್ತವ ಏನು ಎನ್ನುವುದು ಗೊತ್ತಿಲ್ಲ. ರಾಜಕೀಯ ಕಾರಣಕ್ಕೆ ವಿವಾದ ಎಬ್ಬಿಸುತ್ತಿದ್ದಾರೆ. ವಿದೇಶಿ ನೇರ ಬಂಡವಾಳ ಹೂಡಿಕೆ ದೃಷ್ಟಿಯಿಂದ ಇದು ಈ ವರ್ಷದಲ್ಲಿ ಮಾಡಿಕೊಂಡ ಬಹುದೊಡ್ಡ ಒಪ್ಪಂದವಾಗಿದೆ' ಎಂದು ಹೇಳಿದ್ದಾರೆ.ಒಪ್ಪಂದಕ್ಕೆ ಅಪಸ್ವರ...

ಈ ಒಪ್ಪಂದಕ್ಕೆ ಮೊದಲು ಅಪಸ್ವರ ಎತ್ತಿದ್ದು ಸಿಪಿಎಂ ಸಂಸದ ಸೀತಾರಾಂ ಯೆಚೂರಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ. ನಂತರದಲ್ಲಿ ಹಿರಿಯ ಸಂಸದರಾದ ಜಸ್ವಂತ್ ಸಿಂಗ್, ದಿನೇಶ್ ತ್ರಿವೇದಿ, ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಕೂಡ ದನಿಗೂಡಿಸಿದ್ದರು.ಒಪ್ಪಂದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಇವರೆಲ್ಲ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರವನ್ನೂ ಬರೆದಿದ್ದರು.  ಪ್ರಧಾನಿ ಈ ವಿಷಯವನ್ನು ನಾಗರಿಕ ವಿಮಾನಯಾನ, ವಾಣಿಜ್ಯ ಹಾಗೂ ಹಣಕಾಸು ಸೇರಿದಂತೆ ಸಂಬಂಧಪಟ್ಟ ವಿವಿಧ ಸಚಿವಾಲಯಗಳ ಮುಂದೆ ಇಟ್ಟಿದ್ದರು.ಏನಿದು ಒಪ್ಪಂದ?

ವಿಮಾನ ಹಾರಾಟಕ್ಕೆ ಸಂಬಂಧಿಸಿ 2007-08ರಲ್ಲಿ ಭಾರತ ಹಾಗೂ ಅಬುಧಾಬಿ ನಡುವಿನ ಒಪ್ಪಂದ  ಇದಾಗಿದೆ.  ಜೆಟ್ ಏರ್‌ವೇಸ್‌ನ ಶೇ 24ರಷ್ಟು ಷೇರುಗಳನ್ನು ಎತಿಹಾದ್ ಏರ್‌ವೇಸ್  ರೂ.  2,058 ಕೋಟಿಗೆ ಖರೀದಿಸುವ ಪ್ರಸ್ತಾಪ ಇದರಲ್ಲಿದೆ. ಷೇರು ಮಾರಾಟ ವಿಷಯಕ್ಕೆ ಸಂಬಂಧಿಸಿ ಇದೀಗ ತಕರಾರು ಎದ್ದಿದೆ.ಬಿಜೆಪಿ ಪಟ್ಟು:   `ಈ ಒಪ್ಪಂದ ಕುರಿತು ಪ್ರಧಾನಿ ಸ್ಪಷ್ಟನೆ ನೀಡಬೇಕು' ಎಂದು ಬಿಜೆಪಿ ಪಟ್ಟು ಹಿಡಿದಿದೆ.`ಇದರಲ್ಲಿ ಏನೋ ಎಡವಟ್ಟಾಗಿದೆ. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಾವು ತಕರಾರು ಮಾಡುವುದಿಲ್ಲ. ಆದರೆ ಅವ್ಯವಹಾರ ನಡೆದರೆ ಸುಮ್ಮನಿರುವುದಿಲ್ಲ' ಎಂದು ಪಕ್ಷದ ವಕ್ತಾರ ಸೈಯದ್ ಶಹನವಾಜ್ ಹುಸೇನ್ ಹೇಳಿದ್ದಾರೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಒಪ್ಪಂದವನ್ನು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಹೋಲಿಸಿದ್ದಾರೆ.ಪರಿಶೀಲನೆಯಲ್ಲಿದೆ: `ಈ ಒಪ್ಪಂದದಲ್ಲಿ ಷೇರು ಮಾರಾಟ ವಿಷಯ ಇನ್ನೂ ಪರಿಶೀಲನೆಯಲ್ಲಿದೆ. ಸಂಬಂಧಪಟ್ಟ ಸಚಿವಾಲಯಗಳ ಮುಂದೆ ಇದನ್ನು ಪ್ರಸ್ತಾಪಿಸಲಾಗಿದೆ' ಎಂದು ಪ್ರಧಾನಿ ಕಚೇರಿ ಮಂಗಳವಾರ ಸ್ಪಷ್ಟಪಡಿಸಿದೆ.`ಒಪ್ಪಂದ ಕುರಿತು ಸರ್ಕಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ಅಷ್ಟಕ್ಕೂ ಇದು ಎರಡು ಖಾಸಗಿ ಸಂಸ್ಥೆಗಳ ನಡುವೆ ಆದ ಒಡಂಬಡಿಕೆಯಾಗಿದೆ' ಎಂದೂ ಪ್ರಧಾನಿ ಕಚೇರಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.