ಸೋಮವಾರ, ಮಾರ್ಚ್ 8, 2021
29 °C
ಅಂತರ್ಜಾಲ ಕನ್ನಡ ಆವೃತ್ತಿಗೆ 13ನೇ ವಾರ್ಷಿಕೋತ್ಸವದ ಸಂಭ್ರಮ; ಆಸಕ್ತರಿಂದ ಲೇಖನಗಳ ಬರಹ

ವಿವಿಧೆಡೆ ವಿಕಿಪೀಡಿಯಾ ‘ಸಂಪಾದನೋತ್ಸವ’

ಕೆ.ಎಸ್. ಗಿರೀಶ Updated:

ಅಕ್ಷರ ಗಾತ್ರ : | |

ವಿವಿಧೆಡೆ ವಿಕಿಪೀಡಿಯಾ ‘ಸಂಪಾದನೋತ್ಸವ’

ಮೈಸೂರು: ಅಂತರ್ಜಾಲದ ಕನ್ನಡ ವಿಶ್ವಕೋಶ ‘ವಿಕಿಪೀಡಿಯಾ’ಕ್ಕೆ ಈಗ 13ರ ಹರೆಯ. ರಾಜ್ಯದ ವಿವಿಧ ಭಾಗಗಳಲ್ಲಿ ‘ಸಂಪಾದನೋತ್ಸವ’ಗಳನ್ನು ಏರ್ಪಡಿಸುವ ಮೂಲಕ ಸದ್ದಿಲ್ಲದೇ ವರ್ಷಾಚರಣೆಯಲ್ಲಿ ಅದು ತೊಡಗಿದೆ. ಈಗಾಗಲೇ ಮಂಗಳೂರು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೂರು ದಿನಗಳ ‘ಸಂಪಾದನೋತ್ಸವ’ಗಳನ್ನು ‘ವಿಕಿಪೀಡಿಯಾ’ ಮುಗಿಸಿದೆ.ಏನಿದು ‘ಸಂಪಾದನೋತ್ಸವ’?: ಜಾಗತಿಕವಾಗಿ ‘ವಿಕಿಪೀಡಿಯಾ’ 2001ರ ಜನವರಿ 15ರಂದು ಆರಂಭವಾಯಿತು. ಇದರ ಕನ್ನಡ ಆವೃತ್ತಿ 2003ರ ಜೂನ್‌ನಲ್ಲಿ ಶುರುವಾಯಿತು. ಸದ್ಯ, 13ನೇ ವರ್ಷಕ್ಕೆ ಕಾಲಿಟ್ಟಿರುವ ಕನ್ನಡ ‘ವಿಕಿಪೀಡಿಯಾ’ ಇಡೀ ವರ್ಷ ‘ಸಂಪಾದನೋತ್ಸವ’ ವರ್ಷವಾಗಿ ಆಚರಿಸಲು ನಿರ್ಧರಿಸಿದೆ. ಕೇವಲ ವೇದಿಕೆ ಕಾರ್ಯಕ್ರಮಗಳಲ್ಲಿ ದೀಪ ಹಚ್ಚುವು ದರಿಂದ ‘ವಿಕಿಪೀಡಿಯಾ’ ಬೆಳಗುವುದಿಲ್ಲ ಎಂದು ವೇದಿಕೆ ಕಾರ್ಯಕ್ರಮವನ್ನು ಬದಿಗೆ ಸರಿಸಿ, ಆಸಕ್ತರಿಂದ ನೇರವಾಗಿ ಲೇಖನವನ್ನು ಬರೆಸಲು ತೊಡಗಿದೆ.ಇದು ಏಕೆ?: ಇಂಗ್ಲಿಷ್‌ ‘ವಿಕಿಪೀಡಿಯಾ’ದಲ್ಲಿ 50 ಲಕ್ಷಕ್ಕೂ ಹೆಚ್ಚಿನ ಲೇಖನಗಳ ಸಂಗ್ರಹ ಇದೆ. ಆದರೆ, ಕನ್ನಡದಲ್ಲಿ ಮಾತ್ರ ಕೇವಲ 20 ಸಾವಿರ ಲೇಖನ ಸಂಗ್ರಹ ಇದೆ. ಇನ್ನೂ ಕನ್ನಡದಲ್ಲಿ ಆಗಬೇಕಾದ ಕಾರ್ಯಗಳು ಬೆಟ್ಟದಷ್ಟಿವೆ. ಮೈಸೂರು ವಿಶ್ವ ವಿದ್ಯಾನಿಲಯವು ಈಗಾಗಲೇ ತನ್ನ 14 ಸಂಪುಟಗಳ ವಿಶ್ವಕೋಶವನ್ನು ‘ವಿಕಿಪೀಡಿಯಾ’ಕ್ಕೆ ಸೇರಿಸಲು ಒಪ್ಪಿಗೆ ನೀಡಿದೆ.ಇದರಲ್ಲಿ ಮೊದಲ 7 ಸಂಪುಟಗಳಲ್ಲಿ 5 ಮತ್ತು 7 ಸಂಪುಟಗಳನ್ನು ಬಿಟ್ಟು ಉಳಿದ ಸಂಪುಟಗಳನ್ನು ‘ವಿಕಿಪೀಡಿಯಾ’ಕ್ಕೆ ಸೇರಿಸಲಾಗಿದೆ. ಇನ್ನುಳಿದ ಸಂಪುಟ ಗಳನ್ನು ಸೇರಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಈ ನಡುವೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ವಕೋಶಗಳನ್ನು ‘ವಿಕಿಪೀಡಿಯಾ’ಕ್ಕೆ ಸೇರಿಸಲು ಅನುಮತಿ ನೀಡುವಂತೆ ಕೋರಲಾಗಿದ್ದರೂ ಅವರು ಅನುಮತಿ ನೀಡಿಲ್ಲ.‘ಸಂಪಾದನೋತ್ಸವ’ದಿಂದ ಕನಿಷ್ಠ ಪಕ್ಷ ‘ವಿಕಿಪೀಡಿಯಾ’ಕ್ಕೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಲೇಖನಗಳನ್ನು ಸೇರಿಸುವ ಸ್ವಯಂಸೇವಕರು ಸಿಗುತ್ತಾರೆ. ಏನಿಲ್ಲ ಎಂದರೂ ನೂರು ಲೇಖನಗಳಾದರೂ ‘ವಿಕಿಪೀಡಿಯಾ’ಗೆ ಸೇರುತ್ತವೆ ಎಂಬ ನಿರೀಕ್ಷೆಯಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ಸೆಂಟರ್ ಫಾರ್ ಇಂಟರ್‌ನೆಟ್ ಅಂಡ್ ಸೊಸೈಟಿಯ ಭಾರತೀಯ ಭಾಷೆಗಳ ಯೋಜನಾ ನಿರ್ವಾಹಕ ಯು.ಬಿ.ಪವನಜ ‘ಪ್ರಜಾವಾಣಿ’ಗೆ ತಿಳಿಸಿದರು.ಎಲ್ಲೆಲ್ಲಿ ನಡೆಯಲಿದೆ?: ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ವಿಶ್ವನಾಥ ಬದಿಕಾನ ಅವರ ನೇತೃತ್ವದಲ್ಲಿ ರಾಜ್ಯದ ಮಂಗಳೂರು, ಬೆಂಗಳೂರು, ಮೈಸೂರು ಹಾಗೂ ಶಿವಮೊಗ್ಗದಲ್ಲಿ ‘ಸಂಪಾದನೋತ್ಸವ’ಗಳು ಜರುಗುತ್ತಿವೆ.ಮಂಗಳೂರಿನಲ್ಲಿ ಸೇಂಟ್ ಆಗ್ನೆಸ್ ಕಾಲೇಜಿನ ಡಾ.ಸಂಪೂರ್ಣಾನಂದ ಬಲ್ಕೂರ್ ಅವರ ನೇತೃತ್ವದಲ್ಲಿ ‘ಕರಾವಳಿ ಸಾಧಕಿಯರು ಮತ್ತು ಲೇಖಕಿಯರು’ ಕುರಿತು 24 ಮಂದಿ 60 ಲೇಖನಗಳನ್ನು ಸೇರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಂಪಾದನೋತ್ಸವದಲ್ಲಿ ಸಿ.ಪಿ.ರವಿಕುಮಾರ್ ಅವರ ನೇತೃತ್ವದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 45 ಲೇಖನಗಳನ್ನು ಸೇರಿಸಲಾಗಿದೆ. ಟೆಕ್ಸಾಸ್ ಇನ್‌ಸ್ಟ್ರುಮೆಂಟ್‌ನ 12 ಮಂದಿ ಈ ಕಾರ್ಯದಲ್ಲಿ ಮೂರು ದಿನಗಳ ಕಾಲ ತೊಡಗಿದ್ದರು.ಈಗ ಮೈಸೂರು ವಿಶ್ವವಿದ್ಯಾಲಯದ ಪ್ರಾವೀಣ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದಲ್ಲಿ ಕಳೆದ ಸೋಮವಾರದಿಂದ  ಮೂರು ದಿನಗಳ ಕಾಲ ಕನ್ನಡ ನಾಡು, ಚರಿತ್ರೆ, ಭಾಷೆ, ವ್ಯಾಕರಣ, ಛಂದಸ್ಸು, ಶಾಸನ, ವಿಮರ್ಶೆ, ಜಾನಪದ ಇತ್ಯಾದಿ ಕ್ಷೇತ್ರಗಳನ್ನೊಳಗೊಂಡ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಲೇಖನಗಳನ್ನು ಹಾಕುವ ಕಾರ್ಯ ನಡೆದಿದೆ. ಇದಕ್ಕೆ ಮಹಾರಾಜ ಕಾಲೇಜಿನ ಪ್ರಾಧ್ಯಾಪಕಿ  ಕೆ. ಸೌಭಾಗ್ಯಾವತಿ ನೇತೃತ್ವ ವಹಿಸಿದ್ದು, 13 ಸಂಶೋಧನಾ ವಿದ್ಯಾರ್ಥಿಗಳು ವಿವಿಧ ಲೇಖನಗಳನ್ನು ಸೇರಿಸಿದ್ದಾರೆ.ಮುಂದಿನ ಸಂಪಾದನೋತ್ಸವ: ಮೈಸೂರಿನ ನಂತರ ಶಿವಮೊಗ್ಗ ಇಲ್ಲವೇ ಸಾಗರದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಸಂಪಾದನೋತ್ಸವ ನಡೆಯಲಿದೆ. ಈ ವಿಷಯದ ಬಹುಪಾಲು ಪುಸ್ತಕಗಳು ಇಂಗ್ಲಿಷಿನಲ್ಲಿದ್ದು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಯಂತಾಗಿದೆ.ಇದಕ್ಕಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಪ್ರಮುಖ ವಿಷಯಗಳನ್ನು ಕನ್ನಡಕ್ಕೆ ಅನುವಾದಿಸಿ ವಿಕಿಪೀಡಿಯಾಕ್ಕೆ ಸೇರಿಸುವ ಕಾರ್ಯವು ವಿದ್ಯಾಧರ್ ಚಿಪ್ಳಿ ಅವರ ನೇತೃತ್ವದಲ್ಲಿ ಜ. 25ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಇದರ ನಂತರ ಮಂಗಳೂರಿನಲ್ಲಿ ಫೆ. 14ಕ್ಕೆ ‘ಸಂಪಾದನೋತ್ಸವ’ ಮುಕ್ತಾಯ ಕಾಣಲಿದ್ದು, ಅಲ್ಲಿ ಇದುವರೆಗೆ ಸೇರಿಸಿದ ವಿಷಯಗಳನ್ನು ಕುರಿತ ಸಂಪಾದನಾ ಕಾರ್ಯ ನಡೆಯಲಿದೆ ಎಂದು ಪವನಜ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.