ಶುಕ್ರವಾರ, ಏಪ್ರಿಲ್ 16, 2021
32 °C

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕಾರವಾರ: ರೈತರು, ಕೂಲಿಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸಿಪಿಐ (ಎಂ) ಕಾರ್ಯಕರ್ತರು ಇಲ್ಲಿಯ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ತಹಸೀಲ್ದಾರ ಬಸವರಾಜ ಅವರಿಗೆ ಮನವಿ ಸಲ್ಲಿಸಿದರು. ‘ಅರಣ್ಯ ಅತಿಕ್ರಮಣಕ್ಕೆ ಮಂಜೂರಾತಿ ನೀಡಬೇಕು. ಬೆಲೆ ಏರಿಕೆ ತಡೆಗಟ್ಟಬೇಕು. ಎಲ್ಲರಿಗೂ ರೇಷನ್‌ಕಾರ್ಡ್ ನೀಡಬೇಕು. ರೂ. 2ದರದಲ್ಲಿ 35 ಕೆ.ಜಿ.ಅಕ್ಕಿ ವಿತರಣೆ ಮಾಡಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.‘ಕಾರ್ಮಿಕರಿಗೆ ಕನಿಷ್ಠ ಕೂಲಿ ರೂ. 6000 ಸಿಗಬೇಕು. ಷೇರು ಮಾರುಕಟ್ಟೆ ಆಧಾರಿತ ಪಿಂಚಣಿ ಸೌಲಭ್ಯ ಜಾರಿ ಮಾಡಬಾರದು. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ನಿಲ್ಲಬೇಕು. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಯಾಗಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಶಿರಸಿ ವರದಿ

ಎಲ್ಲಾ ಕುಟುಂಬಗಳಿಗೂ ಪಡಿತರ ಕಾರ್ಡ್ ವಿತರಿಸಿ, ಎರಡು ರೂಪಾಯಿಗೆ ಕೆ.ಜಿ. ಅಕ್ಕಿ ನೀಡಬೇಕು. ಪ್ರತಿ ಕುಟುಂಬಕ್ಕೆ 35 ಕೆ.ಜಿ. ಆಹಾರ ಧಾನ್ಯ ನೀಡಬೇಕು. ಕೃಷಿ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೇ ಸರ್ಕಾರ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಸ್ಥಳೀಯ ಘಟಕ, ಅಂಗನವಾಡಿ ನೌಕರರ ಸಂಘ, ಹಮಾಲಿ ಕಾರ್ಮಿಕರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿದವು.ನಗರದ ಎಪಿಎಂಸಿಯಿಂದ ಮೆರವಣಿಗೆಯಲ್ಲಿ ಬಂದು ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರ ಕೃಷಿ ಕೂಲಿ ಕಾರ್ಮಿಕರು, ಹಮಾಲಿಗಳ ಸಮಸ್ಯೆಯತ್ತ ಗಮನ ಹರಿಸಬೇಕು. ಹಮಾಲಿಗಳಿಗೆ ಉಚಿತ ನಿವೇಶನ ನೀಡಬೇಕು. ದುಡಿಯುವ ಕಾರ್ಮಿಕರಿಗೆ ಲೈಸನ್ಸ್ ನೀಡಬೇಕು. ಹಮಾಲಿಗಳ ಹೊಸ ಪಿಂಚಣಿ ಯೋಜನೆ ಕೈಬಿಡಬೇಕು. 55 ವರ್ಷ ಮೇಲ್ಪಟ್ಟ ಹಮಾಲಿ ಕಾರ್ಮಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆ ಸೌಲಭ್ಯ ನೀಡುವಂತಾಗಬೇಕು ಎಂದು ಆಗ್ರಹಿಸಲಾಯಿತು.‘ಬೆಲೆ ಏರಿಕೆಯಿಂದ ಈಗಾಗಲೇ ಜನ ತತ್ತರಿಸಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ರೂ. 9200 ಕೋಟಿ ಹೊಸ ತೆರಿಗೆ ಮೂಲಕ ಜನರ ಮೇಲೆ ಇನ್ನಷ್ಟು ಹೊರೆ ಹೊರಿಸಿದೆ. ಪರಿಶಿಷ್ಟ ಜನಾಂಗ ಮತ್ತು ಇತರ ಅರಣ್ಯವಾಸಿಗಳ ಪಾರಂಪರಿಕ ಹಕ್ಕು ಮಾನ್ಯತಾ ಕಾಯಿದೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು. ವಿವಿಧ ಸಂಘಟನೆಗಳ ಪ್ರಮುಖರಾದ ಸಿ.ಆರ್. ಶಾನಭಾಗ, ಮುತ್ತು ಪೂಜಾರಿ, ನಾಗಪ್ಪ ನಾಯ್ಕ, ಬಂಗಾರೇಶ್ವರ ಗೌಡ, ನಾಗರತ್ನಾ, ವನಮಾಲಾ ಮತ್ತಿತರರು ನೇತೃತ್ವ ವಹಿಸಿದ್ದರು.ಹೊನ್ನಾವರ ವರದಿ

ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರವನ್ನು ಖಂಡಿಸಿ ಸಿಪಿಐ(ಎಂ) ಹೊನ್ನಾವರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ‘ತಾಲ್ಲೂಕು ಕಚೇರಿಗೆ ಮುತ್ತಿಗೆ’ ಪ್ರತಿಭಟನೆ ನಡೆಯಿತು. ಪಟ್ಟಣದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಹಂಚು, ಕಟ್ಟಡ ಕಾರ್ಮಿಕರ,ಅಂಗನವಾಡಿ ನೌಕರರ ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.ಮುಖ್ಯಮಂತ್ರಿಗಳ ಭೂಹಗರಣ, ರೆಡ್ಡಿಗಳ ಅಕ್ರಮ ಗಣಿಗಾರಿಕೆ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿದೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಿಐಟಿಯು ಉಪಾಧ್ಯಕ್ಷ ತಿಲಕ ಗೌಡ ಹೇಳಿದರು. ಹಂಚು ಕಾರ್ಮಿಕ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ರಾಮಾ ಗೌಡ, ವಿವಿಧ ಸಂಘಟನೆಗಳ ಸದಸ್ಯರಾದ ಮಂಜುನಾಥ ಗೌಡ, ಗೀತಾ ನಾಯ್ಕ, ಮೀನಾ ಗೌಡ, ಭಾವನಾ ನಾಯ್ಕ, ಸೋಮು ಮೇಸ್ತ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.ಹಳಿಯಾಳ ವರದಿ

ರಾಜ್ಯ ಸರ್ಕಾರ ಜನ ವಿರೋಧಿ ನೀತಿ ವಿರುದ್ಧ ಸಿಐಟಿಯು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೆಶನ್ ಮಂಗಳವಾರ ಪ್ರತಿಭಟನೆ ನಡೆಸಿತು. ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ನೂರಾರು ಕಾರ್ಯಕರ್ತರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಲಾಯಿತುಇದಕ್ಕೂ ಮೊದಲು ಪ್ರತಿಭಟನಾಕಾರರು ತಹಸೀಲ್ದಾರ ಕಚೇರಿ ಆವರಣದಾಚೆ ಬಹಿರಂಗ ಸಭೆ ನಡೆಸಿದರು. ‘ಕರ ವಸೂಲಿಗಾರರ ನೇಮಕಾತಿಯಲ್ಲಿ ಪರೀಕ್ಷಾ ಪದ್ಧತಿ ಕೈ ಬಿಡಬೇಕು. ಶೇ.100 ರಷ್ಟು ಕಾರ್ಯದರ್ಶಿ ಗ್ರೇಡ್-2 ಹುದ್ದೆಗೆ ಮುಂಬಡ್ತಿ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಗಳಿಗೆ 25 ಲಕ್ಷ ಅನುದಾನ ನೀಡಬೇಕು. 3ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸನ್ನು ಜಾರಿಗೊಳಿಸಬೇಕು. ಪಂಚಾಯಿತಿ ನೌಕರರಿಗೆ ಪ್ರತಿ ಖಾತೆಗಳ ಮೂಲಕ ವೇತನ ಕಾಯ್ದಿರಿಸಲು ಆದೇಶ ಹೊರಡಿಸಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಯಿತು.ಸಿಐಟಿಯು ನ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ ನಾಯ್ಕ, ಜಿಲ್ಲಾ ಮುಖಂಡ ಆರ್.ಎಂ.ಮುಲ್ಲಾ, ತಾಲ್ಲೂಕು ಘಟಕದ ಅಧ್ಯಕ್ಷ ಉದಯ ನಾಯ್ಕ, ಪಂಚಾಯಿತಿ ನೌಕರರ ಅಧ್ಯಕ್ಷ ಟಿ.ಎಂ. ಗುರುಬಣ್ಣನವರ, ಪ್ರಶಾಂತ ಬಡಸ್ಕರ, ನೇತ್ರಾವತಿ ಅಂಕೋಲೆಕರ, ಜಯಶ್ರೀ ಹಿರೇಕರ ಮತ್ತಿತರರು ನೇತೃತ್ವ ವಹಿಸಿದ್ದರು.ಮುಂಡಗೋಡ ವರದಿ

ಸಮರ್ಪಕ ಪಡಿತರ ಚೀಟಿಯನ್ನು ವಿತರಣೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದವರು ಜಂಟಿಯಾಗಿ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು. ಮನವಿ ಅರ್ಪಿಸಿದ ಬಳಿಕವೂ ಪ್ರತಿಭಟನೆ ಮುಂದುವರಿದಿದ್ದರಿಂದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.ಇಲ್ಲಿಯ ಪ್ರವಾಸಿಮಂದಿರದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಸಕ್ತ ಬಜೆಟ್‌ನಲ್ಲಿ ರೂ. 9200 ಕೋಟಿಯಷ್ಟು ಹೊಸ ತೆರಿಗೆಯನ್ನು ಜನಸಾಮಾನ್ಯರ ಮೇಲೆ ಹೊರಿಸಿ ಬೆಲೆ ಏರಿಕೆಗೆ ಕಾರಣರಾಗಿದ್ದಾರೆ. ಎರಡು ರೂಪಾಯಿ ದರದಲ್ಲಿ ಪ್ರತಿ ಕುಟುಂಬಕ್ಕೆ 35 ಕೆ.ಜಿ.ಯಷ್ಟು ಅಕ್ಕಿಯನ್ನು ವಿತರಿಸದೇ ಯುನಿಟ್ ಪದ್ದತಿಯನ್ನು ಜಾರಿಗೊಳಿಸಿರುವುದನ್ನು ಕೈಬಿಡುವಂತೆ ಒತ್ತಾಯಿಸಿದರು.ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದ ಕೂಲಿಕಾರರಿಗೆ ನಿಗದಿತ ಅವಧಿಯಲ್ಲಿಯೇ ಕೂಲಿಹಣ ನೀಡಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ವಸತಿರಹಿತರ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು. ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಬೇಕು. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಮುಂತಾದ ಯೋಜನೆಗಳಿಗೆ ಹೊಸದಾಗಿ ಅರ್ಜಿಗಳನ್ನು ಶೀಘ್ರದಲ್ಲಿಯೇ ಪರಿಶೀಲಿಸಿ ವೇತನ ಮಂಜೂರಿ ಮಾಡಬೇಕು. ಶೇ.100ರಷ್ಟು ಬೆಳೆಹಾನಿ ಪರಿಹಾರವನ್ನು ನೀಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯ ಭೀಮಣ್ಣ ಬೋವಿ, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಧಾರವಾಡ, ಹನಮಂತಪ್ಪ ನ್ಯಾಸರ್ಗಿ, ಚಂದ್ರಶೇಖರ ಕೆಳಗಿನಮನಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಅಂಕೋಲಾ ವರದಿ

ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ ಮತ್ತು ಮಿತಿಮೀರಿದ ಭ್ರಷ್ಟಾಚಾರದಿಂದ ಜನಸಾಮಾನ್ಯರ ಬದುಕು ಅಸಹನೀಯವಾಗಿದೆ ಎಂದು ಸಿಪಿಐ (ಎಂ) ಜಿಲ್ಲಾ ಮುಖಂಡ ಶಾಂತಾರಾಮ ನಾಯಕ ಆರೋಪಿಸಿದರು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ಪಟ್ಟಣದಲ್ಲಿ ಸಿಪಿಐ (ಎಂ) ಕಾರ್ಯಕರ್ತರು ತಹಸೀಲ್ದಾರ ಕಚೇರಿ ಎದುರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡಬೇಕು, ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಟ ಮಾಸಿಕ  ಆರು ಸಾವಿರ ರೂಪಾಯಿ ವೇತನ ನೀಡಬೇಕು. ಆಹಾರ ಭದ್ರತೆ, ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ತಾರತಮ್ಯವಿಲ್ಲದೆ ದೊರೆಯಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಜಿಲ್ಲೆಯ ಅಭಿವೃದ್ಧಿಯ ಕುರಿತು ಉಸ್ತುವಾರಿ ಸಚಿವರು ಉತ್ಸಾಹ ಹೊಂದಿಲ್ಲ ಎಂದು ಟೀಕಿಸಿದರು.ನಾಗೇಶ ಗೌಡ, ಗೌರೀಶ ನಾಯಕ, ದೇವರಾಯ ನಾಯಕ, ಲಲಿತಾ ಶೇಡಗೇರಿ, ಶಾಂತಿ ನಾಯಕ, ಮಿತ್ರಾ ಅಚಾರಿ, ಗಣಪತಿ ನಾಯ್ಕ ಮುಂತಾದವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.