ವಿವೇಕನಗರದಲ್ಲಿ ಇಂದು

7

ವಿವೇಕನಗರದಲ್ಲಿ ಇಂದು

Published:
Updated:

ಬೆಂಗಳೂರು: ಜನವರಿ 14. ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರವಾದರೆ ನಗರದ ಕ್ರೈಸ್ತ ಬಾಂಧವರಿಗೆ ಸಂಕ್ರಾಂತಿಯ ಜೊತೆಗೆ ದಿವ್ಯ ಬಾಲ ಯೇಸುವಿನ ಹಬ್ಬದ ಸಂಭ್ರಮವೂ ಇದೆ.

ಖ್ಯಾತಿ ಪಡೆದ ವಿವೇಕ ನಗರದ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ನಡೆಯಲಿರುವ ಜಾತ್ರೆಗೆ ವರ್ಷ ವರ್ಷವೂ ಎಲ್ಲೆಡೆಯಿಂದ ಭಕ್ತರ ಸಾಗರವೇ ಹರಿದು ಬರುತ್ತದೆ. ಸುಮಾರು 40 ವರ್ಷಗಳ ಇತಿಹಾಸವಿದೆ. ಭಾಷೆ, ಜಾತಿ, ಮತಗಳ ಭೇದವಿಲ್ಲದೇ ಎಲ್ಲ ಸಮುದಾಯದ ಜನರು ಭಕ್ತಿ ಶ್ರದ್ಧೆಯಿಂದ ಪಾಲ್ಗೊಳ್ಳುವ ಈ ಹಬ್ಬ ಬೆಂಗಳೂರಿನ ವಿಶೇಷ ಹಬ್ಬ. ಅಂತೆಯೇ ವಿವೇಕ ನಗರದ ಬೀದಿ ಈಗ ಬಣ್ಣ-ಬಣ್ಣದ ದೀಪಗಳಿಂದ ಝಗಮಗಿಸುತ್ತಿದೆ.

‘ಇದು ಕೇವಲ ಜಾತ್ರೆಯಲ್ಲ. ನಮ್ಮ ಪಾಲಿಗೆ ಇದೊಂದು ಕಲ್ಪವೃಕ್ಷ. ಕೇಳುವ ಅರ್ಹತೆಯೊಂದಿಗೆ ಶ್ರದ್ಧೆಯಿಂದ ಕೇಳಿಕೊಂಡರೆ ಫಲಿಸದ ಫಲವಿಲ್ಲ. ಇಲ್ಲಿ ನಮ್ಮ ಹರಕೆಗಳನ್ನು ಸಲ್ಲಿಸುವುದೆಂದರೆ ಪ್ರಾಣಿ ಬಲಿ ಮಾಡಬೇಕೆಂದೇನೂ ಇಲ್ಲ. ಚಿನ್ನ-ಬೆಳ್ಳಿಯ ಕಾಣಿಕೆ ಸಲ್ಲಿಸುವ ಅಗತ್ಯವೂ ಇಲ್ಲ. ಸುಮ್ಮನೇ ಒಂದು ಮೇಣದಬತ್ತಿ ಹಚ್ಚಿಟ್ಟರೆ ಬಾಲ ಯೇಸು ಸಂತೃಪ್ತನಾಗುತ್ತಾನೆ. ಇದೇ ಇಲ್ಲಿನ ವಿಶೇಷತೆ ಎನ್ನಬಹುದು’ ಎನ್ನುತ್ತಾರೆ ಕೇರಳದ ಫರ್ನಾಂಡಿಸ್ ದಂಪತಿ.

‘ಕಳೆದ ಸುಮಾರು 12 ವರ್ಷಗಳಿಂದ ಈ ಬಾಲ ಯೇಸುವಿನ ಸನ್ನಿಧಿಗೆ ಬಂದು ಹೋಗುತ್ತಿದ್ದೇವೆ. ಕೇಳಿಕೊಂಡು ಬಂದವರನ್ನು ಯೇಸು ಯಾವತ್ತೂ ಬರಿಗೈಯಿಂದ ಕಳುಹಿಸುವುದಿಲ್ಲ ಎಂಬುದು ನಮ್ಮ ಅನುಭವದ ಮಾತು’ ಎನ್ನುತ್ತಾರೆ ಮಂಗಳೂರಿನ ಅನ್ನಪೂರ್ಣ.

ಉತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 5 ಗಂಟೆಯಿಂದ ಆರಂಭಗೊಳ್ಳುವ ವಿವಿಧ ಧಾರ್ಮಿಕ ಆಚರಣೆಗಳು, ಕಾರ್ಯವಿಧಿಗಳು ದಿನವಿಡೀ ಜರುಗಲಿವೆ. ಸಂಜೆ 6ಕ್ಕೆ ಅದ್ಧೂರಿ ರಥೋತ್ಸವ ನೆರವೇರಲಿದ್ದು, ಬಾಲ ಯೇಸುವಿನ ಮೆರವಣಿಗೆ ನಡೆಯುತ್ತದೆ.

ಮೆರವಣಿಗೆ ಸಾನ್ನಿಧ್ಯವನ್ನು ಡಾ.ಬರ್ನಾಡ್ ಮೋರಸ್ ವಹಿಸಿಕೊಳ್ಳುವರು ಎಂದು ದಿವ್ಯ ಬಾಲಯೇಸು ದೇವಾಲಯದ ಸ್ವಾಮಿ ಬಾಲ್‌ರಾಜ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry