ಮಂಗಳವಾರ, ಜನವರಿ 21, 2020
19 °C

ವಿವೇಕಾನಂದ ವಿಚಾರಕ್ರಾಂತಿ ಚಿಂತನಾಗೋಷ್ಠಿಯಲ್ಲಿ ಜಿ.ಕೆ.ಗೋವಿಂದರಾವ್ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಾಮಾನ್ಯ ಮನುಷ್ಯನಿಗೂ ಗೌರವ ಸಿಗಬೇಕು ಎಂದು ಪ್ರತಿಪಾದಿಸುತ್ತಿದ್ದ ಭಾರತದ ಸಾಮಾಜಿಕ ಗುರು ವಿವೇಕಾನಂದರ ಹೆಸರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸುಳ್ಳು ವಿಚಾರಗಳನ್ನು  ಪ್ರಚುರಪಡಿಸುತ್ತಿರುವುದು ಖಂಡನೀಯ~ ಎಂದು ಲೇಖಕ ಜಿ.ಕೆ. ಗೋವಿಂದರಾವ್ ಹೇಳಿದರು.ದಲಿತ ಸಂಘರ್ಷ ಸಮಿತಿಯು (ಅಂಬೇಡ್ಕರ್ ವಾದ) ಸಂವಿಧಾನದ ದಿನಾಚರಣೆ ಅಂಗವಾಗಿ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಸೆನೆಟ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ವಿವೇಕಾನಂದ ವಿಚಾರಕ್ರಾಂತಿ~ ಕುರಿತ ಚಿಂತನಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.`ರಾಮಕೃಷ್ಣ ಪರಮಹಂಸರು ಹಿಂದೂ ಧರ್ಮದ ಉದ್ಧಾರಕ್ಕಾಗಿ ಅವತರಿಸಿದ್ದಾರೆ ಎಂಬುದಾಗಿ ವಿವೇಕಾನಂದರು ಹೇಳಿದ್ದರು ಎಂದು ಆರ್‌ಎಸ್‌ಎಸ್ ಮುಖಂಡರು ಹೇಳುತ್ತಾರೆ. ಆದರೆ ಎಲ್ಲಿ, ಯಾವ ಸಂದರ್ಭದಲ್ಲಿ, ಯಾವ ದಿನ ಹೇಳಿಕೆ ನೀಡಿದ್ದರು ಎಂಬುದನ್ನು ಹೇಳುವುದಿಲ್ಲ. ಮೃತ ವ್ಯಕ್ತಿಯ ಹೆಸರಿನಲ್ಲಿ ಸುಳ್ಳು ಹೇಳಿಕೆ ನೀಡುವ ಮೂಲಕ ಪರಮಹಂಸರು ಹಾಗೂ ವಿವೇಕಾನಂದರಿಗೆ ಅಗೌರವ ತೋರುತ್ತಿದ್ದಾರೆ~ ಎಂದರು.`ದೇಶದ ಮೇಲೆ ಪರಕೀಯರ ದಾಳಿ ಭಾರತೀಯರು ನಡೆದುಕೊಂಡ ರೀತಿಯ ಫಲ. ಗೌರವ ಸಿಗದ ಧರ್ಮದಿಂದ ಜನತೆ ವಿಮುಖರಾಗಿ ಮತಾಂತರಗೊಳ್ಳುತ್ತಾರೆ ಎಂಬುದು ಅವರ ಭಾವನೆಯಾಗಿತ್ತು. ಪರಕೀಯ ದಾಳಿ ಮತ್ತು ಮತಾಂತರ ಅವರಿಗೆ ಅಚ್ಚರಿ ಮೂಡಿಸಿರಲಿಲ್ಲ. ಆದರೆ ಕೆಲವರು ಅದನ್ನು ಒಪ್ಪಲು ತಯಾರಿಲ್ಲ~ ಎಂದು ಮಾರ್ಮಿಕವಾಗಿ ನುಡಿದರು.`ವಿವೇಕಾನಂದರು ಕಾವಿ ಧರಿಸಿದ್ದ ಸನ್ಯಾಸಿ ಮಾತ್ರವಲ್ಲದೆ, ಸಮಾಜದ ವಿವಿಧ ಸ್ತರದಲ್ಲಿರುವ ವ್ಯಕ್ತಿಗಳ ಹಿತಾಸಕ್ತಿಯನ್ನು ಕಾಪಾಡುವ  ಕುರಿತು ದೂರದೃಷ್ಟಿ ಹೊಂದಿದ್ದರು. ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಸಾಮಾನ್ಯ ಜನರ ಒಳಿತನ್ನು ಬಯಸಿದ್ದರು~ ಎಂದು ಹೇಳಿದರು.`ದೇಶದಲ್ಲಿರುವುದು ಒಂದೇ ಧರ್ಮ, ಅದು ಪ್ರಜಾಪ್ರಭುತ್ವ. ಹಾಗೆಯೇ ಇರುವುದು ಒಂದೇ ಧರ್ಮಗ್ರಂಥ, ಅದು ಸಂವಿಧಾನ. ಪೇಜಾವರ ಮಠದ ವಿಶ್ವೇಶತೀರ್ಥರು ಹೇಳುವಂತೆ ಶಾಸ್ತ್ರ ಹಾಗೂ ಸಂವಿಧಾನವನ್ನು ಸಮನ್ವಯಗೊಳಿಸುವುದು ಸಾಧ್ಯವಿಲ್ಲ~ ಎಂದರು.ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ, `ದೇಶದ ಸಾಮಾಜಿಕ ಸಂರಚನೆಯ ಅರಿವಿಲ್ಲದ ಮುಗ್ದ ಮನಸ್ಸಿನ ಅಣ್ಣಾ ಹಜಾರೆ ಅವರ ಮೂಲಕ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೇಲೆ ಸವಾರಿ ನಡೆಸುವ ಹುನ್ನಾರ ನಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಆಘಾತ ನೀಡುವ ಪ್ರಯತ್ನ ನಡೆದಿದೆ~ ಎಂದು ಆತಂಕ ವ್ಯಕ್ತಪಡಿಸಿದರು.`ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಮಠಗಳಲ್ಲಿ. ಈ ಮಠಗಳು ಶಿಕ್ಷಣ ಕ್ಷೇತ್ರವನ್ನು ತಮ್ಮ ಅಧೀನದಲ್ಲಿರಿಸಿಕೊಂಡಿವೆ. ಇದರ ವಿರುದ್ಧ ಮಾತ್ರ ಯಾರೊಬ್ಬರೂ ಹೋರಾಡುತ್ತಿಲ್ಲ~ ಎಂದು ವಿಷಾದಿಸಿದರು.`ಪ್ರಜಾವಾಣಿ~ ಪತ್ರಿಕೆಯಲ್ಲಿ ದಿನೇಶ್ ಅಮಿನ್ ಮಟ್ಟು ಅವರು ಬರೆದ ಅಂಕಣವನ್ನು ಓದಿದರೆ ವಿವೇಕಾನಂದರ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ನಾವು ಕೂಡ ವಿವೇಕಾನಂದರಂತೆ ಆಗಬಹುದು ಎಂಬ ವಿಶ್ವಾಸ ಮೂಡುತ್ತದೆ~ ಎಂದರು.`ಲೇಖನ ಓದುವಾಗ ಯಾವುದೋ ಮೋಹಕ್ಕೆ ಬಿದ್ದು ಅಜ್ಞಾನಿಗಳಾದೆ, ಅನುಭವದ ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಆ ಮೂಲಕ ವಿವೇಕ ಬೆಳೆಸಿಕೊಳ್ಳಬೇಕು. ಇಂದಿನ ಸಂದರ್ಭದಲ್ಲಿ ವಿವೇಕಾನಂದ ಕುರಿತು ಮರು ಓದಿನ ಅಗತ್ಯವಿದೆ~ ಎಂದು ಅಭಿಪ್ರಾಯಪಟ್ಟರು.ವಿಚಾರವಾದಿ ನಗರಗೆರೆ ರಮೇಶ್, ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)