ಮಂಗಳವಾರ, ಮೇ 24, 2022
21 °C

ವಿಶೇಷ ಮಕ್ಕಳಿಗೆ ವಿಶೇಷ ಆದ್ಯತೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | | ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆಯೇ ನೀವು   ವಿಶೇಷ ಆಸಕ್ತಿ    ವಹಿಸಲು ಕಾರಣ?

ಬುದ್ಧಿಮಾಂದ್ಯ, ಮನೋ-ದೈಹಿಕ ವೈಕಲ್ಯ, ಕಲಿಕಾ ನ್ಯೂನತೆಯಿಂದ ಕೂಡಿದ ಮಕ್ಕಳ ಬೆಳವಣಿಗೆ, ಸುಧಾರಣೆ ಹಂತಗಳನ್ನು ಕಣ್ಣಾರೆ ಕಾಣುವುದಿದೆಯಲ್ಲ,  ಅದಕ್ಕಿಂತ ದೊಡ್ಡದು ಬೇರೇನೂ ಇಲ್ಲ. ಏಕೆಂದರೆ ಮನೋಚಿಕಿತ್ಸೆ ಅವಶ್ಯವಿರುವ ವಯಸ್ಕರು ನಿರಂತರವಾಗಿ, ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಾರೆ ಎಂದು ಹೇಳುವುದು ಕಷ್ಟ. ಹೀಗಾದಾಗ ಚಿಕಿತ್ಸೆಯ ಫಲಿತಾಂಶದ ಬಗ್ಗೆ ಖಚಿತತೆ ಇರಲಾರದು. ಆದರೆ ಮಕ್ಕಳ ವಿಷಯದಲ್ಲಿ ಇದು ಹೀಗಾಗುವುದಿಲ್ಲ, ವೈದ್ಯರೊಂದಿಗೆ ಪೋಷಕರೂ ಮಕ್ಕಳ ಬೆಳವಣಿಗೆಯನ್ನು ತಪಸ್ಸಿನ ಫಲವೆಂಬಂತೆ ನಿರೀಕ್ಷಿಸುತ್ತಿರುತ್ತಾರೆ.  ಆದ್ದರಿಂದ ಮಕ್ಕಳ ವಿಭಾಗ ನನಗೆ ಇಷ್ಟವಾಯಿತು. ಇದೊಂದು ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳುವ ಪರಿ ಎಂದೇ ಭಾವಿಸಿದ್ದೇನೆ.

ನಿಮ್ಮ ಕಾರ್ಯ ವಿಧಾನದ ಬಗ್ಗೆ ಹೇಳಿ...

ಅಮೆರಿಕದಲ್ಲಿ ಕಿಂಡರ್ ಗಾರ್ಡನ್‌ನಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ವ್ಯವಸ್ಥೆ ಇದೆ. ಶಾಲೆಗೆ ಸೇರುವ ಮೊದಲೇ ಅಂದರೆ ಮೂರು ವರ್ಷ ತುಂಬಿದ ಮಕ್ಕಳ ಮನೋ ಮೌಲ್ಯ ನಿರ್ಧರಿಸುವ ಜವಾಬ್ದಾರಿ ಶಿಕ್ಷಣ ಇಲಾಖೆ ನಿರ್ವಹಿಸುತ್ತದೆ. ನ್ಯೂನತೆ ಕಂಡು ಬಂದ ಮಕ್ಕಳನ್ನು ಗುರುತಿಸಿ ಅಂಥ ಮಕ್ಕಳಿಗೆ ಶಿಕ್ಷಣದ ಜತೆಗೇ ಅವಶ್ಯವಿರುವ ಚಿಕಿತ್ಸೆಯನ್ನು ಸರ್ಕಾರವೇ ಕಲ್ಪಿಸುತ್ತದೆ. ಕಳೆದ ಹತ್ತು ವರ್ಷಗಳಿಂದ ಈ ಇಲಾಖೆಯಲ್ಲಿ ನಾನು ಕಾರ್ಯ ನಿರ್ವಹಿಸುತ್ತಿದ್ದು, ಮೂರರಿಂದ 18 ವರ್ಷಗಳ ವರೆಗಿನ ಮಕ್ಕಳ ಮಾನಸಿಕ ಬೆಳವಣಿಗೆಯ ಮಾಪನ ವಿಶ್ಲೇಷಣೆ ಮತ್ತು ಪರೀಕ್ಷೆಯನ್ನು ಮಾಡಿ ವರದಿ ಸಿದ್ಧಪಡಿಸುತ್ತಾ ಬಂದಿದ್ದೇನೆ.

ಎಲ್ಲರಂತಿಲ್ಲ ನಮ್ಮ ಮಕ್ಕಳು... ಎಂದು ಗೊತ್ತಾದಾಗ  ಪೋಷಕರ ಮನಸ್ಥಿತಿ, ಪ್ರತಿಕ್ರಿಯೆ ಮತ್ತು ಅವರನ್ನು  ನಿಭಾಯಿಸುವುದು ತುಸು ಕಷ್ಟ ಅಲ್ಲವೆ?

ಖಂಡಿತ ಇದು ಕಷ್ಟವೇ. ಮಕ್ಕಳು ಹೇಗೇ ಇರಲಿ... ನಮ್ಮ ಮಕ್ಕಳು ನಮ್ಮ ಮಕ್ಕಳೇ. ವಸ್ತುಸ್ಥಿತಿಯ ಅರಿವಿದ್ದರೂ ಅದನ್ನು ಅರಗಿಸಿಕೊಳ್ಳಲಾಗದಂಥ ಭಾವನಾತ್ಮಕ ಬಂಧ ಅದು. ಮುಂದುವರಿದ ದೇಶ ಎಂದು ಅಮೆರಿಕವನ್ನು ಹೇಳುತ್ತೇವೆಯಾದರೂ ಸಾಕಷ್ಟು ‘ಅನಕ್ಷರಸ್ಥ’ ಪಾಲಕರು ಅಲ್ಲಿಯೂ ಇದ್ದಾರೆ.ಇದಕ್ಕೆ ಕಾರಣ ಅಲ್ಲಿಯ ಸಾಮಾಜಿಕ ವ್ಯವಸ್ಥೆ, ಮಕ್ಕಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ‘ಪಾಲಕ’ರಾಗಿಬಿಡುತ್ತಾರೆ. ಅನಿವಾರ್ಯವಾಗಿ ಕೌಟುಂಬಿಕ ನಿರ್ವಹಣೆಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಸಣ್ಣ-ಪುಟ್ಟ ಕೆಲಸಕ್ಕೆ ಆತುಕೊಳ್ಳಬೇಕಾಗುತ್ತದೆ. ಸಣ್ಣ ವಯಸ್ಸು, ಕಡಿಮೆ ಅನುಭವ, ಜೊತೆಗೆ ಇಂಥ ‘ವಿಶೇಷ’ ಮಕ್ಕಳೇನಾದರೂ ಹುಟ್ಟಿಬಿಟ್ಟರೆ ಅವರ ಪಾಡು ಹೇಳತೀರದು. ಅಲ್ಲಿಯ ಸರ್ಕಾರವೇ ಇಂಥ ಮಕ್ಕಳ ಚಿಕಿತ್ಸೆ, ಶಿಕ್ಷಣಕ್ಕಾಗಿ ಖರ್ಚು ವೆಚ್ಚ ಭರಿಸುತ್ತದೆಯಾದರೂ ಪೋಷಕರಿಗೆ ಪರಿಸ್ಥಿತಿಯನ್ನು ಮನದಟ್ಟು ಮಾಡಿಸುವುದು ಸವಾಲೇ ಸರಿ. ಸತ್ಯ ಎದುರಿಗಿದ್ದರೂ ಒಪ್ಪದಂಥ ಮನಸ್ಥಿತಿಯಿಂದ ಅವರನ್ನು ಹೊರತಂದು ಸಮಾಧಾನಿಸಲು ಅಪಾರ ತಾಳ್ಮೆ ಬೇಕು.ಅಷ್ಟೇ ಏಕೆ ಉನ್ನತ ಶಿಕ್ಷಣ ಪಡೆದ ಪಾಲಕರಿಗೂ ವಾಸ್ತವ ಅರ್ಥ ಮಾಡಿಸುವ ಬಗೆ ತುಂಬಾ ಕ್ಲಿಷ್ಟಕರ. ಮಗುವಿನ ಬಗ್ಗೆ ನೀಡಿದ ವರದಿಯಲ್ಲಿ ಪರಿಭಾಷೆ (ಟರ್ಮಿನಾಲಜಿ)ಯನ್ನು ಅತ್ಯಂತ ಜಾಗ್ರತೆಯಿಂದ, ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಬಳಸಬೇಕು. ಅಕಸ್ಮಾತ್ ವರದಿಯಲ್ಲಿ ಹೆಚ್ಚೂ ಕಡಿಮೆಯಾದರೆ ಭಾವೋದ್ವೇಗಕ್ಕೆ ಒಳಗಾಗುವ ಪೋಷಕರು ಕಾನೂನಿನ ಕಟ್ಟೆ ಹತ್ತಲು, ಮಾಧ್ಯಮಗಳಿಗೆ ತಿಳಿಸಲು ಹಿಂದೆ ಮುಂದೆ ನೋಡುವುದಿಲ್ಲ.

ವಿಶೇಷ ಮಕ್ಕಳ ಶಿಕ್ಷಣ ಮತ್ತು ಉದ್ಯೋಗವ್ಯವಸ್ಥೆ...

ವಿಶೇಷ ಮಕ್ಕಳನ್ನು ಇಲ್ಲಿ ವಿಶೇಷ ಆದ್ಯತೆಯೊಂದಿಗೆ ನೋಡಿಕೊಳ್ಳಲಾಗುತ್ತದೆ. ಮಕ್ಕಳ ನ್ಯೂನತೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಆರು ಮಕ್ಕಳಿಗೊಬ್ಬ ಶಿಕ್ಷಕರು ಮತ್ತು ಒಬ್ಬ ಸಹಾಯಕರನ್ನು ನೇಮಿಸಿ ಪ್ರತ್ಯೇಕವಾಗಿ ಚಿಕಿತ್ಸೆ ಹಾಗೂ ಶಿಕ್ಷಣವನ್ನೂ ನೀಡಲಾಗುತ್ತದೆ.ಮಕ್ಕಳು 14 ಇಲ್ಲವೆ 15 ವರ್ಷಕ್ಕೆ ಕಾಲಿಡುತ್ತಿದ್ದಂತೆ ಉದ್ಯೋಗ ಸಂಬಂಧಿ (ವೊಕೇಶನಲ್ ಸ್ಕೂಲ್) ಶಾಲೆಗೆ ಅವರನ್ನು ವರ್ಗಾಯಿಸಿ ಅವರ ಸಾಮರ್ಥ್ಯಕ್ಕನುಗುಣವಾಗಿ ತರಬೇತಿ  ನೀಡಲಾಗುತ್ತದೆ. ನಂತರ ಖಾಸಗಿ ವಲಯಗಳಲ್ಲಿ ಉದ್ಯೋಗಾವಕಾಶವನ್ನೂ ಕಲ್ಪಿಸಿ ಕೊಡಲಾಗುತ್ತದೆ. ಬಸ್ ಪ್ರಯಾಣ, ಕೆಲಸದ ವಿಧಾನ ಅವರಿಗೆ ಕರಗತವಾಗುವವರೆಗೂ ಒಬ್ಬೊಬ್ಬರಿಗೆ ಒಬ್ಬೊಬ್ಬ ಸಹಾಯಕರನ್ನು ನೇಮಿಸಿರುತ್ತಾರೆ.

ಅಲ್ಲಿಯ ಸಾಮಾಜಿಕ ವ್ಯವಸ್ಥೆ, ಜೀವನಶೈಲಿಯ  ‘ಅಡ್ಡ’ ಪರಿಣಾಮದಿಂದ ಕೆಲವೊಮ್ಮೆ ಇಂಥ ಮಕ್ಕಳ  ಪೋಷಣೆ ಕಷ್ಟಕರವೆನಿಸಬಹುದಲ್ಲವೆ?

ಅಪ್ಪನೇ ಗೊತ್ತಿಲ್ಲದ ಮಕ್ಕಳು ಒಂದೆಡೆ ಇದ್ದರೆ, ಹೊಸ ಸಂಗಾತಿಯನ್ನು ಅರಸಿ ಹೋಗುವ ಅಮ್ಮಂದಿರೂ ಅಲ್ಲಿದ್ದಾರೆ. ಮಾದಕ ವಸ್ತು ಸೇವನೆ, ಕುಡಿತ, ಸಂಗಾತಿಗಳನ್ನು ಬದಲಾಯಿಸುವುದು ಎಲ್ಲವೂ ಅಲ್ಲಿ ಸಾಮಾನ್ಯ.ಈ ರೀತಿಯ ಮಕ್ಕಳು ಹುಟ್ಟಿದಲ್ಲಿ ಅವರನ್ನು ನಿಭಾಯಿಸುವ ತಾಳ್ಮೆ ಎಲ್ಲರಿಗೂ ಇರುತ್ತದೆ ಎಂದು ಹೇಳಲಾಗುವುದಿಲ್ಲ. ತಮ್ಮ ವೈಯಕ್ತಿಕ ಜೀವನಕ್ಕೆ ಧಕ್ಕೆ ತಂದುಕೊಂಡು ಮಕ್ಕಳಿಗಾಗಿ ತ್ಯಾಗ ಮಾಡುವವರು ಅಲ್ಲಿ ವಿರಳ. ಆದರೆ ಅಲ್ಲಿ ಇಂಥ ಸಮಸ್ಯೆಗಳಿಗೂ ಅಲ್ಲಿಯ ಸರ್ಕಾರ, ಸಂಘ-ಸಂಸ್ಥೆಗಳು ಉತ್ತರ ಹೇಳುತ್ತವೆ.ಒಂದು ವೇಳೆ ಪೋಷಕರಿಗೆ ಇಂಥ ಮಕ್ಕಳು ಭಾರವೆನಿಸಿದಲ್ಲಿ ಅಥವಾ ವೈಯಕ್ತಿಕ ಕಾರಣಗಳಿಂದ ಮಕ್ಕಳನ್ನು ನೋಡಿಕೊಳ್ಳಲು ಆಗದಿದ್ದಲ್ಲಿ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಉಚಿತ ಪುನರ್ವಸತಿ ಕೇಂದ್ರಗಳೂ ಮಕ್ಕಳ ಹಾಗೂ ಪೋಷಕರ ನೆರವಿಗೆ ಬರುತ್ತವೆ.

 

‘ಆಟಿಸಂ’ ಜಗತ್ತಿನಾದ್ಯಂತ ತನ್ನ ಕರಿನೆರಳನ್ನು  ಚಾಚುತ್ತಿದೆಯಲ್ಲವೆ?

ಹೌದು. ಅಮೆರಿಕದಲ್ಲೇ ಅರ್ಧ ಮಿಲಿಯನ್‌ನಷ್ಟು ಜನರನ್ನು ಆಟಿಸಂ ಆವರಿಸಿದೆ. ಅದರಲ್ಲೂ ಗಂಡು ಮಕ್ಕಳಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆಟಿಸಂಗೆ ಈವರೆಗೂ ನಿರ್ದಿಷ್ಟ ಕಾರಣಗಳು ಪತ್ತೆಯಾಗಿಲ್ಲ.

ಭಾರತದಲ್ಲಿ ವಿಶೇಷ ಮಕ್ಕಳಿಗೆ ಚಿಕಿತ್ಸೆ, ಪೋಷಣೆ  ಒಂದು ಹೊರೆ ಎಂದು ಭಾವಿಸಲು ಕಾರಣ?

ಇಲ್ಲಿಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಆರ್ಥಿಕ ವ್ಯವಸ್ಥೆಯೇ ಇದಕ್ಕೆ ಕಾರಣ. ಎಲ್ಲೆಲ್ಲೂ ಭ್ರಷ್ಟಾಚಾರ. ಆರಂಭಿಕ ಹಂತದಲ್ಲೇ ಮಕ್ಕಳ ನ್ಯೂನತೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಇನ್ನೂ ಇಲ್ಲಿ ಶೈಶವಾವಸ್ಥೆಯಲ್ಲಿದೆ.ಅಲ್ಲದೆ ವೈದ್ಯಕೀಯ ವೆಚ್ಚವೂ ದುಬಾರಿ. ಸಾರ್ವಜನಿಕರಲ್ಲಿ ಚಿಕಿತ್ಸೆ, ತರಬೇತಿ ಬಗ್ಗೆ ಅಷ್ಟೊಂದು ಅರಿವಿಲ್ಲ. ಇದೆಲ್ಲಕ್ಕೆ ಪೂಕರವಾಗಿ ವಿಶ್ವವಿದ್ಯಾಲಯಗಳಲ್ಲಿ ಮನಶಾಸ್ತ್ರ ಅಧ್ಯಯನ ಕೇವಲ ಶಾಸ್ತ್ರಕ್ಕೆ ಸೀಮಿತವಾಗಿದ್ದು ಪ್ರಾಯೋಗಿಕ ಕಲಿಕೆಗೆ ತೆರೆದುಕೊಳ್ಳಬೇಕಿರುವುದು ಅವಶ್ಯವಿದೆ.

ನಿಮ್ಮ ಕೆಲಸಗಳಿಗೆ ಪತಿ, ಮಕ್ಕಳ   ಸಹಕಾರ?

ಬೆಂಗಳೂರಿನಲ್ಲಿ ಮನಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದು ಅಮೆರಿಕದಲ್ಲಿ ಎಂ.ಎಸ್ ಪದವಿ ಪೂರೈಸಿದೆ. 8 ತಿಂಗಳ ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಎಂ.ಎಸ್ ಪದವಿಯ ಪ್ರಾಯೋಗಿಕ ತರಗತಿಗಳನ್ನು ನಿಭಾಯಿಸುತ್ತಿದ್ದ ರೀತಿ ನೆನಪಿಸಿಕೊಂಡರೆ ಈಗಲೂ ಕಣ್ಣು ತುಂಬಿಕೊಳ್ಳುತ್ತವೆ... ಇಬ್ಬರು ಹೆಣ್ಣು ಮಕ್ಕಳ ತಾಯಿ ನಾನು. ಎಷ್ಟೋ ಬಾರಿ ರಾತ್ರಿಯಿಡೀ ಕುಳಿತು ವರದಿ ಸಿದ್ಧಪಡಿಸಬೇಕಾಗುತ್ತದೆ. ಆಗ ಅಡುಗೆ ಮನೆ ಕಡೆಗೆ ಗಮನ ಕೊಡಲಾಗುವುದಿಲ್ಲ. ಹಾಗೆಂದು ಪತಿ-ಮಕ್ಕಳು ಎಂದಿಗೂ ಕೋಪಿಸಿಕೊಂಡಿಲ್ಲ. ನಿರ್ದಿಷ್ಟ ಸಮಯದಲ್ಲಿ ಕೆಲಸ ಮುಗಿಸುವಾಗ ಸ್ವಲ್ಪ ಒತ್ತಡ ಎನ್ನಿಸುವುದು ಸಹಜ. ನಾನೂ ಮನುಷ್ಯಳೇ ಅಲ್ವಾ? ಒಮ್ಮೊಮ್ಮೆ ತಾಳ್ಮೆ ಕಳೆದುಕೊಳ್ಳುವುದೂ ಉಂಟು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.