ಶನಿವಾರ, ಮೇ 28, 2022
31 °C

ವಿಶ್ವಕಪ್ ಕ್ರಿಕೆಟ್: ಭದ್ರತೆ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಿಗೆ ಪೊಲೀಸ್ ಭದ್ರತೆ ಒದಗಿಸುವುದು ಇಲಾಖೆಯ ಕರ್ತವ್ಯವಾಗಿದ್ದು, ಈ ವಿಷಯದಲ್ಲಿ ರಾಜಿ ಇಲ್ಲ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ ತಿಳಿಸಿದರು.ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣದ ಒಳಗೆ ಪೊಲೀಸ್ ಭದ್ರತೆಯ ಅಗತ್ಯವಿಲ್ಲ ಎಂದು ಹೇಳಿದೆ. ಆದರೆ ಭದ್ರತೆ ವಿಷಯವಾಗಿ ನಿರ್ಧಾರ ಕೈಗೊಳ್ಳಬೇಕಿರುವುದು ಪೊಲೀಸ್ ಇಲಾಖೆಯೇ ಹೊರತು  ಕೆಎಸ್‌ಸಿಎ ಅಲ್ಲ’ ಎಂದರು.‘ಪೊಲೀಸ್ ಇಲಾಖೆಗೆ ತನ್ನದೇ ಆದ ಜವಾಬ್ದಾರಿ ಇದೆ. ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಗಳ ವೀಕ್ಷಣೆಗೆ ಸಹಜವಾಗಿ ಹೆಚ್ಚಿನ ಸಂಖ್ಯೆಯ ಜನ ಸೇರುತ್ತಾರೆ.ಆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಇಲಾಖೆಯ ಕರ್ತವ್ಯ. ಆ ಕರ್ತವ್ಯ ನಿರ್ವಹಣೆಗೆ ಇಲಾಖೆಯು ಕೆಎಸ್‌ಸಿಎ ಆಡಳಿತ ಮಂಡಲಿಯಿಂದ ಅನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲ’ ಎಂದು ಅವರು ಹೇಳಿದರು.‘ಕ್ರೀಡಾಂಗಣದ ಒಳಗೆ ಭದ್ರತೆಯ ಅಗತ್ಯವಿಲ್ಲದಿದ್ದರೆ ಆ ಬಗ್ಗೆ ಕೆಎಸ್‌ಸಿಎ, ಪೊಲೀಸ್ ಇಲಾಖೆಗೆ ಪತ್ರ ಬರೆಯಲಿ. ಆ ರೀತಿ ಪತ್ರ ಬರೆದುಕೊಟ್ಟರೆ ಕ್ರೀಡಾಂಗಣದೊಳಗೆ ಪೊಲೀಸ್ ಭದ್ರತೆ ಕಲ್ಪಿಸುವುದಿಲ್ಲ. ಆ ನಂತರ ಕ್ರೀಡಾಂಗಣದ ಒಳಗೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಕೆಎಸ್‌ಸಿಎ ಯೇ ಹೊಣೆಯಾಗಬೇಕು’ ಎಂದು ಸುನಿಲ್‌ಕುಮಾರ್ ತಿಳಿಸಿದರು.‘ಪ್ರತಿ ಪಂದ್ಯದ ಸಂದರ್ಭದಲ್ಲೂ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹೆಚ್ಚಿನ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ.ಅಂತೆಯೇ ಈ ಬಾರಿಯು 1,200ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಭದ್ರತಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿಗೆ ಕೆಎಸ್‌ಸಿಎ ನೀರು, ಶೌಚಾಲಯದಂತಹ ಮೂಲ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.