ಶನಿವಾರ, ಏಪ್ರಿಲ್ 17, 2021
31 °C

ವಿಶ್ವದ ಮೊಟ್ಟ ಮೊದಲ ಇಂಟರ್‌ನೆಟ್ ಕಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇ-ಮೇಲ್ ಓದುವ, ಸಾಮಾಜಿಕ ಸಂಪರ್ಕ ತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳಲ್ಲಿ ಕಾಲ ಕಾಲಕ್ಕೆ ನವೀಕರಣಗೊಳ್ಳುವ ಮಾಹಿತಿಯನ್ನು ತಕ್ಷಣಕ್ಕೆ ಓದುವ ‘ಇಂಟರ್‌ನೆಟ್ ಕಾರ್’ ಅನ್ನು ಅಭಿವೃದ್ಧಿಪಡಿಸಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.ಈ ವಿಶಿಷ್ಟ ಕಾರನ್ನು ಚಾಲನೆ ಮಾಡುತ್ತಲೇ ಧ್ವನಿ ಸಂದೇಶ ನೀಡಿ ಅಂತರ್‌ಜಾಲ ಜಾಲಾಡಬಹುದು. ಈ ಸೌಲಭ್ಯ ಪಡೆಯಲು ಚಾಲಕರು ತಮ್ಮ ಸ್ಮಾರ್ಟ್ ಫೋನ್‌ಗಳು ಇಲ್ಲವೇ ‘ಐಪಾಡ್’ಗಳನ್ನು ಈ ವಿದ್ಯುತ್ ಚಾಲಿತ ಕಾರಿನ ಚಾರ್ಜರ್‌ಗೆ ಜೋಡಿಸಿರಬೇಕಾಗುತ್ತದೆ. ಜಾಗತಿಕ ಮಾಹಿತಿ ಮತ್ತು  ಮನರಂಜನಾ ಸಮೂಹವಾಗಿರುವ ಹರ್ಮನ್ ಸಂಸ್ಥೆಯು ಈ ವಿಶಿಷ್ಟ ಕಾರಿನ ವಿನ್ಯಾಸ ರೂಪಿಸಿದೆ. ಕಾರಿನಲ್ಲಿ ಅಳವಡಿಸಿರುವ ತಂತ್ರಜ್ಞಾನದ ನೆರವಿನಿಂದ ಚಾಲಕರು ಧ್ವನಿ ಮೂಲಕ ಆದೇಶ ನೀಡುತ್ತಲೇ ರೇಡಿಯೊ ಚಾನೆಲ್‌ಗಳನ್ನೂ ಚಾಲು ಮಾಡಬಹುದು. ಈ ಕಾರನ್ನು ಜಿನಿವಾ ಮೋಟಾರ್ ಪ್ರದರ್ಶನದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ.  ಈ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕಾರು ಮಾರುಕಟ್ಟೆಗೆ ಬರಲು ಇನ್ನೂ ಒಂದೂವರೆ ವರ್ಷ ಕಾಯಬೇಕಾಗುತ್ತದೆ.ಮೊಬೈಲ್‌ಗೆ ಮತ್ತು ಇ-ಮೇಲ್‌ಗೆ ಬರುವ ಸಂದೇಶಗಳತ್ತಲೇ ಚಾಲಕನು ಗಮನ ಹರಿಸಿ ಅವಘಡಗಳು ಸಂಭವಿಸಬಾರದು ಎನ್ನುವ ಕಾಳಜಿ ಈ ತಂತ್ರಜ್ಞಾನ ಅಳವಡಿಕೆ ಹಿಂದೆ ಇದೆ. ಆರಾಮವಾಗಿ ಕಾರು ಓಡಿಸುತ್ತಲೇ ಬಾಹ್ಯ ಪ್ರಪಂಚದ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರುವಂತೆ ಈ  ತಂತ್ರಜ್ಞಾನ ವಿನ್ಯಾಸ ಮಾಡಲಾಗಿದೆ. ಚಾಲಕನು ಕಾರು ಚಲಾಯಿಸುತ್ತಲೇ ನೀಡುವ ಧ್ವನಿ ಆದೇಶಗಳನ್ನು ಕಂಪ್ಯೂಟರ್ ಓದುವ ಸೌಲಭ್ಯವೂ ಈ ಕಾರಿನಲ್ಲಿ ಇರಲಿದೆ.ಕಾರು ಓಡಿಸುತ್ತಲೇ ಚಾಲಕನು ಮೊಬೈಲ್, ಐಪ್ಯಾಡ್ ಮತ್ತು ಬ್ಲ್ಯಾಕ್‌ಬೆರ್ರಿ ಸಾಧನಗಳಿಂದ ಅಗತ್ಯ ಮಾತಿ ಪಡೆಯುವ ಬಗೆಯಲ್ಲಿ ಕಾರನ್ನು ಸುಸಜ್ಜಿತಗೊಳಿಸಲಾಗಿದೆ. ಇದಲ್ಲದೇ ಫೇಸ್‌ಬುಕ್, ಟ್ವಿಟ್ಟರ್ ಸಂದೇಶಗಳನ್ನೂ ತಕ್ಷಣಕ್ಕೆ ಓದುವ ಸೌಲಭ್ಯಗಳನ್ನೂ ಇದರಲ್ಲಿ ಅಳವಡಿಸಲಾಗಿದೆ. ಕಾರು ತನ್ನದೇ ಆದ ವೈ-ಫೈ ಪ್ರಸರಣ ಸೌಲಭ್ಯವನ್ನೂ ಹೊಂದಿರುತ್ತದೆ. ಇದರ ನೆರವಿನಿಂದ ಪ್ರಯಾಣಿಕರು ತಮ್ಮ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಸಾಧನಗಳನ್ನು ಇಂಟರ್‌ನೆಟ್ ಜಾಲಾಡಲು ಬಳಸಬಹುದಾಗಿದೆ. ಕಾರು ಓಡಿಸುವಾಗಲೇ ಚಾಲಕನಿಗೆ ಬರುವ ಸಂದೇಶಗಳನ್ನು ಓದುವ ಸ್ವಯಂ ಚಾಲಿತ ಸೌಲಭ್ಯ ಇದರಲ್ಲಿ ಇರಲಿದೆ.ಕಾರು ಚಾಲಕನು ರಸ್ತೆ ಮೇಲೆ ನೆಟ್ಟಿರುವ ದೃಷ್ಟಿಯನ್ನು ಬೇರೆಡೆ ತಿರುಗಿಸದೆ ಮತ್ತು ವಾಹನದ ಮೇಲಿನ  ನಿಯಂತ್ರಣ ಸಡಿಲಿಸದೆಯೇ ಇ-ಮೇಲ್ ಮಾಹಿತಿ ಪಡೆದುಕೊಳ್ಳಲು ಭವಿಷ್ಯದಲ್ಲಿ ಮಾರುಕಟ್ಟೆಗೆ ಬರುವ ಈ ‘ಇಂಟರ್‌ನೆಟ್ ಕಾರ್’ನಿಂದ ಸಾಧ್ಯವಾಗಲಿದೆ.                     l

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.