ಬುಧವಾರ, ಏಪ್ರಿಲ್ 14, 2021
24 °C

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸ್ವರೂಪ ಬದಲಾಗಲಿ: ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ (ಪಿಟಿಐ): ಬದಲಾಗುತ್ತಿರುವ ಪ್ರಸಕ್ತ ಜಾಗತಿಕ ವಿದ್ಯಮಾನಗಳಿಗೆ ತಕ್ಕಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಕಾರ್ಯನಿರ್ವಹಿಸಲು ವಿಫಲವಾಗುತ್ತಿರುವುದರಿಂದ, ಭದ್ರತಾ ಮಂಡಳಿಯ ರಚನೆಯಲ್ಲಿ ಆಮೂಲಾಗ್ರ ಸುಧಾರಣೆಯಾಗಬೇಕೆಂದು ಭಾರತ ಅಭಿಪ್ರಾಯಪಟ್ಟಿದೆ.`ಈಗಿನ ಭದ್ರತಾ ಮಂಡಳಿಯು ಸಮಕಾಲೀನ ವಿಚಾರಗಳನ್ನು ಪ್ರತಿನಿಧಿಸುವಲ್ಲಿ ವಿಫಲವಾಗಿದೆ. ವಿಶ್ವದಾದ್ಯಂತ ನಡೆಯುತ್ತಿರುವ ಘಟನೆಗಳನ್ನು ತಿಳಿಯುವಲ್ಲಿಯೂ ಸೋಲುತ್ತಿದೆ~ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.ಭದ್ರತಾ ಮಂಡಳಿಯ ಮಾಸಿಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಹೊಂದಿರುವ ರಾಷ್ಟ್ರಗಳ ಎರಡು ವರ್ಷಗಳ ಅವಧಿ ಡಿಸೆಂಬರ್ 31ಕ್ಕೆ ಪೂರ್ಣಗೊಳ್ಳಲಿದ್ದು, ಈ ಸಂದರ್ಭದಲ್ಲಿ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕು ಎಂದರು.ಹದಿನೈದು ಸದಸ್ಯರನ್ನೊಳಗೊಂಡ ಭದ್ರತಾ ಮಂಡಳಿ ವಿಸ್ತರಣೆಯಾಗಬೇಕಿದ್ದು, ಅದರಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಪ್ರತಿನಿಧಿಗಳಿಗೆ ಕಾಯಂ ಸದಸ್ಯ ಸ್ಥಾನ ನೀಡಬೇಕಿದೆ ಎಂದು ಅವರು ಹೇಳಿದರು. ಭದ್ರತಾ ಮಂಡಳಿಯು ಕ್ರಿಯಾಶೀಲವಾಗಿ ನಡೆಯಬೇಕೆಂದರೆ, ಅದರ ಸದಸ್ಯರ ಸಂಖ್ಯೆಯನ್ನು ವಿಸ್ತರಿಸಬೇಕು.ಮಾತ್ರವಲ್ಲ, ಮಂಡಳಿ ಚರ್ಚಿಸುವ ವಿಷಯಗಳು, ತೀರ್ಮಾನಗಳು ಹೆಚ್ಚು ಪಾರದರ್ಶಕವಾಗಿರಬೇಕು~ ಎಂದರು. `ಮುಂದಿನ ದಿನಗಳಲ್ಲಿ ಭದ್ರತಾ ಮಂಡಳಿಯಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕೆರೇಬಿಯನ್ ಮತ್ತು ಏಷ್ಯಾ ರಾಷ್ಟ್ರಗಳಿಗೆ ಖಾಯಂ ಸದಸ್ಯತ್ವ ನೀಡುವ ಮೂಲಕ, ಈಗಿನ ಸದಸ್ಯರ ಸಂಖ್ಯೆಯನ್ನು 25ರವರೆಗೂ ವಿಸ್ತರಿಸಬೇಕು~ ಎಂದು ಸಿಂಗ್ ಸಲಹೆ ನೀಡಿದ್ದಾರೆ.ಮಂಡಳಿ ಸದಸ್ಯರ ಸಂಖ್ಯೆ ವಿಸ್ತರಿಸುವುದೆಂದರೆ, ಈಗಿರುವ ಸದಸ್ಯರು ಹೊರ ನಡೆಯುವುದಲ್ಲ. ಬದಲಿಗೆ ಹೊಸ ಸದಸ್ಯರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ಮಂಡಳಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಇದರಿಂದ ಭದ್ರತಾ ಮಂಡಳಿಯ `ತೂಕ~ ಹೆಚ್ಚುತ್ತದೆ. ಕಾರ್ಯ ನಿರ್ವಹಣೆ ಕುರಿತು ಜಾಗತಿಕ ಮಟ್ಟದಲ್ಲಿ ಮಂಡಳಿ ಬಗ್ಗೆ ವಿಶ್ವಾಸರ್ಹತೆ ಮೂಡುತ್ತದೆ ಎಂದು ಸಿಂಗ್ ಹೇಳಿದರು.ಪಾಕಿಸ್ತಾನದಂತಹ ರಾಷ್ಟ್ರಗಳು  ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಯತ್ನಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ದಕ್ಷಿಣ ಏಷ್ಯಾ ರಾಷ್ಟ್ರಗಳು ಕಾಯಂ ಸದಸ್ಯತ್ವಕ್ಕೆ ಕೇಳುವಾಗ, ಆ ರಾಷ್ಟ್ರಗಳು ತಮ್ಮ `ಅಭ್ಯರ್ಥಿತನ~ವನ್ನು ಪ್ರದರ್ಶಿಸಬೇಕು. 193 ರಾಷ್ಟ್ರಗಳ ಸದಸ್ಯರನ್ನೊಳಗೊಂಡ ವಿಶ್ವಸಂಸ್ಥೆಯ ಮಹಾ ಸಭೆಯಲ್ಲಿ ಮತದಾನದ ಮೂಲಕ ಯಾರಿಗೆ ಕಾಯಂ ಸದಸ್ಯತ್ವ ಕೊಡಬೇಕೆಂದು ನಿರ್ಧರಿಸಲಾಗುತ್ತದೆ~ ಎಂದು ಹೇಳಿದರು.ವಿಶ್ವಸಂಸ್ಥೆಯಲ್ಲಿ `ಆಕಾಶ್ ಟ್ಯಾಬ್ಲೆಟ್~

ವಿಶ್ವಸಂಸ್ಥೆ (ಪಿಟಿಐ):
ಭಾರತ ಸಂಶೋಧಿಸಿರುವ ಅತಿ ಕಡಿಮೆ ಬೆಲೆಯ `ಟ್ಯಾಬ್ಲೆಟ್ ಕಂಪ್ಯೂಟರ್~ ಅನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪ್ರದರ್ಶಿಸಲು ನಿರ್ಧರಿಸಿದೆ.ಭದ್ರತಾ ಮಂಡಳಿಯ ಅಧ್ಯಕ್ಷೀಯ ಸ್ಥಾನ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಬೆಲೆಯ `ಟ್ಯಾಬ್ಲೆಟ್ ಕಂಪ್ಯೂಟರ್~ ಪ್ರದರ್ಶಿಸುವ ಮೂಲಕ, `ಗಣಕ ಯಂತ್ರ ಕ್ಷೇತ್ರದಲ್ಲಿ ಭಾರತದ ಸಂಶೋಧನಾ~ ಶಕ್ತಿ ವಿಶ್ವಸಂಸ್ಥೆಯ ಅಂಗಳದಲ್ಲಿ ಅನಾವರಣಗೊಳ್ಳಲಿದೆ.ಇದೇ 28ರಂದು `ಆಕಾಶ್ ಟ್ಯಾಬ್ಲೆಟ್ ಕಂಪ್ಯೂಟರ್~ ಅನ್ನು ಪ್ರದರ್ಶಿಸಲಾಗುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.