ಶನಿವಾರ, ಆಗಸ್ಟ್ 15, 2020
21 °C

ವಿಶ್ವ ಸಿನಿಮಾದ ಮೊಗ್ಗಿನ ಜಡೆ

ಸಂದರ್ಶನ : ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |

ವಿಶ್ವ ಸಿನಿಮಾದ ಮೊಗ್ಗಿನ ಜಡೆ

ಕನ್ನಡದಲ್ಲಿ ವಿಶ್ವ ಸಿನಿಮಾ. ಇದು ನಿರ್ದೇಶಕ ಪಿ.ಆರ್. ರಾಮದಾಸ್‌ನಾಯ್ಡು ಅವರ ಹೊಸ `ಮೊಗ್ಗಿನ ಜಡೆ'. ಜಗತ್ತಿನ ಸಿನಿಮಾ ಬೆಳವಣಿಗೆ ಕುರಿತಂತೆ ಕನ್ನಡದಲ್ಲಿ ಎಲ್ಲ ಬಗೆಯ ಮಾಹಿತಿ ನೀಡಬೇಕೆಂದು ಅವರು ಅಂದುಕೊಂಡಿದ್ದು ಇಪ್ಪತ್ತು ವರ್ಷಗಳ ಹಿಂದೆ. ಅದೀಗ ಈಡೇರಿದೆ. `ವಿಶ್ವ ಸಿನಿಮಾ ಸಮಗ್ರ ಅಧ್ಯಯನ ಮಾಲಿಕೆ'ಯ ಮೊದಲ ಗ್ರಂಥ ನಾಳೆ (ಜುಲೈ 13, ಶನಿವಾರ) ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.ಇದರೊಂದಿಗೆ ಸಿನಿಮಾದ ವಿಶ್ವರೂಪ ತೋರುವ ಇನ್ನೂ ನಾಲ್ಕು ಗ್ರಂಥಗಳು ಹರಳುಗಟ್ಟುತ್ತಿವೆ. ಸಿನಿಮಾದ ಬಗೆಗಿನ ಸರ್ವಸ್ವವನ್ನೂ ಒಂದು ಕಟ್ಟಿನಲ್ಲಿ ನೀಡುವ ಹಂಬಲ ಇದು. ಕಾಲ ಮತ್ತು ಹಣದ ಲೆಕ್ಕಾಚಾರವನ್ನು ಬದಿಗಿಟ್ಟು ಅವರು ಕೃತಿಗಳ ಬೆನ್ನು ಹತ್ತಿದ್ದಾರೆ. ಅದಕ್ಕೆಂದೇ ಅವರು ವಿಶ್ವ ಸಿನಿಮಾ ಅಧ್ಯಯನ ಕೇಂದ್ರ ತೆರೆದಿದ್ದಾರೆ. ಇದೇ ನೆಪದಲ್ಲಿ `ಸಿನಿಮಾರಂಜನೆ' ನಾಯ್ಡು ಅವರೊಂದಿಗೆ ಮಾತಿಗಿಳಿಯಿತು. ಆಗ ಮೂಡಿದ್ದು ನಾಯ್ಡು ಅವರ ಅಕ್ಷರ ಲೋಕದ `ಹೆಜ್ಜೆಗಳು'...

*ಪುಸ್ತಕ ರಚನೆಗೆ ಮುಖ್ಯ ಪ್ರೇರಣೆ?ಭಾರತೀಯ ಸಿನಿಮಾ ಬಗ್ಗೆ, ಪ್ರಾಂತೀಯ ಭಾಷೆಗಳ ಸಿನಿಮಾ ವಿಕಾಸದ ಬಗ್ಗೆ ಅನೇಕ ಕೃತಿಗಳಿವೆ. ಆದರೆ ಜಗತ್ತಿನ ಒಟ್ಟಾರೆ ಸಿನಿಮಾ ಬೆಳವಣಿಗೆ ಕುರಿತು ಸಮಗ್ರ ಕೃತಿ ಕನ್ನಡದಲ್ಲೇಕೆ ಭಾರತದ ಯಾವ ಭಾಷೆಗಳಲ್ಲೂ ಇರಲಿಲ್ಲ. ಅದು ನನ್ನನ್ನು ಕಾಡುತ್ತಿತ್ತು.ಚಿತ್ರಕರ್ಮಿಯಾಗಿ ನಾನು ಹಲವು ವಿಚಾರ ಸಂಕಿರಣಗಳು, ಕಾರ್ಯಕ್ರಮಗಳು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುತ್ತಿದ್ದೆ. ಅವುಗಳಲ್ಲಿ ಬಹುತೇಕವು ಆಂಗ್ಲಭಾಷೆಯಲ್ಲಿರುತ್ತಿದ್ದವು. ಭಾಷೆ ಗೊತ್ತಿದ್ದರೂ ಕೆಲವರು ವಿಷಯವನ್ನು ಕನ್ನಡದಲ್ಲಿ ಹಂಚಿಕೊಳ್ಳುತ್ತಿರಲಿಲ್ಲ.ಕನ್ನಡದಲ್ಲಿ ವಿಶ್ವ ಸಿನಿಮಾ ಕೋಶವನ್ನು ತರಬೇಕೆಂಬ ಹಂಬಲಕ್ಕೆ ಇದೂ ಕಾರಣ. ಅಲ್ಲದೆ ಒಂದೇ ವಿಷಯದ ಬಗ್ಗೆ ವಿವಿಧ ಗ್ರಂಥಗಳಲ್ಲಿ ವಿವಿಧ ಲೇಖಕರು ತಮ್ಮದೇ ರೀತಿಯ ವ್ಯಾಖ್ಯಾನ ಮಾಡಿರುತ್ತಿದ್ದರು.ಅವುಗಳಲ್ಲಿ ಕೆಲವು ದೋಷಪೂರಿತವಾಗಿರುತ್ತಿದ್ದವು. ಮತ್ತೊಂದೆಡೆ ವಿಷಯದ ಬಗ್ಗೆ ಮಾಹಿತಿ ಕೊರತೆ ಇರುತ್ತಿತ್ತು. ಇದನ್ನೆಲ್ಲಾ ನಿವಾರಿಸಬೇಕಿತ್ತು. ಆದಷ್ಟೂ ಪೂರ್ವಗ್ರಹಗಳಿಲ್ಲದೆ ವಸ್ತುನಿಷ್ಠವಾಗಿ ಚರಿತ್ರೆಯನ್ನು ಹೇಳಲೆಂದು ಲೇಖನಿ ಹಿಡಿದೆ.* ಎರಡು ದಶಕಗಳ ಅಧ್ಯಯನ ಹೇಗಿತ್ತು?ಮೊದಲು ಕಿರು ಲೇಖನಗಳನ್ನು ಬರೆಯಲು ಯತ್ನಿಸಿದೆ. ಆಗೆಲ್ಲಾ ಅಪಾರ ಮಾಹಿತಿ ಕೊರತೆ. ನನ್ನಲ್ಲಿದ್ದ ಕೆಲವು ಪುಸ್ತಕಗಳನ್ನು ಅಧ್ಯಯನ ಮಾಡಿದೆ. ಆದರೆ ನನ್ನ ತಿಳಿವಳಿಕೆಗೂ ಪುಸ್ತಕದಲ್ಲಿದ್ದ ಮಾಹಿತಿಗೂ ಅಪಾರ ವ್ಯತ್ಯಾಸ ಇರುತ್ತಿತ್ತು. ವೃತ್ತಿ ಮತ್ತು ಜೀವನದ ಜಂಜಾಟದ ನಡುವೆ ಬರೆಯುವುದಕ್ಕಿಂತ ಯೋಚಿಸುವುದರಲ್ಲೇ ಬಹುತೇಕ ಕಾಲ ಕಳೆದೆ.ಗಾಢ ಅಧ್ಯಯನದ ಕೊರತೆ ಆಗಾಗ ಬರವಣಿಗೆಗೆ ಕಡಿವಾಣ ಹಾಕುತ್ತಿತ್ತು. 80-90ರ ದಶಕದಲ್ಲಿ ಟಿವಿ ಕಾರ್ಯಕ್ರಮಗಳನ್ನು ನಿರ್ಮಿಸುವ ಅವಕಾಶ ದೊರೆತಾಗ ಒಂದಷ್ಟು ಮಾಹಿತಿಗಳು ದೊರೆತವು. ಆಗಲೂ ಪುಸ್ತಕ ರಚಿಸುವ ಧೈರ್ಯ ಬರಲಿಲ್ಲ. ಸಿನಿಮಾ ಕುರಿತು ಓದುತ್ತಾ ಹೋದಂತೆ ಸಾಗರಕ್ಕೆ ಇಳಿದ ಅನುಭವವಾಯಿತು. 90ರ ದಶಕದ ನಂತರ ನನ್ನ ಯತ್ನ ಗಂಭೀರವಾಗತೊಡಗಿತು.ಆದಷ್ಟೂ ಸತ್ಯ, ನಿಖರ ಹಾಗೂ ನಂಬಲರ್ಹ ಮಾಹಿತಿಗಳನ್ನು ಹೆಕ್ಕತೊಡಗಿದೆ. ಐದು ಘಟ್ಟಗಳಾಗಿ ಜಗತ್ತಿನ ಚಿತ್ರರಂಗವನ್ನು ವಿಂಗಡಿಸಿಕೊಂಡು ಬೃಹತ್ ಗ್ರಂಥಗಳನ್ನು ಬರೆಯಬೇಕೆನ್ನಿಸಿತು. ಈಗ ಬಿಡುಗಡೆಯಾಗುತ್ತಿರುವ ಮೊದಲ ಪುಸ್ತಕ ಮೂರೂವರೆ ವರ್ಷಗಳ ಶ್ರಮದ ಫಲ.

* ಮಾಲಿಕೆಯ ವಿಶೇಷಗಳು ಏನು?ಮಾನವನಲ್ಲಿ ಕಲೆ ಅಂಕುರಿಸಿದ ಕ್ಷಣದಿಂದ ಹಿಡಿದು ಛಾಯೆ, ಮಸೂರ, ರಾಸಾಯನಿಕ, ಕ್ಯಾಮೆರಾಗಳ ವಿವಿಧ ಹಂತದ ವಿಕಾಸದ ಬಗ್ಗೆ ಮೊದಲ ಗ್ರಂಥ ವಿವರಿಸುತ್ತದೆ. ಸಿನಿಮಾಕ್ಕೆ ಪರೋಕ್ಷವಾಗಿ ಕೊಡುಗೆ ಸಲ್ಲಿಸಿದ ಮಹನೀಯರನ್ನೂ ನೆನೆಯಲಾಗಿದೆ. ಮೂಕಿಚಿತ್ರ ವಿಜೃಂಭಿಸುತ್ತಿದ್ದ 1930ರ ದಶಕದವರೆಗಿನ ವಿವರಗಳನ್ನು ನೀಡಲಾಗಿದೆ. ಹಾಗೆಂದೇ ಪುಸ್ತಕಕ್ಕೆ `ಮಾತು ಬರುವ ತನಕ' ಎಂಬ ಹೆಸರಿಡಲಾಗಿದೆ. ಎರಡನೆಯ ಗ್ರಂಥ ಸಿನಿಮಾದ ಸುವರ್ಣಯುಗವನ್ನು ಕುರಿತದ್ದು.ಇಲ್ಲಿ ಸಿನಿಮಾ ಹೆಮ್ಮರವಾಗಿ ಬೆಳೆದದ್ದನ್ನು ಕಾಣುತ್ತೇವೆ. ಮೂರನೆಯ ಗ್ರಂಥ 1950ರಿಂದ 75ರವರೆಗೆ ನಡೆದ ಜಗತ್ತಿನ ಸಿನಿಮಾ ಬೆಳವಣಿಗೆಗಳನ್ನು ದಾಖಲಿಸಲಿದೆ. ಜಗತ್ತಿನ ಹಳ್ಳಿಹಳ್ಳಿಗೂ ಸಿನಿಮಾ ಹರಡಿದ, ರಾಜಕೀಯ ಸ್ಥಿತ್ಯಂತರಗಳಲ್ಲಿ ಚಿಗುರಿದ ವಿವರಗಳು ಅದರ ಮುಂದಿನ ಭಾಗದಲ್ಲಿರಲಿವೆ.ಏಷ್ಯಾದ ಯಾವುದೇ ಭಾಷೆಗಳಲ್ಲಿ ಸಿನಿಮಾ ಕುರಿತು ಇಷ್ಟೊಂದು ದೀರ್ಘ ವಿಷಯ ಸಂಗ್ರಹಣೆಯುಳ್ಳ ಮಾಲಿಕೆ ಬಂದಿಲ್ಲ ಎನ್ನುವುದು ಪರಿಶೀಲನೆಯಿಂದ ನನ್ನ ಗಮನಕ್ಕೆ ಬಂದಿದೆ. ಅರಿವು ಕೇವಲ ಕೆಲವರ ಸ್ವತ್ತಾಗದೇ ಪ್ರವಹಿಸುವ ನಿರಂತರ ವಾಹಿನಿಯಾಗಬೇಕು. ಆ ಮೂಲಕ ಕೆಲವರಿಗಾದರೂ ವೃತ್ತಿ ಸಾಧನೆಗೆ ಸಹಾಯಕವಾಗಬೇಕು ಎಂಬುದು ನನ್ನ ಬಯಕೆ.

* ಮಾಲಿಕೆ ರೂಪುಗೊಳ್ಳುವುದರ ಹಿಂದೆ ನಾಡಿನ ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಪಾತ್ರವೂ ಇದೆ. ನಿಮ್ಮ ಅವರ ಒಡನಾಟ ಎಂಥದ್ದು?ಈ ಶ್ರಮಕ್ಕೆಲ್ಲಾ ಅವರೇ ಮೂಲಪುರುಷರು. ನಾನು ಮಲ್ಲಾಡಿಹಳ್ಳಿಯಲ್ಲಿ ಅವರ ವಿದ್ಯಾರ್ಥಿ. ಆಗ ಹದಿಹರಯ. ಅವಿಧೇಯತೆ ನನ್ನ ಹುಟ್ಟುಗುಣವಾಗಿತ್ತು. ಹಾಸ್ಟೆಲ್ ವಾರ್ಡನ್ ಕೂಡ ಆಗಿದ್ದ ಎಚ್ಚೆಸ್ವಿ ನನ್ನ ಮೇಲೆ ವಿಶೇಷ `ನಿಗಾ' ಇಟ್ಟಿದ್ದರು. ಆಮೇಲೆ ಬಣ್ಣದ ಲೋಕಕ್ಕೆ ಬಂದೆ. ಸಿಕ್ಕಾಗೆಲ್ಲಾ `ನಿನ್ನ ಕ್ಷೇತ್ರದ ಬಗ್ಗೆ ಏನಾದರೂ ಬರಿ ನಾಯ್ಡು' ಎನ್ನುತ್ತಿದ್ದರು.ತಮ್ಮ ವಿದ್ಯಾರ್ಥಿಗಳು ಬರೆದ ಕೃತಿಗಳನ್ನು ತಾವೇ ಹಣ ಹೂಡಿ ಪ್ರಕಟಿಸುವ ಕನಸು ಅವರಿಗೆ. ಒಂದು ದಿನ ಅವರ ಬಳಿಗೆ ನನ್ನ ಕೃತಿ ಹಿಡಿದು ಹೋದೆ. `ಅಲ್ಲಯ್ಯಾ ಸೀತೆ ನೋಡಿಕೊಂಡು ಬಾ ಅಂತ ಹನುಮಂತನನ್ನು ಕಳುಹಿಸಿದರೆ ಅವನು ಲಂಕೆಯನ್ನೇ ಸುಟ್ಟು ಬಂದನಂತೆ, ಹಾಗಾಯಿತು ನಿನ್ನ ಕತೆ' ಎಂದು ತುಂಟತನದಲ್ಲಿ ನಕ್ಕರು. ನನ್ನ ದೊಡ್ಡ ಕೃತಿ ನೋಡಿ ಅವರಿಗೆ ಹಾಗನ್ನಿಸಿರಬೇಕು. ಮೊದಲ ಗ್ರಂಥಕ್ಕೆ ಅವರದೇ ಮುನ್ನುಡಿ ಇದೆ. ಅದು ಅವರು ಮಾಡಿದ ಆಶೀರ್ವಾದ.

* ಉಳಿದ ಪುಸ್ತಕಗಳು ಯಾವಾಗ ಓದುಗರ ಕೈ ಸೇರಲಿವೆ?ಪ್ರತಿಯೊಂದು ಕೃತಿಯ ರಚನೆಗೆ ಕನಿಷ್ಠ ಎರಡು ವರ್ಷ ಅವಧಿ ಬೇಕು. ಎರಡನೇ ಪುಸ್ತಕ ಇದೇ ವರ್ಷದ ಕೊನೆಯ ಹಂತದ ಹೊತ್ತಿಗೆ ಪ್ರಕಟವಾಗಲಿದೆ. ಇದೊಂದು ನಿರಂತರ ಪ್ರಕ್ರಿಯೆ.

* ನೀವು ತೆರೆದಿರುವ ವಿಶ್ವ ಸಿನಿಮಾ ಅಧ್ಯಯನ ಕೇಂದ್ರದ ವ್ಯಾಪ್ತಿ ಏನು?ಮುಖ್ಯವಾಗಿ ಇದು ಸಿನಿಮಾ ಅಧ್ಯಯನಕ್ಕೆ ಮೀಸಲಾದ ಕೇಂದ್ರ. ನನ್ನ ಮೊದಲ ಕೃತಿಯನ್ನು ಕೇಂದ್ರದ ಮೂಲಕವೇ ಪ್ರಕಟಿಸಲಾಗಿದೆ. ಗ್ರಂಥಮಾಲೆಯನ್ನು ಬೇರೆ ಭಾಷೆಗಳಿಗೂ ಅನುವಾದ ಮಾಡುವ ಉದ್ದೇಶವಿದೆ. ಮೊದಲ ಗ್ರಂಥ ಮಲಯಾಳಂ, ತಮಿಳು, ತೆಲುಗು, ಮರಾಠಿ, ಬಂಗಾಳಿ ಹಾಗೂ ಹಿಂದಿಗೆ ಅನುವಾದಿಸುವ ಕಾರ್ಯ ಸಾಗಿದೆ. ಇದಲ್ಲದೆ ಸಿನಿಮಾ ಸಿದ್ಧಾಂತ ಕುರಿತ ಕೃತಿಗಳನ್ನು ಹೊರತರುವ ಯತ್ನವಿದೆ.

* ಇಷ್ಟೆಲ್ಲಾ ಮಾಡಲು ಅಪಾರ ತಾಳ್ಮೆ ಹಾಗೂ ಆರ್ಥಿಕ ಶಕ್ತಿ ಬೇಕಲ್ಲವೇ?ಖಂಡಿತಾ. ಒಂದು ಕೃತಿ ಹೊರತರಲು ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಸಂಶೋಧನೆಯ ವ್ಯಾಪ್ತಿ ಹಾಗಿದೆ. ಯಾರ ಸಹಾಯವನ್ನೂ ಪಡೆಯದೇ ಈ ಸಾಹಸಕ್ಕೆ ಮುಂದಾಗಿದ್ದೇನೆ. ಗ್ರಂಥ ರಚನೆಯಿಂದಾಗಿ ಹೊಸ ಸಿನಿಮಾಗಳ ಕೆಲಸ ನಿಂತು ಹೋಯಿತು.ಆದರೆ ನನ್ನ ಮಾಧ್ಯಮಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲ ಈ ಮೂಲಕ ಈಡೇರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.