ವಿಷದ ಬಾಟಲಿಯೊಂದಿಗೆ ಹೆಸ್ಕಾಂಗೆ ರೈತರ ಮುತ್ತಿಗೆ
ಲಕ್ಷ್ಮೇಶ್ವರ: ಗ್ರಾಮದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿಲ್ಲ ಎಂದು ಆರೋಪಿಸಿ ಸಮೀಪದ ಬಾಳೇಹೊಸೂರು ಗ್ರಾಮದ ಹತ್ತಾರು ರೈತರು ಫಕ್ಕೀರೇಶ ಕವಲೂರ ಹಾಗೂ ವರ್ತೂರು ಪ್ರಕಾಶ್ ಯುವ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ ಇವರ ನೇತೃತ್ವದಲ್ಲಿ ಶನಿವಾರ ವಿಷದ ಬಾಟಲಿಯೊಂದಿಗೆ ಪಟ್ಟಣದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಪರಸಪ್ಪ ಒಂಟಿ `ಹೊಲ್ದಾನ ಟಿಸಿ ಸುಟ್ಟು ಹದಿನೈದು ಆತು. ಬ್ಯಾರೆ ಟಿಸಿ ಹಾಕ್ರೀ ಅಂತ ಹೇಳಿದ್ರೂ ಸಾಯಬ್ರು ದರಕಾರ ಮಾಡಿಲ್ಲ. ಮದ್ಲ ಈ ವರ್ಷ ಮಳೆಯಿಲ್ಲ. ಇಂಥಾ ಹೊತ್ನ್ಯಾಗ ಕರೆಂಟ್ ಕೊಡಲಿಲ್ಲ ಅಂದ್ರ ನಾವ್ ಹ್ಯಾಂಗ ಒಕ್ಕಲತನಾ ಮಾಡೂದು. ಅದಕ್ಕ ನಾವೆಲ್ಲ ಸಾಯಬೇಕಂತನ ವಿಷ ತಂದೀವಿ~ ಎಂದು ತಮ್ಮಂದಿಗೆ ತಂದಿದ್ದ ವಿಷದ ಬಾಟಲಿಯನ್ನು ತೋರಿಸಿದರು.
ಈಗಿರುವ 63ಕೆವಿ ಟಿಸಿ ಬದಲಾಗಿ 100ಕೆವಿ ಟಿಸಿ ಅಳವಡಿಸಬೇಕು. ಅದಕ್ಕಾಗಿ ಸಂಬಂಧಿಸಿದ ರೈತರು ಹಣವನ್ನೂ ತುಂಬಿದ್ದಾರೆ. ಕಾರಣ ಸೋಮವಾರದ ಒಳಗೆ ಬೇರೆ ಟಿಸಿ ಅಳವಡಿಸದಿದ್ದರೆ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಫಕ್ಕೀರೇಶ ಕವಲೂರ ಹಾಗೂ ಫಕ್ಕೀರೇಶ ಮ್ಯಾಟಣ್ಣವರ ಎಚ್ಚರಿಸಿದರು.
`ನಾವ್ ಕರೆಂಟನ ನಂಬಕೊಂಡು ಬೆಂಡಿಬೀಜ ಮಾಡಾಕತ್ತೇವಿ. ಆದ್ರ ಕರೆಂಟ್ ವ್ಯಾಳೆಕ ಸರಿಯಾಗಿ ಇರಂಗಿಲ್ಲ. ಟಿಸಿ ಸುಟ್ಟಾಗೊಮ್ಮೆ ರೊಕ್ಕ ಕೊಟ್ಟು ಬ್ಯಾರೆ ಟಿಸಿ ಹಾಕ್ಸಿದ್ರೂ ಮತ್ತೀಗ ಟಿಸಿ ಸುಟ್ಟೈತಿ. ನಮ್ಗ ರೊಕ್ಕ ಕೊಟ್ಟ ಕೊಟ್ಟ ಸಾಕಾಗೇತಿ~ ಎಂದು ರೈತರಾದ ನೀಲಪ್ಪ ಯತ್ತಿನಹಳ್ಳಿ, ಬಸವರಾಜ ಪೆದ್ದರ, ಮಾರುತಿ ಕುರಿ ಸೇರದಂತೆ ಮತ್ತಿತರ ರೈತರು ಆರೋಪಿಸಿದರು.
ಈ ಕುರಿತು ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಿಬ್ಬಂದಿ ಕೊರತೆಯಿಂದ ಟಿಸಿ ಅಳವಡಿಸುವುದು ತಡವಾಗಿದೆ. ಸೋಮವಾರ 100 ಕೆವಿ ಟಿಸಿ ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸೆಕ್ಷನ್ ಎಂಜಿನೀಯರ್ ಆನೇಕಲ್ ತಿಳಿಸಿದರು.
ಸೋಮಯ್ಯ ಹಿರೇಮಠ, ಪರಶುರಾಮ ಒಂಟಿ, ಯಲ್ಲಪ್ಪ ಒಂಟಿ, ಗ್ರಾಮ ಪಂಚಾಯಿತಿ ಸದಸ್ಯ ಮುದಕಪ್ಪ ಒಂಟಿ, ಬಸವರಾಜ ಒಂಟಿ, ಶಿವಪ್ಪ ಒಂಟಿ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.