ಗುರುವಾರ , ಮೇ 26, 2022
30 °C

ವಿಷ್ಣು ಸ್ಮಾರಕಕ್ಕೆ 2 ಎಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿತ್ರನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿ ಅಭಿಮಾನ್ ಸ್ಟುಡಿಯೊ ಆವರಣದಲ್ಲಿನ ಅವರ ಸಮಾಧಿಗೆ ಹೊಂದಿಕೊಂಡಂತಿರುವ ಎರಡು ಎಕರೆ ಜಮೀನನ್ನು ವಿಷ್ಣುವರ್ಧನ್ ಸ್ಮಾರಕ ಟ್ರಸ್ಟ್‌ಗೆ ರಾಜ್ಯ ಸರ್ಕಾರ ಬುಧವಾರ ಹಸ್ತಾಂತರಿಸಿದೆ.ವಿಷ್ಣುವರ್ಧನ್ ಅವರ ಸಮಾಧಿ ಇರುವ ಸ್ಥಳದಲ್ಲೇ ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭಿಸಲು ಟ್ರಸ್ಟ್ ಯೋಚಿಸಿತ್ತು. ಆದರೆ, ಚಿತ್ರನಟ ಬಾಲಕೃಷ್ಣ ಅವರ ಮಕ್ಕಳ ಒಡೆತನದಲ್ಲಿರುವ ಅಭಿಮಾನ್ ಸ್ಟುಡಿಯೊ ಆವರಣದಲ್ಲಿ ವಿಷ್ಣುವರ್ಧನ್ ಸ್ಮಾರಕ ಇದೆ.ಈ ಜಮೀನಿನ ಒಡೆತನಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಇದರಿಂದಾಗಿ ಆ ಜಮೀನನ್ನು ಸ್ವಾಧೀನಕ್ಕೆ ಪಡೆದು, ಟ್ರಸ್ಟ್ ವಶಕ್ಕೆ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.ಸಮಾಧಿಗೆ ಹೊಂದಿಕೊಂಡಿರುವ ಇತರೆ ಎರಡು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು, ಟ್ರಸ್ಟ್‌ಗೆ ಹಸ್ತಾಂತರ ಮಾಡಲಾಗಿದೆ. ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ'ದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತಿ ವಿಷ್ಣುವರ್ಧನ್ ಅವರಿಗೆ ಜಮೀನು ಹಸ್ತಾಂತರದ ಆದೇಶದ ಪ್ರತಿಯನ್ನು ನೀಡಿದರು.ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, `ಸಮಾಧಿ ಇರುವ ಜಮೀನನ್ನೇ ನೀಡುವಂತೆ ಭಾರತಿ ವಿಷ್ಣುವರ್ಧನ್ ಮನವಿ ಮಾಡಿದ್ದರು. ಆದರೆ, ಆ ಜಮೀನಿನ ಒಡೆತನಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ವಿವಾದ ಬಗೆಹರಿದರೆ ಆ ಜಮೀನನ್ನೂ ನೀಡಲಾಗುವುದು. ಈಗ ಅದಕ್ಕೆ ಹೊಂದಿಕೊಂಡಿರುವ ಜಮೀನನ್ನು ನೀಡಿದ್ದೇವೆ' ಎಂದರು.`ಸಮಾಧಿ ನಿರ್ಮಾಣಕ್ಕಾಗಿ ಸರ್ಕಾರ ನೀಡಿರುವ ಐದು ಕೋಟಿ ರೂಪಾಯಿ ಟ್ರಸ್ಟ್ ಬಳಿ ಇದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಇದಕ್ಕೆ ಬೇಕಿರುವ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ' ಎಂದು ಭರವಸೆ ನೀಡಿದರು.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ.ವಿಜಯಕುಮಾರ್, ಹಿರಿಯ ನಟ ಶಿವರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.