ಮಂಗಳವಾರ, ಮಾರ್ಚ್ 2, 2021
31 °C

ವಿಷ... ಎಲ್ಲೆಲ್ಲೂ... ನಮ್ಮಲ್ಲೂ

ನಿಕೋಲಸ್‌ ಕ್ರಿಸ್ಟೋಫ್‌/ ದ ನ್ಯೂಯಾರ್ಕ್‌ ಟೈಮ್ಸ್‌ Updated:

ಅಕ್ಷರ ಗಾತ್ರ : | |

ವಿಷ... ಎಲ್ಲೆಲ್ಲೂ... ನಮ್ಮಲ್ಲೂ

ಪಿಜ್ಜಾ ಬಾಕ್ಸ್‌, ಹಿಮಕರಡಿ ಮತ್ತು ನಾವು- ಈ ಮೂರರಲ್ಲೂ ಇರುವ ಸಾಮಾನ್ಯ ಅಂಶ ಯಾವುದು?

ಇವೆಲ್ಲದರಲ್ಲೂ ಪಾಲಿ ಮತ್ತು ಪರ್‌ಫ್ಲೂರೋಆಲ್ಕೈಲ್‌ ಅಥವಾ ‘ಪಿಎಫ್‌ಎಎಸ್‌’ ಎಂಬ ಕೈಗಾರಿಕಾ ವಿಷಕಾರಿ ರಾಸಾಯನಿಕ ವಸ್ತುಗಳಿವೆ. ಇವು ನಮ್ಮ ಜೀವನವನ್ನು ಹೆಚ್ಚು ಅನುಕೂಲಕರವನ್ನಾಗಿ ಮಾಡುತ್ತವೆ ಎನ್ನುವುದೇನೋ ನಿಜ. ಅದರ ಜೊತೆಗೆ ಕ್ಯಾನ್ಸರ್‌ನ ಸಾಧ್ಯತೆಯನ್ನೂ ಹೆಚ್ಚಿಸುತ್ತವೆ.ಈ ರಾಸಾಯನಿಕಗಳನ್ನು ತಮ್ಮ ದಿನನಿತ್ಯದ ಜೀವನದಿಂದ ದೂರವಿಡಲು ಯತ್ನಿಸುತ್ತಿರುವುದಾಗಿ ನಾನು ಸಂದರ್ಶಿಸಿದ ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಅದು ಅಸಾಧ್ಯ. ಮನುಷ್ಯರೂ ಸೇರಿದಂತೆ ಭೂಮಿಯಲ್ಲಿರುವ ಎಲ್ಲ ಪ್ರಾಣಿಗಳ ದೇಹದಲ್ಲೂ ಈ ವಿಷಕಾರಿ ರಾಸಾಯನಿಕ ವಸ್ತುಗಳು ತಣ್ಣಗೆ ಕುಳಿತಿವೆ. ಗ್ರೀನ್‌ಲ್ಯಾಂಡ್‌ನಲ್ಲಿರುವ ಹಿಮ ಕರಡಿಗಳನ್ನೂ ಇವು ಬಿಟ್ಟಿಲ್ಲ.ಪಿಎಫ್‌ಎಎಸ್‌ಗಳನ್ನು ಅಡುಗೆ ಮಾಡಲು ಉಪಯೋಗಿಸುವ ನಾನ್‌ಸ್ಟಿಕ್‌ ಪ್ಯಾನ್‌ಗಳಲ್ಲಿ, ಜಲನಿರೋಧಕ ಬಟ್ಟೆಗಳಲ್ಲಿ, ಕಲೆ ವಿರೋಧಿ ವಸ್ತ್ರ, ಸಂಸ್ಕರಿತ ಆಹಾರವನ್ನು ಕಟ್ಟುವ ಪೊಟ್ಟಣಗಳಲ್ಲಿ, ಮೈಕ್ರೊವೇವ್‌ನಲ್ಲಿ ಇರುವ ಪಾಪ್‌ಕಾರ್ನ್‌ ಬ್ಯಾಗುಗಳು, ಬೆಂಕಿ ನಿಗ್ರಹ ನೊರೆ ಸೇರಿದಂತೆ ಸಾವಿರಾರು ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಹಲವಾರು ವಸ್ತುಗಳಲ್ಲಿ ಇವುಗಳನ್ನು ಗುರುತಿಸಲು ಸಹ ಸಾಧ್ಯವಿಲ್ಲ. ಈ ಬಗ್ಗೆ ಎಷ್ಟೋ ಬಾರಿ ರಾಸಾಯನಿಕ ತಜ್ಞರೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಇಂತಹ ಹಾನಿಕಾರಕ ವಸ್ತುಗಳಿಂದ ಜನರನ್ನು ರಕ್ಷಿಸಲು ಸರ್ಕಾರಗಳು ಮುಂದಾಗಬೇಕು. ಆದರೆ, ತಂಬಾಕಿನಿಂದ ಸೀಸದವರೆಗೆ, ಬಣ್ಣದಿಂದ ರಾಸಾಯನಿಕ ವಸ್ತುಗಳವರೆಗೆ ಜನರಿಗೆ ಹಾನಿ ಉಂಟು ಮಾಡುವ ವಸ್ತುಗಳ ನಿಯಂತ್ರಣಕ್ಕೆ ಸರ್ಕಾರಗಳು ಮುಂದಾದಾಗಲೆಲ್ಲಾ ಕೈಗಾರಿಕೆಗಳು ದೇಣಿಗೆ ಲಾಬಿಗಳ ಮೂಲಕ ಅವುಗಳನ್ನು ತಡೆಯಲು ಯತ್ನಿಸುತ್ತವೆ. ಈ ವಸ್ತುಗಳಿಂದಾಗಿ ಸಂತ್ರಸ್ತರಾದವರ ಸಂಖ್ಯೆಯನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಿರುವವರೆಗೆ ಇಂತಹ ಲಾಬಿ ಯತ್ನಗಳು ನಡೆಯುತ್ತಲೇ ಇರುತ್ತವೆ.‘ಅಮೆರಿಕದಲ್ಲಿ ರಾಸಾಯನಿಕ ವಸ್ತುಗಳ ನಿಯಂತ್ರಣ ಸಾಧ್ಯವಾಗದೇ ಇರುವುದಕ್ಕೆ  ಪಿಎಫ್‌ಎಎಸ್‌ಗಳು ತಾಜಾ ನಿದರ್ಶನ’ ಎಂದು ಹೇಳುತ್ತಾರೆ ವರ್ಜೀನಿಯಾದ ಪರಿಸರ ಆರೋಗ್ಯ ವಿಜ್ಞಾನಗಳ ಮುಖ್ಯ ವಿಜ್ಞಾನಿ ಜಾನ್ ಪೀಟರ್ಸನ್‌. ‘ಮುಂಬರುವ ದಿನಗಳಲ್ಲಿ ಇವು ನಮ್ಮ ರಕ್ತ, ನಾವು ಬಳಸುವ ದಿನನಿತ್ಯದ ವಸ್ತುಗಳು, ನೀರು, ಅಷ್ಟೇ ಏಕೆ, ತಾಯಿಯ ಎದೆ ಹಾಲನ್ನು ಕೂಡ ವಿಷಯುಕ್ತಗೊಳಿಸಲಿವೆ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.ಪಿಎಫ್‌ಎಎಸ್‌ಗಳಿಂದ ಆರೋಗ್ಯದ ಮೇಲೆ ಆಗುವ ಹಾನಿಗಳ ಬಗ್ಗೆ ಅರ್ಧ ಶತಮಾನದ ಹಿಂದಿನಿಂದಲೇ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ.ಈಗ ವಿವಿಧ ಅಧ್ಯಯನಗಳ ಮೂಲಕ ವಿಜ್ಞಾನಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಎಚ್ಚರಿಕೆಗಳನ್ನು ರವಾನಿಸುತ್ತಿದ್ದಾರೆ. ಮೇ ತಿಂಗಳೊಂದರಲ್ಲೇ 200ಕ್ಕೂ ಅಧಿಕ ವಿಜ್ಞಾನಿಗಳು ಮ್ಯಾಡ್ರಿಡ್‌ನಲ್ಲಿ ಪಿಎಫ್‌ಎಎಸ್‌ಗಳು ಆರೋಗ್ಯಕ್ಕೆ ಉಂಟು ಮಾಡುವ ಹಾನಿಗಳ ಬಗ್ಗೆ ವರದಿ ನೀಡಿದ್ದರು. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪರಿಸರ ಆರೋಗ್ಯಕ್ಕೆ ಸಂಬಂಧಿಸಿದ ನಿಯತಕಾಲಿಕದಲ್ಲಿ ಇವು ಪ್ರಕಟವಾಗಿವೆ.

ಪಿಎಫ್ಎಎಸ್‌ಗಳಿಂದ ವೃಷಣ ಮತ್ತು ಕಿಡ್ನಿ ಕ್ಯಾನ್ಸರ್‌ ಬಾಧಿಸುತ್ತದೆ. ಹೈಪೊಥೈರಾಯ್ಡಿಸಮ್‌ (ಕಡಿಮೆ ಪ್ರಮಾಣದಲ್ಲಿ ಥೈರಾಯ್ಡ್‌ ಹಾರ್ಮೋನುಗಳ ಉತ್ಪತ್ತಿ), ಕರುಳಿನ ಅಲ್ಸರ್‌ ಮತ್ತು ಇತರ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ವಿಜ್ಞಾನಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.ರಾಸಾಯನಿಕ ತಜ್ಞೆ ಆರ್ಲಿನ್‌ ಬ್ಲಮ್‌ ಕೂಡ ಪಿಎಫ್‌ಎಎಸ್‌ಗಳು ಕ್ಯಾನ್ಸರ್‌ ಉಂಟು ಮಾಡುವ ಗುಣಗಳನ್ನು ಹೊಂದಿವೆ ಎಂದು ಈ ಹಿಂದೆ ಹೇಳಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ಆಧುನಿಕ ‘ಜ್ವಾಲೆ-ವಿಲಂಬಕ’ ರಾಸಾಯನಿಕಗಳ ವಿರುದ್ಧ ಅತ್ಯಂತ ಯಶಸ್ವಿಯಾದ ಅಭಿಯಾನವನ್ನೇ ಕೈಗೊಂಡಿದ್ದರು. ಜ್ವಾಲೆಯನ್ನು ತಗ್ಗಿಸುವ ರಾಸಾಯನಿಕಗಳು ಕ್ಯಾನ್ಸರ್‌ ತರುತ್ತವೆ ಎಂಬ ಕಾರಣಕ್ಕೆ ಅವರು ಅದರ ಬಳಕೆಯನ್ನು ವಿರೋಧಿಸಿದ್ದರು. ಆದರೆ, ಪಿಎಫ್‌ಎಎಸ್‌ಗಳು ಜ್ವಾಲೆ-ವಿಲಂಬಕಗಳಿಗಿಂತಲೂ ಅಪಾಯಕಾರಿ ಎಂದು ಅವರು ಪ್ರತಿಪಾದಿಸುತ್ತಾರೆ.‘ದೀರ್ಘ ಸರಪಳಿ’ಯ (ರಾಸಾಯನಿಕ ರಚನೆ) ಪಿಎಫ್‌ಎಎಸ್‌ಗಳು ಹಾನಿಕಾರಕ ಎಂಬುದನ್ನು ರಾಸಾಯನಿಕ ಕೈಗಾರಿಕೆಗಳು ಒಪ್ಪಿಕೊಂಡಿವೆ. ಆದರೆ, ‘ಸಣ್ಣ ಸರಪಳಿ’ (ರಾಸಾಯನಿಕ ರಚನೆ) ಪಿಎಫ್‌ಎಎಸ್‌ಗಳು ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ ಎಂಬುದು ಅವುಗಳ ವಾದ. ಈ ಸಣ್ಣ ಸರಪಳಿಯ ಪಿಎಫ್‌ಎಎಸ್‌ನಿಂದ ಆರೋಗ್ಯದ ಮೇಲೆ ಆಗುವ ಹಾನಿಗೆ ಸಂಬಂಧಿಸಿದಂತೆ ಹೆಚ್ಚು ಸಾಕ್ಷ್ಯಗಳಿಲ್ಲ ಎಂಬುದು ನಿಜ. ಆದರೆ ಇದಕ್ಕೆ ಪ್ರಮುಖ ಕಾರಣ ಎಂದರೆ, ಇವುಗಳ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಯದೇ ಇರುವುದು.

ತಾವು ಬಳಸುವ ವಸ್ತುಗಳನ್ನು ಸುರಕ್ಷತೆಯ ದೃಷ್ಟಿಯಿಂದ ಪರೀಕ್ಷೆಗೆ ಒಳಪಡಿಸಬೇಕೆಂದು ಅಮೆರಿಕನ್ನರು ಬಯಸುತ್ತಾರೆ. ಆದರೆ, ವಾಸ್ತವದಲ್ಲಿ ಹಾಗಾಗುತ್ತಿಲ್ಲ. ಅಮೆರಿಕದಲ್ಲಿ ಲಭ್ಯವಿರುವ ಅಂದಾಜು 80 ಸಾವಿರದಷ್ಟು ರಾಸಾಯನಿಕಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಯಾವುದೇ ಪರೀಕ್ಷೆಗಳನ್ನು ನಡೆಸಲಾಗಿಲ್ಲ. ಎಲ್ಲ ಪ್ರಯೋಗಗಳನ್ನು ನಮ್ಮ ಮೇಲೆಯೇ ಮಾಡಲಾಗುತ್ತಿದೆ. ಒಂದು ರೀತಿಯಲ್ಲಿ ನಾವು ಪ್ರಯೋಗ ಪಶುಗಳಾಗಿದ್ದೇವೆ!ವಿಷಕಾರಿ ರಾಸಾಯನಿಕಗಳನ್ನು ನಿಯಂತ್ರಿಸಲು ಅಮೆರಿಕ ಕಾನೂನನ್ನು ತರಬಹುದು. ಆದರೆ, ಆ ಮಸೂದೆ ರಾಸಾಯನಿಕ ಉದ್ದಿಮೆಗಳು ಆದರದಿಂದ ಸ್ವೀಕರಿಸುವಷ್ಟು ದುರ್ಬಲವಾಗಿರುತ್ತದೆ! ಸೆನೆಟ್‌ನಲ್ಲಿ ಮಂಡನೆಯಾಗುವ ಮಸೂದೆ ಯಾವುದೇ ಪ್ರಯೋಜನಕ್ಕೂ ಬರುವುದಿಲ್ಲ. ಅಚ್ಚರಿ ಎಂದರೆ, ಹೆಚ್ಚು ಚಾಲ್ತಿಯಲ್ಲಿರುವ ಐದು ರಾಸಾಯನಿಕಗಳನ್ನು ಪ್ರತಿ ವರ್ಷ ಪರಿಶೀಲನೆಗೆ ಒಳಪಡಿಸಲು ಮಾತ್ರ ಈ ಮಸೂದೆ ಅವಕಾಶ ನೀಡುತ್ತದೆ. ಆದರೆ, ಆ ಹಂತದವರೆಗಾದರೂ ಸದನ ಹೋಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕ್ಯಾನ್ಸರ್‌, ಸ್ಥೂಲತೆ, ವಂಶವಾಹಿ ಹಾನಿ ಮತ್ತು ಇತರ ಸಮಸ್ಯೆಗಳನ್ನು ಉಂಟು ಮಾಡುವ ಅಸಂಖ್ಯ ರಾಸಾಯನಿಕಗಳಲ್ಲಿ ಪ್ರತಿ ವರ್ಷ ಕನಿಷ್ಠ ಐದು ರಾಸಾಯನಿಕಗಳ ಪರಿಶೀಲನೆಗೆ ಅಮೆರಿಕ ಬದ್ಧತೆ ತೋರಿದರೂ ಅದು ಒಳ್ಳೆಯ ಬೆಳವಣಿಗೆ.ಸುರಕ್ಷತಾ  ದೃಷ್ಟಿಯಿಂದ ಈಗಾಗಲೇ ಯುರೋಪ್‌ ಮತ್ತು ಕೆನಡಾಗಳು ಅಮೆರಿಕದಲ್ಲಿ ಬಳಕೆಯಲ್ಲಿರುವ ನೂರಾರು ರಾಸಾಯನಿಕಗಳ ಮೇಲೆ ನಿರ್ಬಂಧ ಹೇರಿವೆ.ವಿಜ್ಞಾನಿಗಳು ಈಗಾಗಲೇ ತಮ್ಮ ವೈಯಕ್ತಿಕ ಬದುಕಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ, ರಾಸಾಯನಿಕ ವಸ್ತುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ‘ನಾನ್‌ಸ್ಟಿಕ್‌ ಪ್ಯಾನ್‌ಗಳನ್ನು ಖರೀದಿಸುವುದನ್ನು ಬಿಟ್ಟಿದ್ದೇನೆ’ ಎಂದು ಹೇಳುತ್ತಾರೆ ಮಸಾಚುಸೆಟ್ಸ್‌ ವಿ.ವಿ.ಯ ಜೀವವಿಜ್ಞಾನದ ಪ್ರೊಫೆಸರ್‌ ಆರ್‌.ಥಾಮಸ್‌ ಜೋಲ್ಲೆರ್‌.  ಹಸಿರು ವಿಜ್ಞಾನ ನೀತಿ ಸಂಸ್ಥೆಯ ವಿಜ್ಞಾನಿ ಸಿಮೊನಾ ಬಲನ್‌ ಅವರು ಮೈಕ್ರೊವೇವ್‌ ಪಾಪ್‌ಕಾರ್ನ್‌ ಬ್ಯಾಗುಗಳು ಮತ್ತು ಕಲೆ ನಿರೋಧಕ ಪೀಠೋಪಕರಣಗಳ ಬಳಕೆಯನ್ನು ಈಗ ನಿಲ್ಲಿಸಿದ್ದಾರೆ.‘ಕೆಲವು ನಿರ್ದಿಷ್ಟ ನಾನ್‌ಸ್ಟಿಕ್‌ ಉತ್ಪನ್ನ ಮತ್ತು ಜಲನಿರೋಧಕ ಉತ್ಪನ್ನಗಳನ್ನು ಖರೀದಿ ಮಾಡುವುದನ್ನು ನಿಲ್ಲಿಸಿದ್ದೇನೆ. ಆದರೆ ಹಿಮ ಜಾರಾಟದಲ್ಲಿ ಬಳಸುವ ಬೂಟ್ಸ್‌ಗೆ ಹಾಕುವುದಕ್ಕಾಗಿ ಅನ್ಯ ಮಾರ್ಗವಿಲ್ಲದೇ ಪಿಎಫ್‌ಎಎಸ್‌ಗಳನ್ನು ಒಳಗೊಂಡಿರುವ ಮೇಣ ಬಳಸುತ್ತೇನೆ. ಪ್ರತಿ ಬಾರಿ ಅದನ್ನು ಉಪಯೋಗಿಸುವಾಗ ನನ್ನ ದೇಹಕ್ಕೆ ಮತ್ತು ಭೂಮಿಗೆ ವಿಷಕಾರಿ ವಸ್ತು ಸೇರುತ್ತಿದೆ. ಈ ಭೂಮಿ, ಮನುಕುಲ ಇರುವವರೆಗೂ ಆ ವಿಷ ಹಾಗೆಯೇ ಇರುತ್ತದೆ ಎಂದು ಮನಸ್ಸಿನಲ್ಲೇ ಯೋಚಿಸುತ್ತೇನೆ’ ಎಂದು ಹೇಳುತ್ತಾರೆ ಬ್ಲಮ್.ಲೆವಿಸ್‌, ಬೆನೆಟನ್‌, ವಿಕ್ಟೋರಿಯಾಸ್‌ ಸೀಕ್ರೆಟ್‌ ಸೇರಿದಂತೆ ಕೆಲವು ಬ್ರಾಂಡ್‌ಗಳು ತಮ್ಮ ಉತ್ಪನ್ನಗಳಲ್ಲಿ ಪಿಎಫ್‌ಎಎಸ್‌ ರಾಸಾಯನಿಕಗಳನ್ನು ಬಳಸದೇ ಇರಲು ನಿರ್ಧರಿಸಿರುವುದು ಮಹತ್ವದ ಬೆಳವಣಿಗೆ. ಉತ್ಪನ್ನಗಳ ಸುರಕ್ಷತೆಯ ಮೌಲ್ಯಮಾಪನವನ್ನು ‘ಗುಡ್‌ಗೈಡ್‌’ ಮತ್ತು ‘ಸ್ಕಿನ್‌ ಡೀಪ್‌’ ವೆಬ್‌ಸೈಟ್‌ಗಳಲ್ಲಿ ಉಚಿತವಾಗಿ ಅರಿಯಬಹುದು. ತಂಬಾಕು ಮತ್ತು ಸೀಸದ ಲಾಬಿಗಳು ಈ ಹಿಂದೆ ಮಾಡಿರುವುದನ್ನೇ ಈಗ ರಾಸಾಯನಿಕ ಲಾಬಿಗಳು ಮಾಡುತ್ತಿವೆ.ಪಿಎಫ್‌ಎಎಸ್‌ಗಳ ವಿರುದ್ಧ ಕೈಗೊಳ್ಳುವ  ನಿಯಂತ್ರಣ ಕ್ರಮಗಳನ್ನು ವಿಳಂಬ ಮಾಡಲು ರಾಸಾಯನಿಕ ಉದ್ದಿಮೆಗಳು ಲಾಬಿ ಮಾಡುತ್ತಿವೆ. ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿವೆ.  ಮೂರು ವರ್ಷಗಳ ಅವಧಿಯಲ್ಲಿ 1197 ಕೋಟಿ ರೂಪಾಯಿ ವೆಚ್ಚ ಮಾಡಿವೆ. ಕ್ಯಾನ್ಸರ್‌ ತರುವ ಶಂಕಿತ ವಸ್ತುಗಳನ್ನು ತಯಾರಿಸುವ ತನ್ನ ಹಕ್ಕನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು, ಸುರಕ್ಷಿತ ವಸ್ತುಗಳ ತಯಾರಿಕೆಗೆ ಈ ಹಣವನ್ನು ಅವು ಬಳಸಿದರೆ ಎಷ್ಟು ಒಳ್ಳೆಯದು?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.