ಬುಧವಾರ, ಜೂನ್ 16, 2021
22 °C

ವಿಸ್ತೃತ ಅಧ್ಯಯನ, ಮಾಹಿತಿಗಳ ಆಗರ

–ಸಿ.ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

ವಿಮೆನ್ ಜರ್ನಲಿಸ್ಟ್ಸ್  ಇನ್ ಇಂಡಿಯಾ

ಸ್ವಿಮ್ಮಿಂಗ್ ಎಗೇನ್ಸ್ಟ್ ದಿ ಟೈಡ್

ಲೇ: ಆರ್. ಅಖಿಲೇಶ್ವರಿ

ಪು: 442; ಬೆ: ರೂ. 1750

ಪ್ರ: ದಿ ವಿಮೆನ್ ಪ್ರೆಸ್, ದೆಹಲಿ

ಹಿಂದೆಂದೂ ಕಾಣದ ಮಟ್ಟಿಗೆ ವೃತ್ತ ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳ ಹೆಚ್ಚಳವನ್ನು ಇಂದು ನಾವು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪತ್ರಕರ್ತೆಯರ ಸ್ಥಾನಮಾನ ಕುರಿತಾದ ಅಧ್ಯಯನ ಅಗತ್ಯ ಹಾಗೂ ಪ್ರಸ್ತುತವಾದದ್ದು. ಈ  ಕುರಿತಂತೆ ವಿವರವಾದ ಸಂಶೋಧನೆ ಹಾಗೂ ವಿಶ್ಲೇಷಣೆ ನಡೆಸಿರುವವರು ಹಿರಿಯ ಪತ್ರಕರ್ತೆ ಆರ್. ಅಖಿಲೇಶ್ವರಿ. ವಿಸ್ತೃತ ನೆಲೆಗಳಲ್ಲಿ ಅಧ್ಯಯನ ನಡೆಸಿ ಬರೆಯಲಾಗಿರುವ ಈ ಪುಸ್ತಕ ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳ ಮಾಧ್ಯಮಗಳಲ್ಲಿನ ಪತ್ರಕರ್ತೆಯರ ಸ್ಥಿತಿಗತಿಗಳ ಮೇಲೆ ಎಂಟು ಅಧ್ಯಾಯಗಳಲ್ಲಿ ಬೆಳಕು ಚೆಲ್ಲುತ್ತದೆ.ಕಳೆದ ಕೆಲವು ದಶಕಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಾದ ಬದಲಾವಣೆಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಅನೇಕ ಸುದ್ದಿಮನೆಗಳು ಇಂದು ಮಹಿಳಾಮಯವಾಗುತ್ತಿವೆ (ಫೆಮಿನೈಸೇಷನ್). ಕೆಲವರಾದರೂ ಮಹಿಳೆಯರು ಇಂದು ಸಂಪಾದಕಿಯರಾಗಿದ್ದಾರೆ, ಅಂಕಣಕಾರರಾಗಿದ್ದಾರೆ. ಯುದ್ಧ ಸ್ಥಳಗಳಿಂದ ವರದಿ ಮಾಡಿದ್ದಾರೆ. ಹಲವು ಟೀವಿ ಸುದ್ದಿವಾಹಿನಿಗಳ ಮುಖವಾಣಿಗಳಾಗಿದ್ದಾರೆ. ಮಾಧ್ಯಮ ಕ್ಷೇತ್ರ ಪಾರಂಪರಿಕವಾಗಿ ಪುರುಷ ಕೋಟೆ ಎಂಬಂತಹ ಮಾತು ಅಪ್ರಸ್ತುತವಾಗುವಷ್ಟು ಮಟ್ಟಿಗೆ ಮಹಿಳಾ ಗೋಚರತೆ ಎದ್ದು ಕಾಣಿಸುತ್ತಿದೆ. ಆದರೆ ಈ ಪರಿವರ್ತನೆ ಪೂರ್ಣವಾದದ್ದೇ ಅಥವಾ ಇನ್ನೂ ಅಂತರಗಳು, ಅಸಮತೋಲನಗಳು ಉಳಿದುಕೊಂಡಿವೆಯೆ? ಎಂಬಂತಹ  ಪ್ರಶ್ನೆಯನ್ನು ಈ ಪುಸ್ತಕದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.ಪತ್ರಿಕೋದ್ಯಮದಲ್ಲಿ ಲಿಂಗ ಅಸಮಾನತೆ ವಿಶ್ವದಾದ್ಯಂತ ಚಾಲ್ತಿಯಲ್ಲಿದೆ ಎಂಬುದು 2001ರ ಐಎಫ್ ಜೆ ಸಮೀಕ್ಷೆಯ ವರದಿ. ಸ್ವೀಡನ್, ಮಲೇಷ್ಯಾ, ಮೊಝಾಂಬಿಕ್, ಅಮೆರಿಕ, ಬ್ರಿಟನ್ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳು ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿನ ಮಾಧ್ಯಮ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಸ್ಥಾನಮಾನಗಳ ಕುರಿತಾಗಿ ಈಗಾಗಲೇ ನಡೆದಿರುವ ಅಧ್ಯಯನಗಳು ಹಾಗೂ ವರದಿಗಳ ಪರಾಮರ್ಶೆ ಅಧ್ಯಾಯ 4ರಲ್ಲಿದೆ.ಪುರುಷರಿಗಿಂತ ಮಹಿಳಾ ವರದಿಗಾರರಿಗೆ ಬಿಬಿಸಿ ಯಂಥ ಸಂಸ್ಥೆಯೂ ಕಡಿಮೆ ವೇತನ ನೀಡುತ್ತದೆ ಎಂಬ ಅಚ್ಚರಿಯ ಮಾಹಿತಿ ಇಲ್ಲಿದೆ. ವಿಶೇಷ ವರದಿಗಾರರ ಅನುಭವವನ್ನು ಅವರ ವೇತನಗಳು ಪ್ರತಿಬಿಂಬಿಸುತ್ತವೆ ಎಂಬುದು ಬಿಬಿಸಿ ವಕ್ತಾರರ ಹೇಳಿಕೆ.ನಮ್ಮ ನೆರೆಯ ನೇಪಾಳದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಇತಿಹಾಸ 1950ರಷ್ಟು ಹಿಂದಕ್ಕೆ ಹೋಗುತ್ತದೆ. ಆಗ ಪತ್ರಕರ್ತೆಯರ ಗುಂಪೊಂದು ‘ವಿಮೆನ್’ ಎನ್ನುವ ಮಾಸಿಕ ಆರಂಭಿಸಿತ್ತು. ಇಷ್ಟೊಂದು ಹಿಂದೆಯೇ ಪತ್ರಿಕೋದ್ಯಮ ಕ್ಷೇತ್ರಕ್ಕೆ ಮಹಿಳೆಯರು ಪ್ರವೇಶ ಪಡೆದಿದ್ದರೂ ದಿನಪತ್ರಿಕೆಗಳ ಡೆಸ್ಕ್ ಅಥವಾ ವರದಿಗಾರ ವಿಭಾಗದಲ್ಲಿ 1990ಕ್ಕೆ ಮುಂಚೆ ಮಹಿಳೆಯರು ಅಲ್ಲಿ  ಇಲ್ಲವೇ ಇಲ್ಲ ಎನ್ನುವ ಪ್ರಮಾಣದಲ್ಲಿ ಇದ್ದರು. ಮಹಿಳೆಯರಿಗೆ ಪತ್ರಿಕೋದ್ಯಮ ಪ್ರವೇಶಕ್ಕೆ ಇರುವ ದೊಡ್ಡ ಅಡ್ಡಿ ಪಿತೃಪ್ರಧಾನ ಪೂರ್ವಗ್ರಹಗಳು. ಯಾವಯಾವುದೋ ಹೊತ್ತಿನಲ್ಲಿ, ಅದೂ ಪತಿ ಮನೆಗೆ ಬಂದಾದ ನಂತರ ಮಹಿಳೆ ತಡವಾಗಿ ಮನೆಗೆ ಬರುವುದನ್ನು ವಿಶೇಷವಾಗಿ ಸ್ವತಃ ಪತಿ ಹಾಗೂ ಅತ್ತೆಯಂದಿರು ಸಹಿಸುವುದಿಲ್ಲ. ಪುರುಷ ಸಹೋದ್ಯೋಗಿಗಳೊಟ್ಟಿಗೆ ಪ್ರಯಾಣ ಮಾಡುವುದು ಹಾಗೂ ಮನೆಯೊಡೆಯನಿಗಿಂತ ಮಹಿಳೆ ಹೆಚ್ಚು ಹೆಸರು ಗಳಿಸುವುದು ಅಭದ್ರತೆ, ಅಸೂಯೆಗಳನ್ನು ಸಾಂಸಾರಿಕ ಬದುಕಲ್ಲಿ ಹುಟ್ಟು ಹಾಕಬಲ್ಲುದು.ಪತ್ರಕರ್ತೆಯರಿಗೆ ಪುರುಷ ಮೇಲಧಿಕಾರಿಯಿಂದ ತಾರತಮ್ಯ ಹಾಗೂ ಕಿರುಕುಳ ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೆಚ್ಚು ಎಂಬುದನ್ನೂ ಈ ಅಧ್ಯಯನ ದಾಖಲಿಸಿದೆ. ಇಂಗ್ಲಿಷ್ ಮಾಧ್ಯಮಗಳಲ್ಲಿ ಕೆಲಸಮಾಡುವ ಮಹಿಳೆಯರಲ್ಲಿ ಇಂತಹ ದೂರುಗಳು ಕಡಿಮೆ. ಕಾಪಿಯಲ್ಲಿ ಪ್ರತಿ ತಪ್ಪಿಗೂ ಪುರುಷ ಸಹೋದ್ಯೋಗಿಗಳು ತನ್ನನ್ನೇ  ದೂಷಿಸುತ್ತಿದ್ದುದನ್ನು ತೆಲುಗು ದಿನಪತ್ರಿಕೆಯೊಂದರ ಉಪಸಂಪಾದಕಿ ಹೇಳಿದ್ದಾರೆ. ಸದಾ ತಪ್ಪು ಹುಡುಕುತ್ತಾ ತನ್ನ ಕಾರ್ಯನಿರ್ವಹಣೆ ರೀತಿಯನ್ನು ಟೀಕಿಸುವ ಮೂಲಕ ಆಕೆಯ ವೃತ್ತಿಬದುಕನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿತ್ತು. ಈ ಕಿರುಕುಳ ಸಹಿಸಲಾಗದೆ ಮೂರು ವರ್ಷಗಳ ನಂತರ ಕೆಲಸ ಬಿಟ್ಟಿದ್ದಾಗಿ ಆ ಪತ್ರಕರ್ತೆ ಹೇಳಿಕೊಂಡಿದ್ದಾಳೆ. (ಪುಟ 114). ಇಂತಹ ಸಮಸ್ಯೆ ಇಂಗ್ಲಿಷ್ ಪತ್ರಿಕೆಗಳಲ್ಲಿ ಕಡಿಮೆ. ಇದಕ್ಕೆ ಕಾರಣ ಅಲ್ಲಿ ಪುರುಷ ಇರಲಿ, ಮಹಿಳೆ ಇರಲಿ ಅವರು ಸಾಮಾಜಿಕವಾಗಿ ಹೆಚ್ಚು ಮುಕ್ತವಾಗಿರುತ್ತಾರೆ. ದುಡಿಯುವ ಸ್ಥಳಗಳಲ್ಲಿನ ಈ ವ್ಯತ್ಯಾಸಕ್ಕೆ ಸಾಮಾಜಿಕ, ಸಾಂಸ್ಕೃತಿಕ ಭಿನ್ನತೆಗಳು ಕಾರಣ.  ‘ದಕ್ಷಿಣ ಭಾರತದಲ್ಲಿ ಪತ್ರಕರ್ತೆಯರ ಸಮಸ್ಯೆಗಳು ಹಾಗೂ ಭವಿಷ್ಯ’ ಕುರಿತಂತೆ ಅಪ್ರಕಟಿತ ವರದಿಯೊಂದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. 1980ರಲ್ಲಿ ಎರಡನೇ ಪತ್ರಿಕಾ ಆಯೋಗದ ವತಿಯಿಂದ ಸಿದ್ಧಪಡಿಸಲಾದ ಈ ವರದಿ ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳ ಪತ್ರಕರ್ತೆಯರ ಸ್ಥಿತಿಗತಿಯ ವಿವರಗಳನ್ನು ನೀಡುತ್ತದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಕೇರಳಗಳಲ್ಲಿ ನಡೆಸಲಾದ ಈ ಅಧ್ಯಯನದ ಪ್ರಕಾರ, ಸಂಪ್ರದಾಯಶೀಲ ದಕ್ಷಿಣ ಭಾರತದಲ್ಲಿ ಪತ್ರಕರ್ತೆಯರು ಬಹಳ ಅಪರೂಪವಾಗಿದ್ದರು. ನಗರಪ್ರದೇಶಗಳಲ್ಲಷ್ಟೇ ಕೆಲವು ಪತ್ರಕರ್ತೆಯರನ್ನು ಕಾಣಬಹುದಿತ್ತು. ಪತ್ರಕರ್ತೆಯರನ್ನು ವಿಚಿತ್ರವಾಗಿ ಕಾಣುವುದು ಮಾಮೂಲಾಗಿತ್ತು.ಪತ್ರಿಕೋದ್ಯಮ ಮಹಿಳೆಯರಿಗಲ್ಲ ಎಂದು ನಿರುತ್ತೇಜನಗೊಳಿಸುವ ವಾತಾವರಣವಿತ್ತು. ಇನ್ನು ಅವರನ್ನು ಸಮಾನರಾಗಿ ಪರಿಗಣಿಸುವುದಂತೂ ದೂರವೇ ಉಳಿದಿತ್ತು.  ಮಹಿಳೆಗೆ ವರದಿಗಾರಿಕೆಗೆ ಅವಕಾಶ ನೀಡಿದರೂ ಅದು ಮಹಿಳೆ, ಮಕ್ಕಳು ಹಾಗೂ ಸಾಂಸ್ಕೃತಿಕ ಸಮಾರಂಭಗಳಿಗೆ ಸೀಮಿತವಾಗಿರುತ್ತಿತ್ತು. ಅಪರಾಧ, ರಾಜಕೀಯ ಅಥವಾ ಶಾಸನಸಭೆಗಳ ವರದಿಗಾರಿಕೆಯ ಅವಕಾಶ ಮಹಿಳೆಗೆ ಸಿಗುತ್ತಿರಲಿಲ್ಲ. ತನಿಖಾ ವರದಿಗಾರಿಕೆಯಂತೂ ದುರ್ಲಭವಾಗಿತ್ತು ಎಂದು ಈ ವರದಿ ಹೇಳಿದೆ ( ಪುಟ 201). ಹೀಗಿದ್ದೂ ಕೆಲವು ಮ್ಯಾಗ್ ಝೀನ್ ಗಳಲ್ಲಿ ಸಂಪಾದಕಿಯರು ಇದ್ದುದಕ್ಕೆ ಅವರಿಗಿದ್ದ ನೆಂಟಸ್ತಿಕೆಗಳು ಕಾರಣವಾಗಿದ್ದವು. ಶ್ರೀಮತಿ ಕೆ.ಎಂ. ಮ್ಯಾಥ್ಯೂ ಅವರು ಮಲಯಾಳಂ ಮಾಸಿಕ ‘ವನಿತಾ’ ಸಂಪಾದಕಿ.ಯಾಗಿದ್ದರು. ಇದಕ್ಕೆ ‘ಮಲಯಾಳ ಮನೋರಮಾ’ ಮುಖ್ಯ ಸಂಪಾದಕ ಹಾಗೂ ಮಾಲೀಕ ಕೆ.ಎಂ. ಮ್ಯಾಥ್ಯೂ ಅವರು ಹೇಳಿದ್ದ ಮಾತುಗಳಿವು: ‘ಅವರು ಆ ಮ್ಯಾಗಝೀನ್‌ನ ಸಂಪಾದಕಿ ಏಕೆಂದರೆ ಅವರು ನನ್ನ ಪತ್ನಿ’.

(ಪುಟ 202).

ಕೇವಲ ಎರಡು ಪತ್ರಿಕಾ ಸಂಸ್ಥೆಗಳು ಮಾತ್ರ ಮಹಿಳೆ ನೇಮಕಾತಿ ವಿಚಾರದಲ್ಲಿ ಪ್ರಬುದ್ಧ ದೃಷ್ಟಿಕೋನ ತೋರಿಸಿವೆ. ಅವು ಬೆಂಗಳೂರಿನ ‘ಡೆಕ್ಕನ್ ಹೆರಾಲ್ಡ್’ ಹಾಗೂ ಹೈದರಾಬಾದ್ ನ ತೆಲುಗು ದಿನಪತ್ರಿಕೆ ‘ಈನಾಡು’ ಎಂದು ಈ ವರದಿ ಹೇಳಿದೆ. 31 ವರ್ಷಗಳ (ಆ ವರದಿ ಸಂದರ್ಭದಲ್ಲಿ) ಅವಧಿಯಲ್ಲಿ ‘ಡೆಕ್ಕನ್ ಹೆರಾಲ್ಡ್’ನಲ್ಲಿ ಎಂಟು ಅಥವಾ ಒಂಬತ್ತು ಪತ್ರಕರ್ತೆಯರಿದ್ದರು. ಅವರಲ್ಲಿ ಇಬ್ಬರು ಮ್ಯಾಗ್ ಝೀನ್ ಸಂಪಾದಕರಾಗಿದ್ದರು. ಪ್ರತಿಭೆ ಇದ್ದಲ್ಲಿ ಹೆಚ್ಚಿನ ಮಹಿಳೆಯರ ನೇಮಕದ ವಿಚಾರದಲ್ಲಿ ಆಡಳಿತ ವರ್ಗಕ್ಕೆ ಯಾವುದೇ  ಅಡ್ಡಿ ಇರಲಿಲ್ಲ.

‘ಈ ನಾಡು’ ಪತ್ರಿಕೆಯೂ ಈ ವಿಚಾರದಲ್ಲಿ ಹೊಸ ಬುನಾದಿ ಹಾಕಿದ ಹೆಗ್ಗಳಿಕೆ ಹೊಂದಿದೆ. ಒಂದು ಕಾಲದಲ್ಲಿ ಅದರ ಸಿಬ್ಬಂದಿ ವರ್ಗದಲ್ಲಿ ಎಂಟು ಉಪ ಸಂಪಾದಕಿಯರಿದ್ದರು. ಅದು ರಾಷ್ಟ್ರದಲ್ಲೇ ಈ ಹಿಂದೆಂದೂ ಕೇಳರಿಯದ ಸಂಖ್ಯೆಯಾಗಿತ್ತು.ಆದರೆ ಮಹಿಳೆಯರಿಗೆ ರಾತ್ರಿ ಪಾಳಿ ಕಡ್ಡಾಯಗೊಳಿಸಿದ ನಂತರ ಆ ಸಂಖ್ಯೆ ಐದಕ್ಕೆ ಕುಸಿದಿತ್ತು. ಮಹಿಳೆಯರಿಗೆ ರಾತ್ರಿ ಪಾಳಿ ವಿನಾಯಿತಿ ನೀಡಿದ್ದು ಪಕ್ಷಪಾತ ಎಂದು ಪುರುಷ ಉಪಸಂಪಾದಕರು ಕಿರು ಬಂಡಾಯ ಎದ್ದಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಅನುಭವದ ನಂತರ ಪತ್ರಕರ್ತೆಯರ ನೇಮಕ ಮಾಡಿಕೊಳ್ಳುವ ಮೊದಲು ಎರಡೆರಡು ಬಾರಿ ಚಿಂತಿಸುತ್ತಿದ್ದುದಾಗಿ ‘ಈನಾಡು’ ಸಂಪಾದಕ ರಾಮಭಟ್ಲ ಕೃಷ್ಣಮೂರ್ತಿ ಹೇಳಿದ್ದರೆಂದು (ಪುಟ 203) ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಪುಟ 361ರಲ್ಲಿ ಇದೇ ವಿಚಾರದ ಬಗ್ಗೆ ಬೇರೆಯದೇ ವ್ಯಾಖ್ಯಾನ ಇರುವುದು ಗೊಂದಲ ಮೂಡಿಸುತ್ತದೆ. 1974ರಲ್ಲಿ ಆರಂಭವಾದ ತೆಲುಗು ದಿನಪತ್ರಿಕೆ ‘ಈ ನಾಡು’ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ  ಪ್ರವೃತ್ತಿಗೆ ನಾಂದಿ ಹಾಡಿತು. ಆರಂಭದಲ್ಲಿ ಎಂಟು ಮಹಿಳಾ ಉಪಸಂಪಾದಕರಿದ್ದರು. ಐವರು ಜನರಲ್ ಡೆಸ್ಕ್ ನಲ್ಲಿದ್ದರು.ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಾ ಮುದ್ರಣಗಳನ್ನು ಹೊರತರುವ ಹೊಣೆಗಾರಿಕೆಗಳನ್ನೂ ನಿಭಾಯಿಸುತ್ತಿದ್ದರು. ಇಂಗ್ಲಿಷ್ ಪತ್ರಿಕೆಗಳಲ್ಲೂ ಇಂತಹದೊಂದು ಅವಕಾಶ ಆಗ ಕಂಡುಬಂದಿರಲಿಲ್ಲ. ಸಮಾನ ಅವಕಾಶಗಳ ನೆಲೆಯಲ್ಲಿ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವ ಹಕ್ಕುಗಳ ಪ್ರತಿಪಾದಕರಾಗಿದ್ದರು ಈ ಮಹಿಳೆಯರು. ಆದರೆ ರಾತ್ರಿಪಾಳಿ ನಂತರ ಅವರಿಗೆ ಮನೆಗೆ ಹೋಗಲು ಕಚೇರಿ ವ್ಯಾನ್ ಒದಗಿಸುವ ವಿಶೇಷ ರಿಯಾಯಿತಿ ಬಗ್ಗೆ ಪುರುಷ ಸಹೋದ್ಯೋಗಿಗಳು ಪ್ರತಿರೋಧ ತೋರಿದ್ದರಿಂದ ಮಹಿಳೆಯರಿಗೆ ಬರೀ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲು ಹೇಳಲಾಯಿತು ಎಂದು ಬರೆಯಲಾಗಿದೆ. ಇತಿಹಾಸದ ದಾಖಲೀಕರಣದ  ಪ್ರಯತ್ನಗಳ ಕಷ್ಟವನ್ನು ಇದು ಪ್ರತಿನಿಧಿಸುತ್ತದೆ.ತೆಲುಗು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಕರ್ತೆಯರನ್ನು ನೇಮಕ ಮಾಡಿಕೊಳ್ಳುವ ಇತಿಹಾಸ ಮೂರು ದಶಕಗಳಿಂದಲೂ ನಡೆದು ಬಂದಿದೆ. ಮಲಯಾಳಂ ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿ ಮಹಿಳೆಯರ ನೇಮಕಾತಿಗೆ ಅಲಿಖಿತ ನಿಷೇಧ ಇದೆ. ಸೈದ್ಧಾಂತಿಕ ಹಿನ್ನೆಲೆಯ ಕೆಲವು ಪತ್ರಿಕೆಗಳು ಮಹಿಳೆಯರನ್ನು ನೇಮಕ ಮಾಡಿಕೊಂಡರೂ ಅವರೆಲ್ಲಾ ಡೆಸ್ಕ್ ನಲ್ಲಿ ಕೆಲಸ ಮಾಡುವವರು. ತಮಿಳು ಪತ್ರಿಕೋದ್ಯಮದಲ್ಲಿ ಈಗಲೂ ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಪತ್ರಕರ್ತೆಯರಿದ್ದಾರೆ ಎಂಬುದು  2003ರಲ್ಲಿ ಪ್ರಕಟವಾದ  ಪ್ರೆಸ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ  ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಸಿದ್ಧಪಡಿಸಿದ ವರದಿಯಲ್ಲಿ ದಾಖಲಾಗಿದೆ.ದಿನ ಪತ್ರಿಕೆಗಳಲ್ಲಿನ ಬಣ್ಣದ ಪುರವಣಿಗಳಿಂದಾಗಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ತೆಲುಗು, ಕನ್ನಡ, ಮಲಯಾಳಂ ಪತ್ರಿಕೆಗಳಲ್ಲಿ ಸೃಷ್ಟಿಯಾಗಿವೆ . ಏಕೆಂದರೆ ಫೀಚರ್ ಹಾಗೂ ಸಾಫ್ಟ್ ಸ್ಟೋರಿಗಳ ಬರಹಗಳಲ್ಲಿ ಮಹಿಳೆಯರು ಸಿದ್ಧಹಸ್ತರು ಎಂಬುದು ಪ್ರತೀತಿ. ಆದರೆ ತಮಿಳಿನಲ್ಲಿ ಈಗಾಗಲೇ ಹೆಚ್ಚು ಮ್ಯಾಗಝೀನ್ ಗಳು ಇರುವ ಕಾರಣ ಫೀಚರ್ ಪುಟಗಳಿಗೆ ತಮಿಳು ದಿನಪತ್ರಿಕೆಗಳಲ್ಲಿ ಅವಕಾಶವಾಗಿಲ್ಲ. ಇದು ತಮಿಳು ವೃತ್ತಪತ್ರಿಕೆಗಳಿಗೆ ಮಹಿಳೆಯರ ಪ್ರವೇಶಾವಕಾಶ ಕಡಿಮೆ ಆಗಲು ಕಾರಣ.ಮಹಿಳೆಯ ಪೂರ್ಣ ಪ್ರಮಾಣದ ನಿರ್ಭೀತ ಪಾಲ್ಗೊಳ್ಳುವಿಕೆ ಸಾಧ್ಯವಾಗಲು ಮಾಧ್ಯಮ ಸಂಸ್ಥೆಗಳ ಹಾಗೆಯೇ ಸಮಾಜದ ವ್ಯವಸ್ಥೆಗಳಲ್ಲೂ ಪರಿವರ್ತನೆಯಾಗಿಲ್ಲ. ಆದರೆ    ಸಮಾನ ಅವಕಾಶಗಳನ್ನು ಸಕ್ರಿಯವಾಗಿ ಒದಗಿಸುವುದು ಒಳ್ಳೆಯ ಆಡಳಿತ ನಿರ್ವಹಣೆ ಹಾಗೂ ವಾಣಿಜ್ಯ ದೃಷ್ಟಿಯಿಂದಲೂ ಸೂಕ್ತವಾದುದು ಎಂಬುದನ್ನು ಮಾಧ್ಯಮ ಸಂಸ್ಥೆಗಳು ಇತ್ತೀಚೆಗೆ ಕಂಡುಕೊಳ್ಳುತ್ತಿವೆ ಎಂಬುದನ್ನು ಈ ಪುಸ್ತಕದಲ್ಲಿ ಗುರುತಿಸಲಾಗಿದೆ.ಅಪರಾಧ, ರಾಜಕೀಯ ವರದಿಗಾರಿಕೆ ಮಾಡದೆ ಇರುವುದರಿಂದ ಹೆಚ್ಚೇನೂ ಕಳೆದುಕೊಳ್ಳುವುದು ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮಹಿಳೆಯರು ತಾವೇ ಗಡಿರೇಖೆ ಎಳೆದುಕೊಳ್ಳುವುದೂ ಉಂಟು. ಫೀಚರ್ ಗಳನ್ನು ಬರೆಯುವುದು ಕಷ್ಟ. ಜೊತೆಗೆ ರಾಜಕೀಯ ವರದಿಗಳಿಗಿಂತ ಫೀಚರ್ ಗಳಿಗೆ ಹೆಚ್ಚಿನ ಓದುಗರು ಇರುತ್ತಾರೆ ಎಂಬುದು ಈ ಪತ್ರಕರ್ತೆಯರ ಪ್ರತಿಪಾದನೆ . ಮಹತ್ವಾಕಾಂಕ್ಷೆಗಳಿಗೆ ಕುಟುಂಬದ ಹೊಣೆಗಾರಿಕೆ ಅಡ್ಡಿಯಾಗುತ್ತದೆ ಎಂಬುದು ವಾಸ್ತವ. ಸಮಯವನ್ನೆಲ್ಲಾ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ಕಳೆಯುವುದಾದಲ್ಲಿ ನಮ್ಮ ಮಕ್ಕಳ ಭವಿಷ್ಯ ನೋಡುವವರಾರು ಎಂಬಂತಹ ಅನೇಕ ಪತ್ರಕರ್ತೆಯರ ಪ್ರಶ್ನೆಗೆ ಉತ್ತರಿಸುವರಾರು?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.