ಶನಿವಾರ, ಏಪ್ರಿಲ್ 17, 2021
31 °C

ವಿಸ್ಮಯ ಬಂಡೆಯಿಂದ ಗಂಟೆ ನಾದ!

ಪ್ರಜಾವಾಣಿ ವಾರ್ತೆ/ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ಅದೊಂದು ಬಂಡೆಗಲ್ಲು... ನೋಡಲು ಅದರಲ್ಲೇನೂ ಅಂಥ ವಿಶೇಷವಿಲ್ಲ... ಹತ್ತಿರ ಹೋಗಿ ಬಡಿದರೆ ಅದೇನೋ ಅದ್ಭುತ... ದೇವಾಲಯದಲ್ಲಿ ಗಂಟೆಯ ನಾದ ಮೊಳಗುತ್ತದೆ...ಹೌದು, ಇದು ಅಚ್ಚರಿಯಾದರೂ ಸತ್ಯ. ತಾಲ್ಲೂಕಿನ ಕಂಚಗಾರ ಹಳ್ಳಿಯ ಬಳಿ ಇರುವ ಬಂಡೆಗಲ್ಲಿನ ವಿಶೇಷತೆ ಇದು. ಸೃಷ್ಟಿಯಲ್ಲಿ ಅನೇಕ ವಿಚಿತ್ರಗಳಿವೆ. ಅನೇಕ ರಹಸ್ಯಗಳು ಇದರಲ್ಲಿ ಅಡಗಿವೆ.ಒಂದೊಂದರಲ್ಲಿ ಒಂದೊಂದು ರೀತಿಯ ಸೋಜಿಗ ಕಾಣುತ್ತದೆ. ಪ್ರಕೃತಿ ನಿರ್ಮಿತವಾಗಿ ಈ ಬಂಡೆಗಲ್ಲೂ ಇಂತಹ ವಿಸ್ಮಯವನ್ನು ಒಳಗೊಂಡಿದೆ.ದಾರಿಯಲ್ಲಿ ಹಾದು ಹೋಗುವವರಿಗೆ ಇದೊಂದು ಸಾಮಾನ್ಯ ಬಂಡೆಗಲ್ಲಿನಂತೆ ಗೋಚರಿಸಿದರೂ, ಅದರಲ್ಲಿರುವ ವಿಶೇಷವನ್ನು ತಿಳಿಯಲು ಹತ್ತಿರ ಹೋಗಲೇಬೇಕು. ಅದನ್ನು ಕಲ್ಲಿನಿಂದ ಬಾರಿಸಿದರೆ, ಗಂಟೆಯ ನಾದ ಹೊರಹೊಮ್ಮುತ್ತದೆ. ದೇಗುಲದಲ್ಲಿ ಪೂಜೆ ನಡೆಯುತ್ತಿದೆಯೇನೋ ಎಂದು ಭಾಸವಾಗದೇ ಇರದು.ಕೇವಲ ಆ ಸ್ಥಳದಲ್ಲಿ ಮಾತ್ರ ಶಬ್ದ ಕೇಳುವುದಿಲ್ಲ. ವಾತಾವರಣ ನಿಶ್ಯಬ್ದವಾಗಿದ್ದಲ್ಲಿ, ಸುಮಾರು ಎರಡು ಕಿ.ಮೀ. ದೂರದವರೆಗೆ ಗಂಟೆಯ ಶಬ್ದ ಕೇಳುತ್ತದೆ. ಬೇರೆ ಶಬ್ದಗಳಿದ್ದರೂ, ಸುಮಾರು ಒಂದು ಕಿ.ಮೀ. ವರೆಗೆ ಈ ಕಲ್ಲಿನಿಂದ ಹೊರಹೊಮ್ಮುವ ನಾದ ಕಿವಿಗೆ ಸ್ಪಷ್ಟವಾಗಿ ಕೇಳುತ್ತದೆ ಎನ್ನುತ್ತಾರೆ ಸ್ಥಳೀಯರಾದ ಸೈದಪ್ಪ ಗುತ್ತೇದಾರ.ಅನೇಕ ಜನರು ಇಲ್ಲಿಗೆ ಬಂದು ಹೋಗಿದ್ದಾರೆ. ಆದರೆ ಇದರ ಮಹತ್ವ ಯಾರಿಗೂ ತಿಳಿದಿಲ್ಲ. ಹೀಗೆ ಕೆಲ ಹುಡುಗರು ಆಟ ಆಡುತ್ತ, ಈ ಕಲ್ಲಿಗೆ ಹೊಡೆದಾಗಲೇ ಗೊತ್ತಾಗಿದ್ದು, ಇಲ್ಲಿಯೂ ಒಂದು ವಿಶೇಷತೆ ಇದೆ ಎಂಬುದು ಗೊತ್ತಾಗಿದೆ ಎಂದು ಹೇಳುತ್ತಾರೆ.ಈ ಕಲ್ಲು ಹಾಗೆಯೇ ಒಂದೆಡೆ ನಿಂತಿದ್ದು, ಇದನ್ನು ಸಂರಕ್ಷಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ನಿಸರ್ಗದ ಅದ್ಭುತ ವಸ್ತುವೊಂದು ಹಾಳಾಗಿ ಹೋಗಲಿದೆ ಎಂಬ ಆತಂಕವನ್ನು ಗ್ರಾಮಸ್ಥ ವಿಠಲ್ ವ್ಯಕ್ತಪಡಿಸುತ್ತಾರೆ.ಈ ಅಪರೂಪದ ಬಂಡೆಯಿಂದ ಹೊರಹೊಮ್ಮುವ ನಾದವನ್ನು ಕೇಳಲು ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಇಲ್ಲಿಗೆ ಬರುತ್ತಿದ್ದಾರೆ. ಸಾವಿರಾರು ಕಲ್ಲುಗಳ ಮಧ್ಯೆ ಇರುವ ಈ ಅಪರೂಪದ ಬಂಡೆಯನ್ನು ವ್ಯವಸ್ಥಿತವಾಗಿ ಸಂರಕ್ಷಿಸುವುದು ಅತ್ಯವಶ್ಯಕ ಎಂದು ಗ್ರಾಮಸ್ಥರು ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.