ಸೋಮವಾರ, ಮೇ 17, 2021
25 °C

ವೇತನ ಭೇದ ನಿವಾರಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೇತನ ತಾರತಮ್ಯ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಧರಣಿ ನಡೆಸಿದರು.ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವಿದ್ಯಾರ್ಹತೆ ಹಾಗೂ ಕಾರ್ಯಭಾರ ಒಂದೇ ಇದೆ. ಆದರೆ, ವೇತನ ಶ್ರೇಣಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಹಾಗೂ ಪ್ರಾಂಶುಪಾಲರಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಧರಣಿ ನಿರತರು ಆಕ್ರೋಶವನ್ನು ವ್ಯಕ್ತಪಡಿಸಿದರು.`ವೇತನ ತಾರತಮ್ಯ ಸಮಸ್ಯೆ ಬಗೆಹರಿಸುವಂತೆ, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಲ್ಲ ಸರ್ಕಾರಗಳಿಗೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಇದರಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಅನ್ಯಾಯವಾಗುತ್ತಿದೆ~ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ದೂರಿದರು.ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರ ಶ್ರೇಣಿಯ ಅಧಿಕಾರಿಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೇತನ ಶ್ರೇಣಿ 1988ರವರೆಗೂ ಸರಿಸಮನಾಗಿತ್ತು. ನಂತರ ಬಂದ ವೇತನ ಆಯೋಗಗಳು ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರ ಶ್ರೇಣಿಯ ಅಧಿಕಾರಿಗಳ ವೇತನವನ್ನು ಹೆಚ್ಚಳ ಮಾಡಿದವು. ಆದರೆ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೇತನವನ್ನು ಹೆಚ್ಚಿಸಲಿಲ್ಲ. ಆರನೇ ವೇತನ ಆಯೋಗವು ಈ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ಅವರು ಹೇಳಿದರು.2009ರಲ್ಲಿ ನೇಮಕಗೊಂಡ 2,500 ಮಂದಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಎಚ್.ಡಿ, ಎಂ.ಫಿಲ್, ಯುಜಿಸಿ ಅಥವಾ ಎನ್‌ಇಟಿ ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಮರಿತಿಬ್ಬೇಗೌಡ, ವೈ.ಎ. ನಾರಾಯಣಸ್ವಾಮಿ, ಅರುಣ್ ಶಹಪುರ, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಶಕೀಲ್ ಅಹಮ್ಮದ್, ಕೋಶಾಧ್ಯಕ್ಷ ಎಂ.ಜಯಣ್ಣ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.