ಬುಧವಾರ, ಏಪ್ರಿಲ್ 14, 2021
31 °C

ವೇದಾಂತ ಬಾಲಶಕ್ತಿ ಯೋಜನೆಗೆ ಚಾಲನೆ ಇಂದು

ರಾಹುಲ ಬೆಳಗಲಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ನಾಲ್ಕು ತಾಲ್ಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ `ವೇದಾಂತ ಬಾಲಶಕ್ತಿ ಯೋಜನೆ~ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವೇದಾಂತ ಪ್ರತಿಷ್ಠಾನದೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ.ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ವೇದಾಂತ ಪ್ರತಿಷ್ಠಾನ ವಹಿಸಿಕೊಂಡಿದ್ದು, ನೂತನ ಯೋಜನೆಗೆ ಭಾನುವಾರ ಚಾಲನೆ ದೊರೆಯಲಿದೆ. ಆದರೆ, ಅಂಗನವಾಡಿ ಕೇಂದ್ರಗಳನ್ನು ವೇದಾಂತ ಪ್ರತಿಷ್ಠಾನ ವ್ಯಾಪ್ತಿಗೆ ನೀಡುವುದರಿಂದ ಸರ್ಕಾರ ಹಿಡಿತವನ್ನು ಕಳೆದುಕೊಳ್ಳಲಿದೆ ಹಾಗೂ ತನ್ನ ಕರ್ತವ್ಯವನ್ನು ಖಾಸಗಿ ಸಂಸ್ಥೆಗೆ ವಹಿಸಿಕೊಡುವುದು ಸರಿಯಲ್ಲ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಸಂಘಟನೆ ತೀವ್ರವಾಗಿ ಖಂಡಿಸಿದೆ.ಅಂಗನವಾಡಿ ಕೇಂದ್ರಗಳನ್ನು ನಿಭಾಯಿಸುವಷ್ಟು ಕಾರ್ಯಕರ್ತೆಯರು, ಸಹಾಯಕಿಯರು, ಅನುದಾನ ಮತ್ತು ಸೌಕರ್ಯಗಳಿದ್ದರೂ ಸರ್ಕಾರ ಜವಾಬ್ದಾರಿಯಿಂದ ವಿಮುಖಗೊಳ್ಳುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಜಿಲ್ಲೆಯಲ್ಲಿ 1139 ಕೇಂದ್ರಗಳು: ನಾಲ್ಕು ಜಿಲ್ಲೆಗಳ ಒಟ್ಟು 2,635 ಅಂಗನವಾಡಿ ಕೇಂದ್ರ ವೇದಾಂತ ಪ್ರತಿಷ್ಠಾನ ವ್ಯಾಪ್ತಿಗೆ ಒಳಪಡಲಿವೆ. ಚಿಕ್ಕಬಳ್ಳಾಪುರದ 1139, ಬೆಂಗಳೂರು ಗ್ರಾಮಾಂತರದ 1207, ಬೆಂಗಳೂರು ನಗರದ 222 ಮತ್ತು ರಾಮನಗರದ 67 ಅಂಗನವಾಡಿ ಕೇಂದ್ರಗಳ ಜವಾಬ್ದಾರಿ ಪ್ರತಿಷ್ಠಾನ ವಹಿಸಿಕೊಳ್ಳಲಿದೆ.`ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳ 1139 ಅಂಗನವಾಡಿ ಕೇಂದ್ರಗಳನ್ನು ವೇದಾಂತ ಪ್ರತಿಷ್ಠಾನ ಐದು ವರ್ಷಗಳ ಕಾಲ ನಿಭಾಯಿಸಲಿದೆ. ಸರ್ಕಾರದ ಯಾವುದೇ ನೆರವು ಅಥವಾ ಅನುದಾನ ಪ್ರತಿಷ್ಠಾನ ತೆಗೆದುಕೊಳ್ಳುವುದಿಲ್ಲ. ಕೇಂದ್ರಗಳಿಗೆ ಸಾಧನ-ಸಲಕರಣೆ ಮತ್ತು ಮಕ್ಕಳಿಗೆ ಆಹಾರ ನೀಡಲಿದೆ. ಪ್ರತಿಷ್ಠಾನವು ಗ್ರಾಮ ಸಮಿತಿಗಳನ್ನು ರಚಿಸುತ್ತದೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ~ ಎಂದು ಜಿಲ್ಲಾಡಳಿತ ಅಧಿಕಾರಿಗಳು ತಿಳಿಸಿದ್ದಾರೆ.ಖಾಸಗೀಕರಣದ ಆತಂಕ: ಆದರೆ, ಈ ಎಲ್ಲ ಪ್ರಕ್ರಿಯೆ ಖಾಸಗೀಕರಣದ ಕ್ರಮವೇ ಎಂದು ಸಿಐಟಿಯು ಅಂಗನವಾಡಿ ನೌಕರರ ಮತ್ತು ಸಹಾಯಕಿಯರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಷ್ಮಿದೇವಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಅಂಗನವಾಡಿ ಕೇಂದ್ರಗಳನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಶಕ್ತವಾಗಿರುವಾಗ, ಖಾಸಗಿ ಸಂಸ್ಥೆ ಯಾಕೆ ಮಧ್ಯಪ್ರವೇಶಿಸಬೇಕು? ಅಂಗನವಾಡಿ ಕೇಂದ್ರಗಳಲ್ಲಿ ಈಗಿರುವ ವ್ಯವಸ್ಥೆಯನ್ನು ಸಂಪೂರ್ಣ ಬದಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳು ಅಸ್ತಿತ್ವ ಕಳೆದುಕೊಳ್ಳಬಹುದು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುವ ಸಾಧ್ಯತೆಯಿದೆ. ಅಂಗನವಾಡಿ ಕೇಂದ್ರಗಳನ್ನು ವೇದಾಂತ ಪ್ರತಿಷ್ಠಾನಕ್ಕೆ ಒಪ್ಪಿಸುವ ಅನಿವಾರ್ಯತೆ ಏನಿದೆ~ ಎಂದು ಅವರು ಪ್ರಶ್ನಿಸುತ್ತಾರೆ.`ಸರ್ಕಾರಿ ಸೇವೆ ಮತ್ತು ಕಾರ್ಯಗಳ ಕುರಿತು ಅಪಾರ ಕಾಳಜಿ ಹೊಂದಿರುವ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಸರ್ಕಾರದ ಸಹಯೋಗದಲ್ಲೇ ಅಂಗನವಾಡಿ ಕೇಂದ್ರಗಳನ್ನು ನಡೆಸಲಿ. ಸರ್ಕಾರಿ ಯೋಜನೆಗಳ ಅನುಷ್ಠಾನದ ಕುರಿತು ಅಭಿಮಾನದಿಂದ ಹೇಳಿಕೊಳ್ಳುವ ಅವರು ಯಾಕೆ ಖಾಸಗಿ ಸಂಸ್ಥೆಯತ್ತ ಒಲವು ತೋರುತ್ತಿದ್ದಾರೆ? ಅಂಗನವಾಡಿ ಕೇಂದ್ರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲೆ ಇರಲಿ~ ಎಂದರು.ಯೋಜನೆಗೆ ಮೊಯಿಲಿ ಚಾಲನೆ

ಚಿಕ್ಕಬಳ್ಳಾಪುರ: ನಗರದ ನಂದಿ ರಂಗಮಂದಿರ ಆವರಣದಲ್ಲಿ ಭಾನುವಾರ ಬೆಳಿಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ `ವೇದಾಂತ ಬಾಲಶಕ್ತಿ ಯೋಜನೆ~ಗೆ ಚಾಲನೆ ನೀಡಲಿದ್ದಾರೆ.ಶಾಸಕ ಕೆ.ಪಿ.ಬಚ್ಚೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಆರ್.ಅಶೋಕ್, ಸಚಿವರಾದ ಕಳಕಪ್ಪ ಬಂಡಿ, ಎ.ನಾರಾಯಣಸ್ವಾಮಿ, ಬಿ.ಎನ್.ಬಚ್ಚೇಗೌಡ, ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.