ಶನಿವಾರ, ಜನವರಿ 18, 2020
21 °C
ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವ; ಇಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಇಲ್ಲಿನ ನಗರಪಾಲಿಕೆ ಎದುರಿನ ಪಿ.ಬಿ.ರಸ್ತೆ ಬದಿಯಲ್ಲಿ ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಲಾಯಿತು.ಭತ್ತಕ್ಕೆ ರೂ 2,300, ಮೆಕ್ಕೆಜೋಳಕ್ಕೆ ರೂ 1,800, ಹತ್ತಿ, ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಅಡಿಕೆ ಬೆಳೆ ನಿಷೇಧ ರದ್ದುಪಡಿಸಬೇಕು. ಎಪಿಎಲ್‌ ಪಡಿತರ ಚೀಟಿದಾರರಿಗೂ ‘ಅನ್ನಭಾಗ್ಯ’ ಯೋಜನೆ ವಿಸ್ತರಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 10 ಗಂಟೆ ವಿದ್ಯುತ್‌ ನೀಡಬೇಕು. ಅಡುಗೆ ಅನಿಲ ಸಬ್ಸಿಡಿ ಗೊಂದಲ ನಿವಾರಿಸಬೇಕು ಎಂಬುದು ಅವರ ಆಗ್ರಹ.ನೇತೃತ್ವ ವಹಿಸಿದ್ದ ರೇಣುಕಾಚಾರ್ಯ ಮಾತನಾಡಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಎರಡು ತಿಂಗಳಿಂದ ಹೋರಾಡುತ್ತಿದ್ದೇವೆ. ಆದರೆ, ಸರ್ಕಾರ ಸ್ಪಂದಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ನೆರವಾಗುತ್ತಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳಿಂದ ಹಣ ಪಡೆಯಲು ಕೇಂದ್ರ ಸರ್ಕಾರ ಹೊರಟಿದೆ. ಕೇಂದ್ರ ಸರ್ಕಾರದಲ್ಲಿ ರಾಜ್ಯದ ಆರು ಮಂದಿ ಸಚಿವರಿದ್ದರೂ, ಪ್ರಧಾನಿ ಭೇಟಿಯಾಗಿ ರೈತರಿಗೆ ನೆರವಾಗುತ್ತಿಲ್ಲ ಎಂದು ದೂರಿದರು.ಹಿಂದೆ ರೂ 425 ಕೊಟ್ಟರೆ ಅಡುಗೆ ಅನಿಲ ಸಿಲಿಂಡರ್‌ ಸಿಗುತ್ತಿತ್ತು. ಈಗ, ರೂ 1,030 ಕೊಡಬೇಕು. ಸಹಾಯಧನ ಯಾವಾಗ ಬರುತ್ತದೆಯೋ ಯಾರಿಗೆ ಗೊತ್ತು? ಈ ಸಮಸ್ಯೆ ಬಗೆಹರಿಸಬೇಕು. ರೈತರ ಪಂಪ್‌ಸೆಟ್‌ಗೆ ದಿನಕ್ಕೆ 10 ಗಂಟೆ ವಿದ್ಯುತ್‌ ಕೊಡಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಜನರು ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.

ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಇದರಲ್ಲಿ ಪಕ್ಷವಿಲ್ಲ. ರೈತರ ಹಿತಕ್ಕಾಗಿ ರಾಜಕಾರಣ ತ್ಯಾಗ ಮಾಡುವುದಕ್ಕೂ ಹಿಂಜರಿಯುವುದಿಲ್ಲ ಎಂದರು.ಕೆಜೆಪಿ ಮುಖಂಡರಾದ ಬಿ.ಎಸ್‌. ಜಗದೀಶ್‌, ಹೇಮಂತ್‌ಕುಮಾರ್‌, ಬಿ.ಎಂ.ಸತೀಶ್‌, ಕಲ್ಲಿಂಗಪ್ಪ, ಲಿಂಗಣ್ಣ, ಕೊಟ್ರೇಶ್‌, ವೀರಭದ್ರಸ್ವಾಮಿ, ಅಮಿರಾಬಾನು, ಸೀಮಾ, ಪಾರ್ವತಮ್ಮ ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.ರೈತರ ಮಾರಣಹೋಮಕ್ಕೆ ಹೊರಟಿದೆ

ಅಡಿಕೆಯಲ್ಲಿ ಹಾನಿಕಾರಕ ಅಂಶವಿದೆ ಎಂದು ಹೇಳುವ ಮೂಲಕ ಸರ್ಕಾರ ರೈತರ ಮಾರಣಹೋಮಕ್ಕೆ ಮುಂದಾಗಿದೆ. ತಂಬಾಕು, ಮದ್ಯ ಹಾನಿಕಾರಕ. ಅದನ್ನೇಕೆ ನಿಷೇಧಿಸುತ್ತಿಲ್ಲ? ಸಿಗರೇಟ್‌ ಕಂಪೆನಿಗಳ ಲಾಬಿಗೆ ಮಣಿದು ಸರ್ಕಾರ ಅಡಿಕೆ ಬೆಳೆ ನಿಷೇಧಕ್ಕೆ ಮುಂದಾಗಿದೆ. ಸರ್ಕಾರ ಹೇಗೆ ನಡೆಯುತ್ತಿದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.

– ಮಾಡಾಳ್‌ ವಿರೂಪಾಕ್ಷಪ್ಪ, ಮಾಜಿ ಶಾಸಕಸರ್ಕಾರ ಇದೆಯೇ?


ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಸರ್ಕಾರ ಇದೆಯೇ ಇಲ್ಲವೇ ಎಂಬ ಅನುಮಾನ ಮೂಡುತ್ತಿದೆ.

– ಡಾ.ವಿಶ್ವನಾಥ ಪಾಟೀಲ್‌, ಶಾಸಕಕುರುಡು ಸರ್ಕಾರ

ರಾಜ್ಯದಲ್ಲಿರುವುದು ಕುರುಡು ಸರ್ಕಾರ. ಏನೇ ಹೋರಾಟ ಮಾಡಿದರೂ ಸ್ಪಂದಿಸುವುದಿಲ್ಲ.

– ಯು.ಬಿ. ಬಣಕಾರ್‌, ಶಾಸಕರಕ್ತ ಹರಿಸಬೇಕಾಗುತ್ತದೆ

ಬಿಜೆಪಿ ಸರ್ಕಾರವಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಅನುಮೋದನೆ ನೀಡಲಾಯಿತು. ಈಗ, ಈ ಕಾಮಗಾರಿ ನಡೆಯುತ್ತಿಲ್ಲ. ಭದ್ರಾ ಮೇಲ್ದಂಡೆಯಲ್ಲಿ ನೀರು ಹರಿಯದಿದ್ದರೆ ರಕ್ತ ಹರಿಸ

ಬೇಕಾಗುತ್ತದೆ.

– ಎಸ್‌.ವಿ.ರಾಮಚಂದ್ರ, ಮಾಜಿ ಶಾಸಕ

ಪರಂಪರೆಗೆ ಕೊಡಲಿ ಪೆಟ್ಟು

ಅಕ್ಕಿ ಗಿರಣಿ ಮುಚ್ಚುವುದರಿಂದ ಭತ್ತ ಬೆಳೆದ ರೈತರ ಸ್ಥಿತಿ ಅಧೋಗತಿಯಾಗಲಿದೆ. ಅಡಿಕೆ ನಿಷೇಧಿಸಿ ನಮ್ಮ ಪರಂಪರೆ, ಧರ್ಮಕ್ಕೆ ಸರ್ಕಾರ ಕೊಡಲಿ ಪೆಟ್ಟು ಹಾಕಲು ಮುಂದಾಗಿದೆ.

– ಬಿ.ಪಿ.ಹರೀಶ್‌, ಮಾಜಿ ಶಾಸಕ

ಉಪವಾಸವಿಲ್ಲ, ಅಹೋರಾತ್ರಿ ಧರಣಿ...

ಉಪವಾಸ ಸತ್ಯಾಗ್ರಹ ನಡೆಸಬೇಕು ಎಂಬುದು ರೇಣುಕಾಚಾರ್ಯ ಹಾಗೂ ಬೆಂಬಲಿಗರ ಉದ್ದೇಶವಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಶಾಸಕ ಹರೀಶ್‌ ಸಲಹೆಯಂತೆ, ಉಪವಾಸ ಕೈಬಿಡಲಾಯಿತು. ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರಿಗೆ ಎಳನೀರು ಕುಡಿಸಿದರು.

ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಮುಖಂಡರು ಸ್ಪಷ್ಟಪಡಿಸಿದರು.

‘ಈ ಸರ್ಕಾರ ಹೋರಾಟಕ್ಕೆ ಸ್ಪಂದಿಸುವುದಿಲ್ಲ. ಉಪವಾಸ ಮಾಡಿದರೆ ಹೆಣಗಳು ಬೀಳುತ್ತವೆಯೇ ಹೊರತು ಪ್ರಯೋಜನವಾಗದು’ ಎಂಬುದು ಯಡಿಯೂರಪ್ಪ ಟೀಕೆಯಾಗಿತ್ತು.

ಹೋರಾಟ ಪಕ್ಷಾತೀತ ಎಂದು ಹೇಳಿಕೊಂಡರೂ, ವೇದಿಕೆಯಲ್ಲಿ ಕೆಜೆಪಿ ಮುಖಂಡರೇ ರಾರಾಜಿಸಿದರು!

ಪ್ರತಿಕ್ರಿಯಿಸಿ (+)