ಬುಧವಾರ, ಏಪ್ರಿಲ್ 21, 2021
29 °C

ವೈದ್ಯಕೀಯ ಕೌನ್ಸಿಲ್‌ಗಳ ವಿಲೀನಕ್ಕೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದೇಶದ ಎಲ್ಲ ವೈದ್ಯಕೀಯ ಕೌನ್ಸಿಲ್‌ಗಳನ್ನು ವಿಲೀನಗೊಳಿಸಿ ಕೇಂದ್ರಿಕೃತ ವ್ಯವಸ್ಥೆಯಡಿ ತರಲು ಲೋಕಸಭೆಯ ಸ್ಥಾಯಿ ಸಮಿತಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಸುದೀಪ್ ಬಂಡೋಪಾಧ್ಯಾಯ ಹೇಳಿದರು.ಶುಕ್ರವಾರ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಣುಜೀವಿಶಾಸ್ತ್ರ ಮತ್ತು ಪುನರುಜ್ಜೀವಕ ಔಷಧಿ ವಿಜ್ಞಾನದ ಅತ್ಯುನ್ನತ ಕೇಂದ್ರವನ್ನು ಉದ್ಘಾಟಿಸಿದ ಮಾತನಾಡಿದರು.`ದೇಶದಲ್ಲಿ ಯುನಾನಿ, ಆಯುರ್ವೇದ, ಔಷಧವಿಜ್ಞಾನ, ಹೋಮಿಯೋಪತಿ ಮತ್ತು ಅಲೋಪತಿ ವೈದ್ಯಕೀಯಗಳಿಗೆ ಪ್ರತ್ಯೇಕ ಕೌನ್ಸಿಲ್‌ಗಳು ಇವೆ. ಇವೆಲ್ಲವನ್ನು ಒಂದೇ ಕೌನ್ಸಿಲ್‌ನಡಿ ತರಬೇಕಾಗಿದೆ. ಈ ಕುರಿತು ಪ್ರಾಥಮಿಕ ಹಂತದ ಚರ್ಚೆಗಳು ನಡೆದಿವೆ~ ಎಂದು ತಿಳಿಸಿದರು. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಭಾರತದ ವೈದ್ಯಕೀಯ ಮತ್ತು ಔಷಧ ವಿಜ್ಞಾನವು ಜಗತ್ತಿನ ಅಗ್ರಸ್ಥಾನ ಪಡೆಯಲು ಸಾಧ್ಯವಿದೆ ಎಂದರು.  `ಮಧುಮೇಹ, ಕ್ಷಯರೋಗ, ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿವೆ. ಮಧುಮೇಹದ ರಾಜಧಾನಿಯೆಂದೇ ಭಾರತವನ್ನು ಕರೆಯಲಾಗುತ್ತಿದೆ. ಇದು ಅವಮಾನಕರ ಸಂಗತಿ. ಭಾರತದಲ್ಲಿ ನಡೆಯುವ ಬಹುತೇಕ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಅಗತ್ಯವಾದ ಅಂಗಾಂಶಗಳ ಕೊರತೆಯೂ ಇದೆ. ಮೂತ್ರಕೋಶ, ಹೃದಯ ದಂತಹ ಅಂಗಾಂಶ ಕಸಿಗಾಗಿ ಅಂಗಾಂಶಗಳ ಲಭ್ಯತೆಗೆ ಕೇಂದ್ರ ಸರ್ಕಾರವೂ ಕಾರ್ಯಕ್ರಮ ರೂಪಿಸಿದೆ~ ಎಂದು ಹೇಳಿದರು.`ಯಾವುದೇ ವೈದ್ಯಕೀಯ ಸಂಸ್ಥೆಗಳು ಸಕಾರಾತ್ಮಕ ಮನೋಭಾವದೊಂದಿಗೆ ಸಂಶೋಧ ನೆಗೆ ಒತ್ತು ನೀಡುತ್ತಿದ್ದರೆ  ಆ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಬೆಂಬಲ ನೀಡಲು ಸಿದ್ಧವಿದೆ. ಜೆಎಸ್‌ಎಸ್ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಮುಂದೆಯೂ ಗುಣಾತ್ಮಕ ಯೋಜನೆಗಳನ್ನು ಸಿದ್ಧಗೊಳಿಸಿ ಉತ್ತಮ ಸಂಶೋಧನೆ ಕಾರ್ಯಕ್ಕೆ ಚಾಲನೆ ನೀಡುತ್ತದೆ ಎಂಬ ವಿಶ್ವಾಸವಿದೆ~ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ವಿಶ್ವ ವಿದ್ಯಾಲಯ ಕುಲಸಚಿವ ಡಾ. ಬಿ. ಮಂಜುನಾಥ್ ಕೇಂದ್ರದ ಕುರಿತು ವಿವರ ನೀಡಿದರು.ಪ್ರಾಚಾರ್ಯ ಡಾ. ಎಚ್. ಬಸವನ ಗೌಡಪ್ಪ ಸ್ವಾಗತಿಸಿದರು. ಡಾ. ವಿಜಯಸಿಂಹ, ಡಾ. ಕುಶಾಲಪ್ಪ ಹಾಜರಿದ್ದರು. ಡಾ. ಸುಮಾ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.