ಗುರುವಾರ , ಮೇ 19, 2022
24 °C

ವೈದ್ಯರಿಗೆ ಹಳ್ಳಿ ಅಪಥ್ಯ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯರಿಗೆ ಹಳ್ಳಿ ಅಪಥ್ಯವಾಗಿದೆ! ಅವರ ಚಿತ್ತವನ್ನು ಗ್ರಾಮಗಳ ಕಡೆ ಸೆಳೆಯುವ ಯಾವ ಪ್ರಯತ್ನವೂ ಇಲ್ಲಿಯವರೆಗೆ ಸಫಲವಾಗಿಲ್ಲ. ಸರ್ಕಾರ, ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಕಡ್ಡಾಯಗೊಳಿಸಿದರೂ ಪ್ರಯೋಜನಕ್ಕೆ ಬಂದಿಲ್ಲ. ದಂಡ ವಿಧಿಸಿದರೂ ಸ್ಥಿತಿ ಸುಧಾರಿಸಿಲ್ಲ. ಹೀಗಾಗಿ ಹಳ್ಳಿಗಾಡಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ನಿತ್ಯ ನಿರಂತರ ಎಂಬ ಸ್ಥಿತಿ ಮುಟ್ಟಿದೆ.ವೈದ್ಯರ ಕೊರತೆ ಇರುವ ಪ್ರದೇಶಗಳಲ್ಲಿ ಎಂಬಿಬಿಎಸ್ ಪದವೀಧರರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ತಿಂಗಳಿಗೆ ರೂ.  60 ಸಾವಿರದಿಂದ 80 ಸಾವಿರದವರೆಗೆ ಗೌರವಧನ ನಿಗದಿ ಮಾಡಲಾಗಿದೆ. ಆದರೂ ವೈದ್ಯರು ದೊರೆಯುತ್ತಿಲ್ಲ.ವಿಶ್ವದಲ್ಲೇ ಅಧಿಕ ಸಂಖ್ಯೆಯ ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ದೇಶದಲ್ಲಿ ಇಂತಹ ಸ್ಥಿತಿ ಒದಗಿರುವುದು ವಿಪರ್ಯಾಸದ ಸಂಗತಿಯೇ ಸರಿ! ಗ್ರಾಮೀಣ ಸೇವೆ ಪೂರೈಸದ ಎಲ್ಲ ಪದವೀಧರ, ಸ್ನಾತಕೋತ್ತರ ಪದವೀಧರ ವೈದ್ಯರಿಗೆ ವಿಧಿಸುವ ದಂಡದ ಮೊತ್ತವನ್ನು ಕ್ರಮವಾಗಿ ರೂ. 10 ಲಕ್ಷ ಮತ್ತು ರೂ. 25 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವರು ಪ್ರಕಟಿಸಿದ್ದಾರೆ.ಈ ತೀರ್ಮಾನ ಹೊಸದೇನಲ್ಲ. ಹಿಂದಿದ್ದ ಬಿಜೆಪಿ ಸರ್ಕಾರವೇ ಈ ನಿರ್ಧಾರ ಕೈಗೊಂಡಿತ್ತು. ದಂಡ ಹೆಚ್ಚಿಸುವ ನಿರ್ಧಾರದ ಹಿಂದಿನ ಉದ್ದೇಶ ಒಳ್ಳೆಯದಾದರೂ ಅದು ಅಡ್ಡಪರಿಣಾಮಗಳಿಗೆ ದಾರಿ ಮಾಡುವ ಅಪಾಯವಿದೆ. ದಂಡದ ಮೊತ್ತ ಹೊಂದಿಸಲು ವೈದ್ಯರು ವಾಮಮಾರ್ಗ ಹಿಡಿದರೆ ಅದರ ಪರಿಣಾಮ ನೇರವಾಗಿ ರೋಗಿಗಳಿಗೇ ತಟ್ಟಲಿದೆ. ಜನರನ್ನು ಸುಲಿಗೆ ಮಾಡಲು ಇದು ಕಾರಣ ಆಗಬಾರದು. ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ಹೆಸರು ನೋಂದಣಿಗೆ ಗ್ರಾಮೀಣ ಸೇವಾ ಸರ್ಟಿಫಿಕೇಟ್ ಸಲ್ಲಿಕೆಯನ್ನು ಕಡ್ಡಾಯ ಮಾಡುವುದರಿಂದ ತುಸು ಬಿಸಿ ಮುಟ್ಟಿಸಲು ಸಾಧ್ಯ. ಈ ಕುರಿತು ಚಿಂತಿಸಬೇಕು. 

 

ಆರೋಗ್ಯ ಸೇವಾ ಲಭ್ಯತೆಯಲ್ಲಿನ ತಾರತಮ್ಯ ನಿವಾರಿಸಿ ಎಲ್ಲರಿಗೂ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರಂಭವಾದವು. ಅವು ಪ್ರಾಥಮಿಕ ಹಂತದ ಚಿಕಿತ್ಸೆ ಜತೆಗೆ ಲಸಿಕಾ ಕಾರ್ಯ, ಕುಟುಂಬ ಯೋಜನೆ, ಗರ್ಭಿಣಿ ಆರೈಕೆ ಹಾಗೂ ಇತರೆ ತುರ್ತು ಸೇವೆಗಳನ್ನು ಒದಗಿಸುತ್ತಿವೆ. ವೈದ್ಯರ ಕೊರತೆಯಿಂದ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳು ಸೊರಗಿವೆ.ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೆ ಮೃತಪಟ್ಟವರ ಸಂಖ್ಯೆಯೂ ಹೆಚ್ಚಿದೆ. ವೈದ್ಯಕೀಯ ಶಿಕ್ಷಣ ಪಡೆಯುವವರಲ್ಲಿ ಸೇವಾ ಮನೋಭಾವದ ಅಭಾವ ಇಂತಹ ವೈಪರೀತ್ಯಕ್ಕೆ ಕಾರಣ. ವೈದ್ಯರನ್ನು ದೇವರ ಸಮಾನ ಎಂದು ಭಾವಿಸುವ ಜನರೇ ಹೆಚ್ಚು. ಆದರೆ, ವೈದ್ಯಕೀಯ ಶಿಕ್ಷಣವನ್ನು `ಹೂಡಿಕೆ' ಎಂದು ಭಾವಿಸಿದವರಿಂದ ಸೇವಾ ಕಾಳಜಿ ನಿರೀಕ್ಷಿಸಲಾದೀತೆ? ವೈದ್ಯರು ಹಳ್ಳಿಗಳಿಗೆ ಹೋಗದಿರಲು ನಗರದ ಆಕರ್ಷಣೆ ಒಂದೇ ಕಾರಣವಾಗಿರಲಾರದು.ಮೂಲ ಸೌಕರ್ಯಗಳ ಕೊರತೆ ಗೊತ್ತೇ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವ ಕಡೆ ಅಗತ್ಯ ಸಂಪರ್ಕ, ಶಿಕ್ಷಣ ಮತ್ತಿತರ ಸೌಲಭ್ಯ ಕಲ್ಪಿಸಿ ಸಿಬ್ಬಂದಿ ಅಲ್ಲೇ ವಸತಿ ಮಾಡುವಂತಹ ಅನುಕೂಲ ಕಲ್ಪಿಸಬೇಕು. ವೈದ್ಯಕೀಯ ಕೆಲಸಕ್ಕಿಂತ ವರದಿ ತಯಾರಿಕೆ ಇತ್ಯಾದಿ ಆಡಳಿತಾತ್ಮಕ ಕೆಲಸಗಳಿಗೇ ಹೆಚ್ಚಿನ ಸಮಯ ವ್ಯಯವಾಗುತ್ತಿದೆ ಎಂಬ ಮಾತಿದೆ. ಇಂತಹ ಒತ್ತಡಗಳನ್ನು ನಿವಾರಿಸಿ ಗ್ರಾಮೀಣ ಸೇವೆಯನ್ನು ಹಿತಕರಗೊಳಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.