ಶುಕ್ರವಾರ, ಆಗಸ್ಟ್ 7, 2020
27 °C
ಸರ್ಕಾರಿ ಆಸ್ಪತ್ರೆಗೆ ಬೇಕಿದೆ `ಚಿಕಿತ್ಸೆ'

ವೈದ್ಯರು, ಸಿಬ್ಬಂದಿ ಕೊರತೆ: ರೋಗಿಗಳ ಪರದಾಟ

ಪ್ರಜಾವಾಣಿ ವಿಶೇಷ ವರದಿ/ ಎಸ್. ರವಿ Updated:

ಅಕ್ಷರ ಗಾತ್ರ : | |

ವೈದ್ಯರು, ಸಿಬ್ಬಂದಿ ಕೊರತೆ: ರೋಗಿಗಳ ಪರದಾಟ

ಕುಶಾಲನಗರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಅಗತ್ಯ ಸಿಬ್ಬಂದಿ ಇಲ್ಲ, ಡಿ ದರ್ಜೆ ನೌಕರರೂ ಇಲ್ಲ, ಕುಡಿಯುವ ನೀರು- ಸ್ವಚ್ಛತೆ- ಔಷಧಿ ಯಾವುದೂ ತೃಪ್ತಿಕರವಾಗಿಲ್ಲ. ಹಾಗಾಗಿ ಇದನ್ನು `ಇಲ್ಲ'ಗಳ ಆಸ್ಪತ್ರೆ ಎನ್ನಬಹುದು.ಹೌದು. ಕುಶಾಲನಗರ ಸಮುದಯ ಆರೋಗ್ಯ ಕೇಂದ್ರಕ್ಕೆ ಕಾಲಿಟ್ಟರೆ ಇಲ್ಲಿನ ಅವ್ಯವಸ್ಥೆ ನಿಮ್ಮ ಕಣ್ಣಿಗೆ ರಾಚುತ್ತದೆ. ಇದು ಹೋಬಳಿ ಕೇಂದ್ರವಾದರೂ ಇರುವುದು ಕೇವಲ ಮೂವರು ತಜ್ಞ ವೈದ್ಯರು. ಇವರಲ್ಲಿ ಒಬ್ಬರು ಅನಾರೋಗ್ಯದ ಕಾರಣದಿಂದ ರಜೆ ಹಾಕಿ ಎರಡು ತಿಂಗಳಾಗಿದೆ. ಪ್ರತಿದಿನ ಇಲ್ಲಿಗೆ 250 ರಿಂದ 300 ಹೊರ ರೋಗಿಗಳು ಚಿಕಿತ್ಸೆ ಬಯಸಿ ಬರುತ್ತಾರೆ. ಪ್ರತಿದಿನ 20 ರಿಂದ 25 ಒಳರೋಗಿಗಳು ಇರುತ್ತಾರೆ. ಇಷ್ಟೆಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲು ಇರುವುದು ಇಬ್ಬರೇ ವೈದ್ಯರು!ಇರುವ ಇಬ್ಬರು ವೈದ್ಯರಲ್ಲಿ ಒಬ್ಬರು ಬೆಳಿಗ್ಗೆ 9ಕ್ಕೆ ಕರ್ತವ್ಯಕ್ಕೆ ಹಾಜರಾದರೆ ರಾತ್ರಿ ಪಾಳೆಯಲ್ಲೂ ಅವರೇ ಇರಬೇಕಾದ ಸ್ಥಿತಿ. ಹೀಗಿರುವಾಗ ಇವರಿಂದ ಎಷ್ಟರ ಮಟ್ಟಿಗೆ ಉತ್ತಮ ಚಿಕಿತ್ಸೆ ನಿರೀಕ್ಷಿಸಬಹುದು ಎಂಬುದು ರೋಗಿಗಳ ಪ್ರಶ್ನೆ.ಆಸ್ಪತ್ರೆಯಲ್ಲಿ ಕನಿಷ್ಠ ಮೂಲ ಸೌಲ್ಯಗಳಿಲ್ಲ. ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ. ರೋಗಿಗಳು ಹಾಗೂ ಸಿಬ್ಬಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಒಳರೋಗಿಗಳು ಕೂಡ ಹೋಟೆಲ್‌ಗಳಿಂದಲೇ ನೀರು ಪಡೆದು ಕುಡಿಯಬೇಕಾಗಿದೆ. ಕುಡಿಯುವ ನೀರಿಗಾಗಿ ಇದ್ದ ಒಂದು ಫೊಲ್ಟರ್ ಕೆಟ್ಟುಹೋಗಿ ಯಾವ ಕಾಲವಾಯಿತೋ?ಶೌಚಾಲಯಗಳಿವೆ. ಆದರೆ, ನಿರ್ವಹಣೆ ಮಾಡುವ ಸಿಬ್ಬಂದಿ ಇಲ್ಲ. ಕುಡಿಯುವುದಕ್ಕೇ ನೀರಿಲ್ಲ; ಶೌಚಾಲಯಕ್ಕೆ ಎಲ್ಲಿಂದ ತರುವುದು ಎಂಬುದು ರೋಗಿಗಳನ್ನು ಕಾಡುತ್ತಿರುವ ಪ್ರಶ್ನೆ. ಹೀಗಾಗಿ ಇಲ್ಲಿನ ಸಿಬ್ಬಂದಿ ಹಾಗೂ ರೋಗಿಗಳು ಬಯಲು ಶೌಚಾಲಯವನ್ನೇ ಆಶ್ರಯಿಸುವ ಗತಿ ಬಂದಿದೆ.ಆಸ್ಪತ್ರೆಯ ಹಿಂದೆ ಮುಂದೆ ಗಿಡಗಂಟಿಗಳು ಬೆಳೆದು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಪಟ್ಟಿದೆ. ಇನ್ನು ಒಳರೋಗಿಗಳು ಮಲಗುವ ಕೋಣೆಗಳ ಹಲವಾರು ಕಿಟಕಿ ಗಾಜುಗಳು ಒಡೆದಿವೆ. ಸೊಳ್ಳೆ, ತಿಗಣೆ, ಕ್ರಿಮಿ-ಕೀಟಗಳ ಕಾಟ ವಿಪರೀತವಾಗಿದೆ.ಈ ಎಲ್ಲ ಸಮಸ್ಯೆಗಳಿಂದಾಗಿ ಈ ಸಮುದಾಯ ಆರೋಗ್ಯ ಕೇಂದ್ರವೇ ರೋಗಗ್ರಸ್ಥವಾಗಿದೆ. ಈ ಭಾಗದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇತ್ತ ಯಾವಾಗ ಗಮನಹರಿಸುತ್ತಾರೋ? ನಮ್ಮ ಸಮಸ್ಯೆಗಳು ಯಾವಾಗ ನೀಗುತ್ತವೆಯೋ ಎಂದು ರೋಗಿಗಳು ಕಾಯುತ್ತಲೇ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.