ಸೋಮವಾರ, ಏಪ್ರಿಲ್ 19, 2021
29 °C

ವೈದ್ಯ ಕಾಲೇಜು ಮೇಲ್ದರ್ಜೆಗೆ: ಕೇಂದ್ರದ ನೆರವು ರೂ 200 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ರಾಜ್ಯದ ಯೋಜನೆಗೆ ಪ್ರಸಕ್ತ ವರ್ಷ ರೂ. 200 ಕೋಟಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಎ. ರಾಮದಾಸ್, ಕೇಂದ್ರ ಆರೋಗ್ಯ ಸಚಿವ ಗುಲಾಂನಬಿ ಆಜಾದ್ ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದ ಸಮಯದಲ್ಲಿ ಈ ಮೊತ್ತ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದಾರೆ.

ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ 1274 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ.ಇದರಲ್ಲಿ ಶೇ 75ರಷ್ಟು ಹಣ ಕೇಂದ್ರದ್ದು. ಉಳಿದ ಹಣವನ್ನು ರಾಜ್ಯ ಕೊಡಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಹೆಚ್ಚುವರಿಯಾಗಿ 700 ಸೀಟುಗಳು ಸಿಗಲಿವೆ. ಕಾಲೇಜುಗಳಿಗೆ ಅಗತ್ಯವಾದ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಈ ಹಣ ಬಳಸಲಾಗುವುದು ಎಂದು ರಾಮದಾಸ್ ವಿವರಿಸಿದರು.ಮುಂದಿನ ವರ್ಷದಿಂದ ಹೆಚ್ಚುವರಿ ಸೀಟುಗಳು ದೊರೆಯಲಿದೆ. ಈಗಾಗಲೇ ಹಣಕಾಸು ಇಲಾಖೆಗೆ ಅಗತ್ಯ ಪ್ರಸ್ತಾವನೆ ಕಳುಹಿಸಲಾಗಿದೆ. ಕೇಂದ್ರ ಬಿಡುಗಡೆ ಮಾಡುವ ಹಣದ ಪ್ರಮಾಣಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಹೊಂದಾಣಿಕೆ ಅನುದಾನ (ಮ್ಯಾಚಿಂಗ್ ಗ್ರ್ಯಾಂಟ್) ಕೊಡಲಿದೆ ಎಂದು ರಾಮದಾಸ್ ಸ್ಪಷ್ಟಪಡಿಸಿದರು.ಅಲ್ಲದೆ, ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ `ಸಮನ್ವಯ ವೈದ್ಯಕೀಯ ಚಿಕಿತ್ಸೆ~ ವಿಭಾಗ ತೆರೆಯಲಾಗುತ್ತಿದೆ. ಪ್ರತಿ ಯೂನಿಟ್‌ಗೆ ರೂ 1.22 ಕೋಟಿ ವೆಚ್ಚವಾಗಲಿದೆ. ಒಟ್ಟು 12 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಮತ್ತು ರಾಜ್ಯ 50:50 ಆಧಾರದಲ್ಲಿ ಹಣ ಭರಿಸಲಿದೆ.ಪ್ರಕೃತಿ ಚಿಕಿತ್ಸೆ, ಯೋಗ, ಆಯುರ್ವೇದ ಹಾಗೂ ಹೊಮಿಯೋಪಥಿ ಎಲ್ಲ ಪದ್ಧತಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಎಂಟು ವೈದ್ಯರು ಒಳಗೊಂಡಂತೆ 31    ಸಿಬ್ಬಂದಿ ಪ್ರತಿ ಯೂನಿಟ್‌ನಲ್ಲಿರುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.ಮೊದಲ ಹಂತದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಯೋಜನೆ ಜಾರಿ ಮಾಡಲಾಗುತ್ತಿದೆ. ಮೈಸೂರಿನಲ್ಲಿ `ಪ್ರಕೃತಿ ಚಿಕಿತ್ಸಾ ಕೇಂದ್ರ~ ಆರಂಭಿಸಲಾಗುತ್ತಿದೆ.

 

ರಾಜ್ಯ ಸರ್ಕಾರ ತನ್ನ ಪಾಲಿನ ಐದು ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಕೇಂದ್ರ ಮೂರು ಕೋಟಿ ನೀಡಿದೆ. ಇದು ರೂ 15 ಕೋಟಿ ಮೊತ್ತದ ಯೋಜನೆ. ಉಳಿದ ರೂ 6.6ಕೋಟಿಯನ್ನು ತ್ವರಿತವಾಗಿ ಬಿಡುಗಡೆ ಮಾಡುವ ಭರವಸೆಯನ್ನು ಕೇಂದ್ರ ನೀಡಿದೆ. ನೂರು ಹಾಸಿಗೆಗಳ  ಆಸ್ಪತ್ರೆ ಇದೇ ವರ್ಷ ಕಾರ್ಯಾರಂಭ ಮಾಡಲಿದೆ ಎಂದು ರಾಮದಾಸ್ ಹೇಳಿದರು.`ಕೇಂದ್ರ ಆಯುರ್ವೇದ ವೈದ್ಯಕೀಯ ಮಂಡಳಿ~ (ಸಿಸಿಎಂಎ) ಮಾನ್ಯತೆ ಪಡೆದ ಕಾಲೇಜುಗಳ ಪಟ್ಟಿಯನ್ನು ಆಗಸ್ಟ್ 15ರ ಒಳಗಾಗಿ ಪ್ರಕಟಿಸುವ ಭರವಸೆ ನೀಡಿದೆ. ಸದ್ಯ 31 ಆಯುರ್ವೇದ, 4  ಹೋಮಿಯೋಪತಿ, 4 ಯುನಾನಿ ಹಾಗೂ 4 ಪ್ರಕೃತಿ ಚಿಕಿತ್ಸೆ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ದೊರೆತಿದೆ. ಒಟ್ಟು ಸೀಟುಗಳ ಸಂಖ್ಯೆ 2780. ಇದರಲ್ಲಿ ಸರ್ಕಾರದ ಕೋಟಾ 860 ಎಂದು ಸಚಿವರು ವಿವರಿಸಿದರು.ಬೆಂಗಳೂರು ಹಾಗೂ ಬಳ್ಳಾರಿ ಸರ್ಕಾರದ ಕಾಲೇಜುಗಳೂ ಸೇರಿದಂತೆ 27 ಕಾಲೇಜುಗಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಬೆಂಗಳೂರು ಕಾಲೇಜಿನ ಬಗ್ಗೆ ಆಯುರ್ವೇದ ವೈದ್ಯಕೀಯ ಮಂಡಳಿ ಕೇಳಿದ್ದ ದಾಖಲೆಗಳು ಹಾಗೂ ಮಾಹಿತಿ ಕೊಡಲಾಗಿದೆ.ಬಳ್ಳಾರಿ ಕಾಲೇಜಿಗೆ ಸಂಬಂಧಪಟ್ಟ ಕಾಲೇಜುಗಳ ದಾಖಲೆಗಳನ್ನು ಶುಕ್ರವಾರ ಸಂಜೆಯೊಳಗೆ ಪೂರೈಸಲಾಗುತ್ತದೆ. ಉಳಿದ 25 ಕಾಲೇಜುಗಳು ಅಗತ್ಯ ಮಾಹಿತಿ ನೀಡಿ ಮಾನ್ಯತೆ ಪಡೆಯದಿದ್ದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ ಎಂದು ವಿವರಿಸಿದರು.ಖಾಸಗಿ ಅನುದಾನರಹಿತ ಕಾಲೇಜುಗಳು ನ್ಯಾಯಾಲಯದಲ್ಲಿ ದಾವೆ ಹೂಡಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿವೆ. ಈ ಕಾಲೇಜುಗಳು ಅಗತ್ಯ ಮಾನದಂಡಗಳಡಿ ಮಾನ್ಯತೆ ಪಡೆಯದಿದ್ದರೆ ವಿದ್ಯಾರ್ಥಿಗಳಿಗೆ ಪದವಿ ಕೊಡುವುದಿಲ್ಲ ಎಂದು `ಸಿಸಿಎಎಂ~ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 15ರೊಳಗೆ ಮಾನ್ಯತೆ ಪಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ಈ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಸಲಹೆ ಮಾಡಿದರು.ಆಯುರ್ವೇದ ಸೀಟು ಹಂಚಿಕೆ

ಆಯುರ್ವೇದ, ಯುನಾನಿ ಹಾಗೂ ಹೊಮಿಯೋಪಥಿ ಕಾಲೇಜುಗಳ `ಸೀಟು ಹಂಚಿಕೆ ಪ್ರಕ್ರಿಯೆ~ ಇದೇ 16ರಿಂದ ಆರಂಭವಾಗಲಿದೆ. ಸೀಟು ಹಂಚಿಕೆ ಪ್ರಕ್ರಿಯೆ ಎರಡು ವಾರ ನಡೆಯಲಿದೆ. ಸೆಪ್ಟೆಂಬರ್ 1ರಿಂದ ತರಗತಿಗಳು ಆರಂಭವಾಗಲಿವೆ ಎಂದು ರಾಮದಾಸ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.