ಶುಕ್ರವಾರ, ಮೇ 20, 2022
27 °C

ವೈಭವದ ಮುಳ್ಳುಗದ್ದುಗೆ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಾಪಟ್ಟಣ: ಪುರಾಣ ಪ್ರಸಿದ್ಧವಾದ ಇಲ್ಲಿನ ಹಾಲಸ್ವಾಮಿಗಳ ಮುಳ್ಳುಗದ್ದುಗೆ ಉತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಜನ ಉತ್ಸವದಲ್ಲಿ ಪಾಲ್ಗೊಂಡು ಸ್ವಾಮಿಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.ನಾಲ್ಕು ಅಡಿ ಅಗಲ. ನಾಲ್ಕು ಅಡಿ ಎತ್ತರದ ಅಳತೆಯಲ್ಲಿ ಹಸಿ ಜಾಲಿ ಮುಳ್ಳುಗಳಿಂದ ನಿರ್ಮಿತವಾದ ಮುಳ್ಳು ಗದ್ದುಗೆಯ  ಮಂಟಪದಲ್ಲಿ ವಿರಾಜಮಾನರಾಗಿದ್ದ ಪೀಠಾಧೀಶ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಭವ್ಯ ಮೆರವಣಿಗೆಗೆ ದಾವಣಗೆರೆ, ಹಾವೇರಿ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಿಂದ ಬಂದಿದ್ದ ಸಹಸ್ರಾರು ಜನ ಸಾಕ್ಷೀಭೂತರಾದರು.ಸ್ವಾಮೀಜಿ ಅವರು ಮಧ್ಯ ರಾತ್ರಿ 12ರಿಂದ ಮುಂಜಾನೆಯವರೆಗೆ ಇಷ್ಟಲಿಂಗ ಶಿವಪೂಜೆಯನ್ನು ನಡೆಸಿ, ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಓಂ ನಮಃಶಿವಾಯ ಎಂಬ ಜಯಘೋಷದ ಮಧ್ಯೆ ಮುಳ್ಳುಗದ್ದುಗೆಯನ್ನು ಆರೋಹಣ ಮಾಡಿದರು.ನಂತರ ಹೊರಟ ಭಾರೀ ಮೆರವಣಿಗೆಗೆ ವಿವಿಧ ಕಡೆಗಳಿಂದ ಬಂದಿದ್ದ ಕೋಲುಮೇಳ, ಹಲಗೆ ಮೇಳ, ವೀರಗಾಸೆ ಮೇಳ, ಡೊಳ್ಳುಕುಣಿತ, ಭಜನಾಮೇಳಗಳೊಂದಿಗೆ ಸಹಸ್ರಾರು ಭಕ್ತರು ಭಾಗವಹಿಸಿ ಮೆರಗು ನೀಡಿದರು.ಮೆರವಣಿಗೆಯ ಇಕ್ಕೆಲಗಳಲ್ಲಿ ಅಬಾಲವೃದ್ಧರಾದಿಯಾಗಿ ಎಲ್ಲಾ ವಯೋಮಾನದವರೂ ಸ್ವಾಮೀಜಿಯವರ ಮುಳ್ಳು ಗದ್ದುಗೆಯ ಪವಾಡವನ್ನು ವೀಕ್ಷಿಸಿ ಪುನೀತರಾದರು. ಮುಂಜಾನೆ 5ರಿಂದ 11ರವರೆಗೆ ಸ್ವಾಮಿಗಳು ಬಾಳೇ ಎಲೆಯಿಂದ ಮಾಡಿದ ಕೌಪೀನ ಮಾತ್ರ ಧರಿಸಿ ಜಾಲಿಮುಳ್ಳಿನ ಗದ್ದುಗೆಯ ಮೇಲೆ ಕುಳಿತು ಕುಣಿಯುವ ದೃಶ್ಯ ನೋಡುಗರ ಮೈನವಿರೇಳಿಸಿತು.ಮೆರವಣಿಗೆಯ ನಂತರ ಮಠವನ್ನು ಪ್ರವೇಶಿಸಿದ ಸ್ವಾಮೀಜಿ, ದೇಶಕಾಲದ ಬಗ್ಗೆ ಕಾರ್ಣೀಕ ನುಡಿದರು. ನಂತರ ಆಗಮಿಸಿದ್ದ ಭಕ್ತರಿಗೆ ದರ್ಶನ ನೀಡಿ ಅವರಿಂದ ಪೂಜೆ ಸ್ವೀಕರಿಸಿದರು.ಸಂಜೆ ಗ್ರಾಮದಲ್ಲಿ ನಡೆದ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ಗವಿಮಠಕ್ಕೆ ತೆರಳಿ ಶಮೀಪೂಜೆಯನ್ನು ನೆರವೇರಿಸಿ ನೆರೆದಿದ್ದ ಭಕ್ತರನ್ನು ಆಶೀರ್ವದಿಸಿದರು. ಉತ್ಸವಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೂ ಎರಡು ದಿನಗಳ ಕಾಲ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.