ಸೋಮವಾರ, ಮೇ 10, 2021
28 °C

ವ್ಯಸನಮುಕ್ತ ಸಮಾಜ ನಿರ್ಮಾಣ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಪುಣೆಯ ಮುಕ್ತಾಂಗಣ ಮಿತ್ರ ವ್ಯಸನಮುಕ್ತಿ ಹಾಗೂ ಪುನರ್ ವಸತಿ ಕೇಂದ್ರದ ಸಲಹೆಗಾರ ಭಾಸ್ಕರ್ ಮೋರೆ ತಿಳಿಸಿದರು.ಶರಣ ಸಂಸ್ಕತಿ ಪ್ರಸಾರ ವೇದಿಕೆಯ ಸಹಯೋಗದೊಂದಿಗೆ ನಗರದ ಶಾಹೀನ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವ್ಯಸನಮುಕ್ತಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವಕರು ವ್ಯಸನಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಆಗಿದೆ ಎಂದು ಹೇಳಿದರು.ಮದ್ಯಪಾನ, ಸಿಗರೇಟ್, ತಂಬಾಕು, ಗುಟ್ಕಾ ಸೇವನೆ ಮತ್ತಿತರ ಚಟಗಳಿಗೆ ದಾಸರಾದವರ ನೆನಪಿನ ಶಕ್ತಿ ಕಡಿಮೆ ಆಗುತ್ತದೆ. ಕೌಟುಂಬಿಕ ನೆಮ್ಮದಿ ಹಾಳಾಗುತ್ತದೆ. ಆರ್ಥಿಕವಾಗಿ ನಷ್ಟವುಂಟಾಗುತ್ತದೆ. ಆತ್ಮವಿಶ್ವಾಸ ಕಡಿಮೆ ಆಗಿ ಸಾಮಾಜಿಕ ಸ್ಥಾನಮಾನವನ್ನೂ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದರು.ವ್ಯಸನ ಬಿಡಿಸಲು ಯಾವುದೇ ಔಷಧಿ ಇಲ್ಲ. ಸ್ವಂತ ನಿರ್ಧಾರ ಮತ್ತು ಕುಟುಂಬ ವರ್ಗದವರ ಪ್ರೀತಿ- ವಿಶ್ವಾಸದಿಂದ ಮಾತ್ರ ಚಟವನ್ನು ಬಿಡಬಹುದು. ವ್ಯಸನಕ್ಕೆ ಬಲಿಯಾದವರನ್ನು ಅದರಿಂದ ಹೊರತರುವ ಜೊತೆಗೆ ಯುವ ಪೀಳಿಗೆ ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಮಾತನಾಡಿ, ಮಾದಕ ವಸ್ತುಗಳ ಕುರಿತು ಜನಜಾಗೃತಿ ಮೂಡಿಸುವುದು ಜರೂರಿಯಾಗಿದೆ ಎಂದು ತಿಳಿಸಿದರು.ಯುವಶಕ್ತಿಯೇ ಈ ದೇಶದ ಭವಿಷ್ಯವಾಗಿದೆ. ಆದ್ದರಿಂದ ಅವರನ್ನು ದುಶ್ಚಟಗಳಿಂದ ದೂರವಿರಿಸುವುದಕ್ಕಾಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಚಟಗಳಿಗೆ ಬಲಿಯಾಗುವುದರಿಂದ ಹಣ ವ್ಯಯವಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಸಮಾಜದಲ್ಲಿಯು ಬೆಲೆ ಇಲ್ಲದಂತಾಗುತ್ತದೆ. ಆದ್ದರಿಂದ ಉನ್ನತ ಹಾಗೂ ಆದರ್ಶ ವ್ಯಕ್ತಿಗಳಾಗುವುದಕ್ಕಾಗಿ ಚಟಗಳಿಂದ ದೂರರಬೇಕು ಎಂದು ತಿಳಿಸಿದರು.ಮುಕ್ತಾಂಗಣ ಮಿತ್ರ ವ್ಯಸನಮುಕ್ತಿ ಹಾಗೂ ಪುನರ್ ವಸತಿ ಕೇಂದ್ರದ ಬೀದರ್ ಮುಖ್ಯಸ್ಥ ವಿದ್ಯಾಸಾಗರ ಪಾಟೀಲ್, ಶರಣ ಸಂಸ್ಕತಿ ಪ್ರಸಾದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕಲ್ಯಾಣರಾಯ ಚಳಕಾಪುರೆ, ಸಂಚಾಲಕ ಬಸವರಾಜ ಕಾಜಿ ಮೊದಲಾದವರು ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.