ಗುರುವಾರ , ಜೂಲೈ 2, 2020
22 °C

ವ್ಯಾಪಾರಿಗಳ ಮೌನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಾಪಾರಿಗಳ ಮೌನ ಪ್ರತಿಭಟನೆ

ಬೀದರ್: ನಗರಸಭೆ ಸಿಬ್ಬಂದಿ ಮಾವಿನ ಹಣ್ಣುಗಳನ್ನು ರಸ್ತೆಗೆ ಎಸೆದಿದ್ದರಿಂದ ವ್ಯಾಪಾರಿಗಳು ಮೌನ ಪ್ರತಿಭಟನೆ ನಡೆಸಿದ ಪ್ರಸಂಗ ನಗರದಲ್ಲಿ ಗುರುವಾರ ನಡೆಯಿತು.ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲಿರುವ ಫುಟಟ್‌ಪಾತ್ ಮೇಲೆ ಕುಳಿತು ವ್ಯಾಪಾರಿಗಳು ಮಾವಿನಹಣ್ಣು ಮಾರಾಟ ಮಾಡುತ್ತಿದ್ದರು.ಈ ವೇಳೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಸಿಬ್ಬಂದಿ ಬುಟ್ಟಿಗಳಲ್ಲಿರುವ ಮಾವಿನ ಹಣ್ಣುಗಳನ್ನು ರಸ್ತೆಗೆ ಎಸೆದರು. ಮತ್ತು ಹತ್ತಾರು ಬುಟ್ಟಿಗಳಷ್ಟು ಮಾವಿನ ಹಣಗಳನ್ನು ವಶಕ್ಕೆ ತೆಗೆದುಕೊಂಡು ಕೊಂಡೊಯ್ದರು. ಇದರಿಂದ ಕುಪಿತರಾದ ವ್ಯಾಪಾರಿಗಳು ಮೌನ ಪ್ರತಿಭಟನೆ ನಡೆಸಿದರು.ಫುಟ್‌ಪಾತ್ ಮೇಲೆ ಮಾವಿನ ಹಣ್ಣು ಮಾರಾಟ ಮಾಡದಂತೆ ನಗರಸಭೆ ಸಿಬ್ಬಂದಿ ತಮಗೆ ಮೂರು ದಿನಗಳ ಹಿಂದೆ ಎಚ್ಚರಿಕೆ ನೀಡಿದ್ದರು. 10 ದಿನಗಳ ನಂತರ ಸಹಿಸುವುದಿಲ್ಲ ಎಂದು ಗಡುವು ನೀಡಿದ್ದರು. ಆದರೆ, ಮೂರನೇ ದಿನವಾದ ಗುರುವಾರವೇ ಏಕಾಏಕಿ ಬಂದು ಮಾವಿನ ಹಣ್ಣನ್ನು ರಸ್ತೆಗೆ ಎಸೆದಿದ್ದಾರೆ.

 

ಹತ್ತಾರು ಬುಟ್ಟಿಗಳಷ್ಟು ಮಾವನ್ನು ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದರು.ಕಳೆದ ನಾಲ್ಕು ವರ್ಷಗಳಿಂದ ಶಿವಾಜಿ ವೃತ್ತದಲ್ಲಿ ಮಾವಿನ ಹಣ್ಣಿನ ಹರಾಜು ಮತ್ತು ಮಾರಾಟ ಮಾಡಿಕೊಂಡು ಬಂದಿದ್ದೇವೆ.

 

ಈವರೆಗೆ ಯಾರದ್ದೂ ತಕರಾರು ಇರಲಿಲ್ಲ. ಆದರೆ, 10 ದಿನಗಳ ಕಾಲಾವಕಾಶ ನೀಡಿ ಮೂರೇ ದಿನಗಳಲ್ಲಿ ಮಾವಿನ ಹಣ್ಣುಗಳನ್ನು ರಸ್ತೆ ಬೀಸಾಡಿ ಹಾನಿ ಉಂಟು ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ದಿಕ್ಕು ತೋಚದಂತಾದ ವ್ಯಾಪಾರಿಗಳು ರಸ್ತೆಯಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಗೌಸ್ ವ್ಯಾಪಾರಿಗಳ ಗೋಳು ಆಲಿಸಿದರು.ವ್ಯಾಪಾರ ನಡೆಸುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಅನಂತರ ವ್ಯಾಪಾರಿಗಳು ನಗರಸಭೆಗೆ ತೆರಳಿ ಆಯುಕ್ತರನ್ನು ಭೇಟಿ ಮಾಡಿದರು. ತಮ್ಮ ಅಳಲು ತೋಡಿಕೊಂಡರು.

ಶೀಘ್ರದಲ್ಲಿಯೇ ವ್ಯಾಪಾರಿಗಳಿಗೆ ಮಾವಿನ ಹಣ್ಣು ಮಾರಾಟ ಮಾಡುವುದಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದರು. ಅನಂತರ ವ್ಯಾಪಾರಿಗಳು ವಾಪಸ್ಸಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.