ಗುರುವಾರ , ಏಪ್ರಿಲ್ 15, 2021
23 °C

ಶಂಭೋನಹಳ್ಳಿಗೆ ಯುಗಾದಿ ಹಬ್ಬ ನಿಷಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ಆದರೆ ಈ ತಾಲ್ಲೂಕಿನ ಶಂಭೋನಹಳ್ಳಿಯಲ್ಲಿ ಹೊಸವರ್ಷದ ಹರ್ಷ ಇಲ್ಲ, ಬದಲಿಗೆ ಸೂತಕದ ವಾತಾವರಣ. ಇದು ಈ ಯುಗಾದಿಯ ಮಾತಲ್ಲ, ನೂರಾರು ವರ್ಷಗಳಿಂದ ಈ ಗ್ರಾಮದಲ್ಲಿ ಯುಗಾದಿ ಹಬ್ಬವನ್ನು ಆಚರಿಸಿಲ್ಲ, ಇದಕ್ಕೆ ಬಲವಾದ ಕಾರಣವೂ ಇದೆ.ಮಧುಗಿರಿಯಿಂದ ಕೊಡಿಗೇನಹಳ್ಳಿ ಮಾರ್ಗದಲ್ಲಿ 6 ಕಿ.ಮೀ. ಅಂತರದಲ್ಲಿ ಕೇವಲ 40 ಮನೆ ಹೊಂದಿರುವ ಶಂಭೋನಹಳ್ಳಿ ಗ್ರಾಮದಲ್ಲಿ ಮಧುಗಿರಿ ಸಂಸ್ಥಾನ ಆಳಿದ ನೊಳಂಬರ ವಂಶಸ್ಥರು ಇರುವ ಪ್ರದೇಶ, ಈ ಗ್ರಾಮದ 4 ಮನೆ ಹೊರತುಪಡಿಸಿ ಉಳಿದೆಲ್ಲಾ ಬೆಟ್ಟದರಂಗನಾಥಸ್ವಾಮಿ ಒಕ್ಕಲಿನವರು. ಈ ಒಕ್ಕಲಿನ ಮನೆತನದ ಹೆಣ್ಣು ಮಗಳು ಪಾರ್ವತಿಯನ್ನು ನೂರಾರು ವರ್ಷಗಳ ಹಿಂದೆ ಸಮೀಪದ ಸೋಗೇನಹಳ್ಳಿ ಗ್ರಾಮದ ಯುವಕನಿಗೆ ಕೊಟ್ಟು ವಿವಾಹ ಮಾಡಿದ್ದರಂತೆ,

ತುಂಬಾ ಸಾದ್ವಿಯಾದ ಆಕೆಗೆ ಗಂಡನ ಮನೆಯಲ್ಲಿ ಅತಿಯಾದ ಕಿರುಕುಳ ನೀಡುತ್ತಿದ್ದು, ಯುಗಾದಿ ಹಬ್ಬದಂದೂ ಸಹ ಕಿರುಕುಳ ನೀಡಿ ದನ ಕಾಯಲು ಕಾಡಿಗೆ ಅಟ್ಟಿದರಂತೆ. ಪಾರ್ವತಿಯ ತವರಿನವರೂ ಈಕೆಯ ಕಷ್ಟದ ಬಗ್ಗೆ ವಿಚಾರಿಸಲೂ ಬರಲಿಲ್ಲವಂತೆ. ಇದರಿಂದ ಮನನೊಂದ ಪಾರ್ವತಿ, ತಾನು ಆಚರಿಸದ ಹಬ್ಬ ನನ್ನ ಸಂಬಂಧಿಕರೂ ಆಚರಿಸದಿರಲಿ ಎಂದು ಶಾಪನೀಡಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಳಂತೆ...

ಈ ಶಾಪದ ಪರಿಣಾಮವಾಗಿ ಆಕೆಯ ಗಂಡನ ಮನೆತನ ಬೆಳೆಯದೆ ವಂಶವೇ ಇಲ್ಲವಾಯಿತಂತೆ. ಆಕೆಯ ತವರೂರಿನ 36 ಮನೆಯ ವಂಶಸ್ಥರು ಇಂದಿಗೂ ಯುಗಾದಿ ಹಬ್ಬ ಅಚರಿಸಲು ಸಾದ್ಯವಾಗುತ್ತಿಲ್ಲ.ಹೊಸ ಬಟ್ಟೆ ತೊಡುವಂತಿಲ್ಲ, ಹಸಿರು ತೋರಣ ಕಟ್ಟುವಂತಿಲ್ಲ, ಎಣ್ಣೆ ಸ್ನಾನ ಮಾಡುವಂತಿಲ್ಲ, ಒಗ್ಗರಣೆ ತಿಂಡಿ, ಸಿಹಿ ಊಟ ಇಲ್ಲವೇ ಇಲ್ಲ, ಇದು ನೂರಾರು ವರ್ಷಗಳಿಂದ ಇಂದಿಗೂ ಸಂಪ್ರದಾಯದ ರೀತಿಯಲ್ಲಿ ನಡೆದುಕೊಂಡು ಬಂದಿದೆ.

ಶಂಭೋನಹಳ್ಳಿಯಲ್ಲಿ ವಾಸಿಸುವವರಿಗೆ ಮಾತ್ರ ಸೀಮಿತವಾಗಿಲ್ಲ, ಈ ವಂಶಸ್ಥರು ದೇಶದ ಯಾವ ಮೂಲೆಯಲ್ಲಿದ್ದರೂ ಯುಗಾದಿ ಹಬ್ಬದಂದು ಈಗಲೂ ಸಂಪ್ರದಾಯ ಪಾಲಿಸುತ್ತಾರೆ ಎನ್ನುತ್ತಾರೆ ಗ್ರಾಮದ ಹಿರಿಯಜ್ಜ ನಂಜುಂಡಪ್ಪ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.