ಶಬರಿಮಲೆ ಕಾಲ್ತುಳಿತ ದುರಂತ: ಕೇರಳ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

7

ಶಬರಿಮಲೆ ಕಾಲ್ತುಳಿತ ದುರಂತ: ಕೇರಳ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Published:
Updated:

ಕೊಚ್ಚಿ (ಪಿಟಿಐ): ಅಯ್ಯಪ್ಪಸ್ವಾಮಿ ಭಕ್ತರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನ ತೋರಿರುವ ಮತ್ತು ನ್ಯಾಯಾಲಯ ಭಕ್ತರ ಸುರಕ್ಷತೆ ಕುರಿತು ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಿರುವ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕೇರಳ ಹೈಕೋರ್ಟ್, ಕಾಲ್ತುಳಿತ ದುರಂತದ ಬಗ್ಗೆ ಗುರುವಾರದೊಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದೆ.

ಶಬರಿಮಲೆ ಅಯ್ಯಪ್ಪ ಭಕ್ತರ ಕುರಿತ ವ್ಯವಹಾರಗಳ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ತೋಟತ್ತಿಲ್ ರಾಧಾಕೃಷ್ಣನ್ ಮತ್ತು ಪಿ.ಎಸ್. ಗೋಪಿನಾಥನ್ ಅವರನ್ನು ಒಳಗೊಂಡ ದ್ವಿಸದಸ್ಯರ ವಿಭಾಗೀಯ ಪೀಠವು ಕಾಲ್ತುಳಿತ ದುರಂತದ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ.

ಈ ದುರಂತ ಸಂಭವಿಸಲು ಕಾರಣಗಳೇನು ಎಂದು ಗುರುವಾರದೊಳಗೆ ವಿವರಣೆ ನೀಡುವಂತೆ ಪೊಲೀಸ್, ಅರಣ್ಯ ಇಲಾಖೆ ಮತ್ತು ತಿರುವಾಂಕೂರ್ ದೇವಸ್ವಂ ಮಂಡಳಿಗೆ ಪೀಠವು ಸೋಮವಾರ ಈ ಸೂಚನೆ ನೀಡಿದೆ.

ಶಬರಿಮಲೆಗೆ ಆಗಮಿಸುವ ಭಕ್ತರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜ. 5ರಂದು ಪೀಠವು ಎಚ್ಚರಿಕೆ ನೀಡಿತ್ತು. ಆದರೂ ಅದನ್ನು ಕಡೆಗಣಿಲಾಗಿದೆ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ಶಬರಿಮಲೆ ಯಾತ್ರೆಯ ಉಸ್ತುವಾರಿ ನೋಡಿಕೊಳ್ಳುವ ಸರ್ಕಾರದ ವಿವಿಧ ಇಲಾಖೆಗಳಲ್ಲೇ ಪರಸ್ಪರ ಸಹಕಾರ ಇಲ್ಲ. ಆದ್ದರಿಂದ ಇಂತಹ ಘೋರ ದುರಂತ ಸಂಭವಿಸಿದೆ. ಅಲ್ಲಿ ಕಾಲ್ತುಳಿತ ಉಂಟಾಗಲು ಕಾರಣವೇನು ಎಂದು ತಿಳಿದುಕೊಳ್ಳಲು ಪೀಠ ಬಯಸುತ್ತದೆ’ ಎಂದು ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈ ದುರಂತದಲ್ಲಿ ಗಾಯಗೊಂಡವರು ಮತ್ತು ದುರಂತ ನಡೆದ ಮೇಲೆ ಪುಲ್‌ಮೇಡು ಅರಣ್ಯ ಪ್ರದೇಶದಲ್ಲಿ ಸಿಲುಕಿಕೊಂಡವರಿಗೆ ಸರ್ಕಾರ ಯಾವ ರೀತಿ ಸಹಾಯ ಮಾಡಿದೆ ಎಂಬುದರ ಬಗ್ಗೆಯೂ ವರದಿ ನೀಡುವಂತೆ ಪೀಠವು ಸೂಚಿಸಿದೆ.

ಅಯ್ಯಪ್ಪ ಸ್ವಾಮಿ ಭಕ್ತರು ‘ಮಕರ ಜ್ಯೋತಿ’ ದರ್ಶನ ಮಾಡಿಕೊಂಡು ತಮ್ಮೂರಿಗೆ ವಾಪಸು ಬರುತ್ತಿದ್ದಾಗ ಪುಲ್‌ಮೇಡು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಕಾಲ್ತುಳಿತ ಉಂಟಾಯಿತು. ಇದರಿಂದ ಕೇರಳ, ಕರ್ನಾಟಕ, ಅಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗದ 102 ಮಂದಿ ಭಕ್ತರು ಸಾವನ್ನಪ್ಪಿದರು. ಈ ದುರ್ಘಟನೆಯ ಬಗ್ಗೆ ಕೇರಳ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ಶಬರಿಮಲೆಯಲ್ಲಿ ಮೂಲ ಸೌಕರ್ಯಗಳಾದ ನೀರು, ವಿದ್ಯುದ್ದೀಪ, ಶಿಬಿರಗಳ ಕೊರತೆ ಸಾಕಷ್ಟಿದೆ. ಇಲ್ಲಿಗೆ ಬರುವ ಭಕ್ತರಿಗೆ ಅಗತ್ಯ ಸುರಕ್ಷತೆ ಕೂಡ ಇಲ್ಲ. ತಮಿಳುನಾಡು ಕಡೆಯಿಂದ ಶಬರಿಮಲೆಗೆ ಬರುವ ಪುಲ್‌ಮೇಡು ಮಾರ್ಗವನ್ನು ಭಕ್ತರು ಅನೇಕ ವರ್ಷಗಳಿಂದ ಬಳಸುತ್ತಿದ್ದಾರೆ. ಈ ಮಾರ್ಗದಲ್ಲಿ ಬರುವ ಸಹಸ್ರಾರು ಭಕ್ತರನ್ನು ನಿರ್ವಹಿಸಲು ಸರಿಯಾದ ವ್ಯವಸ್ಥೆಯಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿರಲಿಲ್ಲ ಆದ್ದರಿಂದ ಈ ದುರಂತ ಸಂಭವಿಸಿತು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry