ಭಾನುವಾರ, ಮಾರ್ಚ್ 7, 2021
18 °C

ಶಾರುಕ್ ಖಾನ್ ಪ್ರಕರಣ: ಕಾಟಾಚಾರದ ಕ್ಷಮಾಪಣೆ ಬೇಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರುಕ್ ಖಾನ್ ಪ್ರಕರಣ: ಕಾಟಾಚಾರದ ಕ್ಷಮಾಪಣೆ ಬೇಕಿಲ್ಲ

ಮಾಸ್ಕೊ(ಪಿಟಿಐ): ಬಾಲಿವುಡ್ ನಟ ಶಾರುಕ್ ಖಾನ್ ಅವರನ್ನು ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದ ಘಟನೆಯನ್ನು ಅಮೆರಿಕವು ಗಂಭೀರವಾಗಿ ಪರಿಗಣಿಸಬೇಕು. ಇದು ಮರುಕಳಿಸದಂತೆ ನೋಡಿಕೊಳ್ಳಬೇಕು. ಕಾಟಾಚಾರದ ಕ್ಷಮಾಪಣೆಯಿಂದ ಪ್ರಯೋಜನವಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಶನಿವಾರ ಪುನರುಚ್ಚರಿಸಿದ್ದಾರೆ.ತನ್ನ ದೇಶದಲ್ಲಿ ಜಾರಿಯಲ್ಲಿರುವ ಕಾನೂನು ಕ್ರಮಗಳನ್ನು ಅಮೆರಿಕವು ಗಂಭೀರವಾಗಿ ಪರಿಶೀಲಿಸಬೇಕಿದೆ. ಉಭಯ ದೇಶಗಳ ಒಡನಾಟಕ್ಕೆ ಇದು ಅನುಕೂಲವಾಗಲಿದೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಶಾರುಕ್ ಪ್ರಕರಣದಲ್ಲಿ ಭಾರತಕ್ಕೆ ಅಸಮಾಧಾನವಾಗಿದೆ ಎನ್ನುವುದನ್ನು ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಉಪಮುಖ್ಯಸ್ಥರ ಗಮನಕ್ಕೆ ತರಲು  ವಿದೇಶಾಂಗ ಕಾರ್ಯದರ್ಶಿ ಕಚೇರಿಗೆ ಸೂಚನೆ ನೀಡಿದ್ದಾಗಿಯೂ ಕೃಷ್ಣ ಹೇಳಿದ್ದಾರೆ. ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಈ ಘಟನೆಗಾಗಿ ಶಾರುಕ್ ಅವರ ಕ್ಷಮೆ ಕೇಳಿದೆ.ಅನ್ನಾನ್ ಜತೆ ಚರ್ಚೆ: ಸಿರಿಯಾ ಬಿಕ್ಕಟ್ಟು ಕುರಿತು ಕೃಷ್ಣ ಅವರು ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಕೋಫಿ ಅನ್ನಾನ್ ಅವರೊಂದಿಗೆ ಶನಿವಾರ ದೂರವಾಣಿ ಮೂಲಕ ಚರ್ಚೆ ನಡೆಸಿದರು.ಸಂಘರ್ಷ ಪೀಡಿತ ಸಿರಿಯಾದಲ್ಲಿ ಶಾಂತಿ ಸ್ಥಾಪಿಸಲು ಅನ್ನಾನ್ ಮಾಡುತ್ತಿರುವ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿಯೂ ತಿಳಿಸಿದರು.ಇಂದು ಕೃಷ್ಣ ಯುಎಇಗೆ:  ದ್ವಿ-ತೆರಿಗೆ ನೀತಿ ಮತ್ತು ರಾಯಭಾರಿ ಕಚೇರಿ ತೆರೆಯವ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಯುಎಇ ವಿದೇಶಾಂಗ ಸಚಿವರು ಅಬುಧಾಬಿಯಲ್ಲಿ ಭಾನುವಾರ  ಚರ್ಚಿಸಲಿದ್ದಾರೆ.

 

`ಜನಾಂಗೀಯ ಹಿನ್ನೆಲೆ ಕಾರಣವಲ್ಲ~

ಕಳೆದ ಮೂರು ವರ್ಷಗಳಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಅವರನ್ನು ಅಮೆರಿಕದಲ್ಲಿ ಎರಡು ಬಾರಿ ಬಂಧಿಸಿದ್ದರ ಹಿಂದೆ ಯಾವುದೇ ಜನಾಂಗೀಯ ಕಾರಣವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. `ನಾನು ಈ ಪ್ರಕರಣವನ್ನು ಜನಾಂಗೀಯ ಹಿನ್ನೆಲೆಯಲ್ಲಿ ನೋಡಲುವುದಿಲ್ಲ.ಪ್ರತಿನಿತ್ಯವೂ ಇಲ್ಲಿನ ವಿಮಾನ ನಿಲ್ದಾಣಕ್ಕೆ ಸಾವಿರಾರು ಮುಸ್ಲಿಂ ಪ್ರಯಾಣಿಕರು ಬಂದು ಹೋಗುತ್ತಾರೆ. ಹಾಗಂತ ಅವರನ್ನು ಬಂಧಿಸಿದ ಉದಾಹರಣೆಗಳು ಇಲ್ಲ~ ಎಂದು ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಈ ಹಿಂದೆ 2009ರಲ್ಲಿ ನ್ಯೂಜೆರ್ಸಿಯ ನೇವಾರ್ಕ್ ವಿಮಾನ ನಿಲ್ದಾಣದಲ್ಲಿ ಶಾರುಕ್ ಅವರನ್ನು ತಡೆದು ವಿಚಾರಣೆ ನಡೆಸಲಾಗಿತ್ತು.

 

`ದುರದೃಷ್ಟಕರ ಪ್ರಕರಣ~

ನ್ಯೂಯಾರ್ಕ್ (ಪಿಟಿಐ):
ಶಾರುಕ್ ಖಾನ್ ಪ್ರಕರಣ `ದುರದೃಷ್ಟಕರ~ ಎಂದಿರುವ ಯೇಲ್ ವಿಶ್ವವಿದ್ಯಾಲಯವು, ಅಂತಿಮವಾಗಿ ಈ ಘಟನೆ ಸಮಾಧಾನಕರ ರೀತಿಯಲ್ಲಿ ಅಂತ್ಯಕಂಡಿದೆ ಎಂದು ಶನಿವಾರ ಹೇಳಿದೆ.`ಸ್ವತಃ ಶಾರುಕ್ ಅವರೇ ಹೇಳುವಂತೆ, ಒಂದು ಸಿನಿಮಾ ಹೇಗೆ ಆರಂಭವಾಗುತ್ತದೆ ಎನ್ನುವುದಕ್ಕಿಂತ ಹೇಗೆ ಮುಕ್ತಾಯವಾಗುತ್ತದೆ ಎನ್ನುವ ಅಂಶ ಮುಖ್ಯವಾಗುತ್ತದೆ.ಇದೇ ರೀತಿಯಲ್ಲಿ ಶುಕ್ರವಾರ ದುರದೃಷ್ಟಕರ ರೀತಿಯಲ್ಲಿ ಘಟನೆ ಶುರುವಾಯಿತು. ಕೊನೆಗೆ ಎಲ್ಲರಿಗೂ ಸಮಧಾನವಾಗುವಂತೆ ಅಂತ್ಯ ಕಂಡಿತು~ ಎಂದು ವಿಶ್ವವಿದ್ಯಾಲಯದ ಅಂತರ ರಾಷ್ಟ್ರೀಯ ವ್ಯವಹಾರದ ಸಹಾಯಕ ಕಾರ್ಯದರ್ಶಿ ಜಾರ್ಜ್ ಜೋಸೆಫ್ ಅವರು ಸುದ್ದಿ ಸಂಸ್ಥೆಗೆ ಇ-ಮೇಲ್ ಮೂಲಕ ಹೇಳಿಕೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.