ಶನಿವಾರ, ಮೇ 21, 2022
24 °C

ಶಾಲೆ ಮುಖ್ಯಸ್ಥರ ವಿರುದ್ಧ ಪೋಷಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಬೆಂಗಳೂರು ಮಾಂಟೆಸರಿ ಶಾಲೆಯಲ್ಲಿ (ಬಿಎಂಎಸ್) ಅಧಿಕ ಶುಲ್ಕ, ವಂತಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಶಾಲೆ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಮುಸ್ಲಿಂ ಸಮುದಾಯಕ್ಕೆ ಸೇರಿದ ಬಡ ಕುಟುಂಬಗಳ, ಕೂಲಿ ಕಾರ್ಮಿಕರ ಮಕ್ಕಳೇ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಕೆಳಮಧ್ಯಮ ಮತ್ತು ಬಡ ಕುಟುಂಬಗಳ ಪೋಷಕರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯ ಮುಖ್ಯಸ್ಥ, ಜಿಲ್ಲಾ ಪಂಚಾಯಿತಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡರು.ಕಳೆದ ವರ್ಷ ಮರು ದಾಖಲಾತಿ ಸಂದರ್ಭದಲ್ಲಿ ರೂ. 800 ಡೊನೇಶನ್ ಮತ್ತು ಪ್ರತಿ ತಿಂಗಳು ರೂ. 170 ಶುಲ್ಕವನ್ನು ವಸೂಲು ಮಾಡಲಾಗಿತ್ತು. ಆದರೆ ಈ ಬಾರಿ ಮರು ದಾಖಲಾತಿ ಶುಲ್ಕವನ್ನು ರೂ.8-9 ಸಾವಿರಕ್ಕೆ ಹೆಚ್ಚಿಸಲಾಗಿದೆ. 9ನೇ ತರಗತಿ ಪಾಸಾಗಿ 10ನೇ ತರಗತಿಗೆ ಬಂದಿರುವ ಶಾಲೆಯ ಮಕ್ಕಳಿಂದ 15 ಸಾವಿರ ರೂಪಾಯಿ ವಂತಿಗೆ ವಸೂಲು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಷ್ಟು ಮೊತ್ತ ಪಾವತಿಸಲಾಗದ ಬಡ ಪೋಷಕರು ಮಕ್ಕಳನ್ನು ಮನೆಗೆ ವಾಪಸ್ ಕರೆದೊಯ್ಯುತ್ತಿದ್ದಾರೆ. ಅದರಲ್ಲೂ ಸುತ್ತಮುತ್ತ ವಾಸವಿರುವ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರಿಸುವುದು ಕಷ್ಟವಾಗುತ್ತಿದೆ.

 

ಶಾಲೆಯಲ್ಲಿ ಅತ್ಯಧಿಕ ವಂತಿಗೆ ಪಾವತಿಸುವುದಕ್ಕಿಂತಲೂ ಮನೆಗೆ ಕರೆದೊಯ್ಯುವುದೇ ವಾಸಿ ಎಂಬ ಭಾವನೆ ಪೋಷಕರಲ್ಲಿ ಬರುವಂತೆ ಶಾಲೆ ಆಡಳಿತ ಮಂಡಳಿ ಶೋಷಣೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.7ನೇ ತರಗತಿಗೆ ರೂ. 8 ಸಾವಿರ, 1ರಿಂದ 4ನೇ ತರಗತಿವರೆಗೆ 9 ಸಾವಿರ ರೂಪಾಯಿ ವಂತಿಗೆ ನಿಗದಿ ಮಾಡಲಾಗಿದೆ. ಎಲ್‌ಕೆಜಿಗೆ ಹೊಸದಾಗಿ ಸೇರುವ ವಿದ್ಯಾರ್ಥಿಗಳ ಪೋಷಕರಿಂದ ರೂ.13,600 ವಸೂಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.ತರಾಟೆಗೆ: ಪೋಷಕರನ್ನು ಸಮಾಧಾನಗೊಳಿಸಲು ಮುಂದಾದ ಶಾಲೆ ಮುಖ್ಯಸ್ಥ ಅ.ಮು.ಲಕ್ಷ್ಮಿನಾರಾಯಣ ಅವರು ತೀವ್ರ ಆಕ್ಷೇಪದ ಮಾತುಗಳನ್ನು ಎದುರಿಸಬೇಕಾಯಿತು. ಎಲ್‌ಕೆಜಿ ಮಕ್ಕಳ ಸಮವಸ್ತ್ರ, ಪುಸ್ತಕ ಮತ್ತಿತರ ಪಠ್ಯ ಸಾಮಗ್ರಿಗಳೆಲ್ಲವನ್ನೂ ಶಾಲೆಯೇ ಪೂರೈಸುವುದರಿಂದ ಅಷ್ಟು ಶುಲ್ಕ ನಿಗದಿ ಮಾಡಲಾಗಿದೆ ಎಂಬ ಅವರ ಸ್ಪಷ್ಟನೆಯನ್ನು ಪೋಷಕರು ಒಪ್ಪಲಿಲ್ಲ.ಶಾಲೆಯಲ್ಲೇ ಏಕೆ ನಾವು ಪಠ್ಯಪುಸ್ತಕಗಳನ್ನು ಖರೀದಿಸಬೇಕು? ಪುಸ್ತಕಗಳ ಪಟ್ಟಿ ನೀಡಿದರೆ ನಾವೇ ಕೊಂಡು ತರುತ್ತೇವೆ ಎಂದು ಹಠ ಹಿಡಿದರು. ಈಗಾಗಲೇ ಪಠ್ಯ ಸಾಮಗ್ರಿಗಳನ್ನು ಶಾಲೆಯ ವತಿಯಿಂದ ಖರೀದಿಸಲಾಗಿದೆ ಎಂಬ ಲಕ್ಷ್ಮಿನಾರಾಯಣ ಅವರ ಮಾತನ್ನು ಪೋಷಕರು ಒಪ್ಪಲಿಲ್ಲ. ಏಕಾಏಕಿ ವಂತಿಗೆ ಮೊತ್ತ ಹೆಚ್ಚಿಸಿರುವುದು ಸರಿಯಲ್ಲ ಎಂದು ಪೋಷಕರು ಲಕ್ಷ್ಮಿನಾರಾಯಣ ಅವರೊಡನೆ ವಾಗ್ವಾದಕ್ಕೆ ಇಳಿದರು. ಈ ಹಿಂದಿನ ವರ್ಷಗಳಲ್ಲಿ ಇಷ್ಟು ಶುಲ್ಕವಾಗಲಿ, ವಂತಿಗೆ ಆಗಲಿ ಇರಲಿಲ್ಲ. ಈ ಬಾರಿ ಏಕಾಏಕಿ ಎರಡನ್ನೂ ಹೆಚ್ಚಿಸಿರುವುದು ಸರಿಯಲ್ಲ. ಕೂಡಲೇ ವಂತಿಗೆ, ಮಾಸಿಕ ಶುಲ್ಕ ಪ್ರಮಾಣ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.ದೂರು: 2012-13ನೇ ಸಾಲಿಗೆ ಪ್ರವೇಶ ಬಯಸುವವರಿಂದ ಮತ್ತು ಮುಂದಿನ ತರಗತಿಗಳಿಗೆ ದಾಖಲಾಗುವವರಿಂದ ಶಾಲೆಯಲ್ಲಿ ಅಧಿಕ ಶುಲ್ಕ ಮತ್ತು ವಂತಿಗೆ ವಸೂಲು ಮಾಡಲಾಗುತ್ತಿದೆ. ಕೂಡಲೇ ಇದರ  ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ದೂರು ನೀಡಿದ್ದಾರೆ. ಮನವಿ ಪತ್ರಕ್ಕೆ 30 ಪೋಷಕರು ಸಹಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.