ಭಾನುವಾರ, ಜೂಲೈ 12, 2020
22 °C

ಶಾಶ್ವತ ತೃಪ್ತಿಗೆ ಸನ್ಮಾರ್ಗ ಅನುಸರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಶ್ವತ ತೃಪ್ತಿಗೆ ಸನ್ಮಾರ್ಗ ಅನುಸರಿಸಿ

ದಾವಣಗೆರೆ: ಭ್ರಷ್ಟಾಚಾರದಿಂದ ಕಲುಷಿತವಾಗಿರುವ ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಯುವಜನಾಂಗ ನ್ಯಾಯದ ಮಾರ್ಗವನ್ನು ಅನುಸರಿಸಿ ಶಾಶ್ವತ ತೃಪ್ತಿ ಗಳಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕರೆ ನೀಡಿದರು.ಸ್ಥಳೀಯ ಎವಿಕೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ, ಎಸ್‌ಬಿಸಿ ಪ್ರಥಮದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿವಿ ಅರ್ಥಶಾಸ್ತ್ರ ಶಿಕ್ಷಕರ ವೇದಿಕೆ ಸಹಯೋಗದಲ್ಲಿ ನಗರದಲ್ಲಿ ಶನಿವಾರ ‘ಅಂತರ್ಗತ ಬೆಳವಣಿಗೆ-ಇಂದಿನ ಸನ್ನಿವೇಶದಲ್ಲಿ ಅದರ ಪ್ರಸ್ತುತತೆ’ ಕುರಿತು ಹಮ್ಮಿಕೊಂಡಿದ್ದ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಭ್ರಷ್ಟಾಚಾರವೆಂಬ ರೋಗಕ್ಕೆ ಬಹಳ ಜನ ತುತ್ತಾಗಿದ್ದಾರೆ. ತಪ್ಪು ಮಾಡಿದವರೇ ಮತ್ತೆ ಮತ್ತೆ ಸಿಕ್ಕಿ ಬೀಳುತ್ತಿದ್ದಾರೆ. ಅಕ್ರಮ ಮಾರ್ಗದಲ್ಲಿ ಗಳಿಸುವ ಸಂಪತ್ತು ತಾತ್ಕಾಲಿಕ ತೃಪ್ತಿ ನೀಡಬಲ್ಲದು. ಆದರೆ ಶಾಶ್ವತ ತೃಪ್ತಿಗೆ ಸರಿಯಾದ ಮಾರ್ಗ ಅನುಸರಿಸಬೇಕು. ಹಾಗಾದಾಗ ಸಮಾಜ ಬದಲಾಗುತ್ತದೆ ಎಂದರು.‘ಯುವಕರು ಮನೋಭಾವನೆಯನ್ನು ಬದಲಾಯಿಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಹೋರಾಡಬೇಕು. ನಿಮ್ಮಿಂದಲೇ, ನಿಮಗಾಗಿಯೇ ಭಾರತ ಉಳಿಯಬೇಕು’ ಎಂದು ಹೇಳಿದರು.ಅಂತರ್ಗತ ಬೆಳವಣಿಗೆ ಕುರಿತು ಪ್ರಸ್ತಾಪಿಸಿ, ಯೋಜನೆಗಳ ಮೇಲೆ ಯೋಜನೆಗಳನ್ನು ರೂಪಿಸಲಾಗುತ್ತಿದೆ, ಆದರೆ, ಅದರಿಂದ ಗ್ರಾಮಾಂತರ ಭಾಗದಲ್ಲಿ ಶೇ. 5ರಷ್ಟು ಕೂಡಾ ಬೆಳವಣಿಗೆ ಆಗಿಲ್ಲ. ಈಗಲೂ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಒಳಚರಂಡಿ ಇಲ್ಲದ ಗ್ರಾಮಗಳಿವೆ. ಹಳ್ಳಿಗಳಲ್ಲಿ ಅಭಿವೃದ್ಧಿ ಆಗಿಲ್ಲ, ಆದರೆ, ಭ್ರಷ್ಟಾಚಾರ ಹಾಗೂ ರಾಜಕೀಯ ಅಲ್ಲಿಗೆ ತಲುಪಿವೆ ಎಂದು ಕಳವಳ ವ್ಯಕ್ತಪಡಿಸಿದರು.ಕೃಷಿ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ಗ್ರಾಮಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು. ಯೋಜನೆಯ ಹಣವನ್ನು ಪ್ರಾಮಾಣಿಕವಾಗಿ ಅದೇ ಉದ್ದೇಶಕ್ಕೆ ಬಳಕೆಯಾಗುವಂತಾಗಬೇಕು ಎಂದು ಆಶಿಸಿದರು.ಇತ್ತೀಚಿನ ದಿನಗಳಲ್ಲಿ ಸಂಸತ್ತು ಅಥವಾ ರಾಜ್ಯದ ವಿಧಾನ ಮಂಡಲದಲ್ಲಿ ಜನರ ಈ ಮೂಲ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳಾಗುತ್ತಿಲ್ಲ. 2ಜಿ ಸ್ಪೆಕ್ಟ್ರಮ್‌ನಂಥ ಹಗರಣದ ತನಿಖೆಯ ಕುರಿತಾಗಿಯೇ ಕಲಾಪ ವ್ಯರ್ಥ ಮಾಡಲಾಯಿತು. ರಾಜ್ಯದಲ್ಲೂ ಕಬ್ಬಿಣದ ಅದಿರು ಕದ್ದವರು ಯಾರು ಎಂಬ ಬಗ್ಗೆ ಗದ್ದಲವಾದರೂ ಜನಪರವಾದ ನಿರ್ಧಾರ ಆಗಲಿಲ್ಲ ಎಂದು ವಿಷಾದಿಸಿದರು.ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ಅಂಥ ವ್ಯಕ್ತಿಗಳು ಈ ವ್ಯವಸ್ಥೆಯಲ್ಲಿ ಬೇಕಾಗಿದೆ. ಈಗಲೇ ಅವರು ನಿವೃತ್ತಿಯ ಮಾತನಾಡುವುದು ಬೇಡ ಎಂದು ಮನವಿ ಮಾಡಿದರು.ಮಾಜಿ ಶಾಸಕ ಬಿ.ಜಿ. ಕೊಟ್ರಪ್ಪ, ದಾವಣಗೆರೆ ವಿವಿ ಕುಲಪತಿ ಡಾ.ಎಸ್. ಇಂದುಮತಿ, ಬಾಪೂಜಿ ವಿದ್ಯಾಸಂಸ್ಥೆ ಖಜಾಂಚಿ ಎ.ಸಿ. ಜಯಣ್ಣ, ಸದಸ್ಯೆ ಕಿರುವಾಡಿ ಗಿರಿಜಮ್ಮ, ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘಗಳ ಒಕ್ಕೂಟದ ರಾಜ್ಯ ಅದ್ಯಕ್ಷ ಸಿ.ಎಚ್. ಮುರಿಗೇಂದ್ರಪ್ಪ ಮಾತನಾಡಿದರು. ಕಾಲೇಜು ಪ್ರಾಂಶುಪಾಲರಾದ ಪ್ರೊ.ಜೆ.ಕೆ. ಇಂದುಮತಿ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್. ಮಂಜುನಾಥ್ ಸ್ವಾಗತಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.