ಗುರುವಾರ , ಮೇ 19, 2022
21 °C

ಶಾಶ್ವತ ನೀರಾವರಿ ಯೋಜನೆಗೆ ಜಿಲ್ಲೆಯಾದ್ಯಂತ ಆಗ್ರಹ. ಜಿಲ್ಲಾ ಬಂದ್; ಸಂಪೂರ್ಣ ಯಶ್ವಸಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಸೋಮವಾರ ಕರೆ ನೀಡಲಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿಕ್ಕಬಳ್ಳಾಪುರದಲ್ಲಿ ಬಸ್ ಸುಟ್ಟು ಹಾಕಿದ ಮತ್ತು ಬಾಗೇಪಲ್ಲಿಯಲ್ಲಿ ಮೂರು ವಾಹನಗಳಿಗೆ ಕಲ್ಲು ತೂರಾಟ ನಡೆದ ಘಟನೆಗಳು ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿತ್ತು.ನಗರದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಲಾಗಿದ್ದ ಆಂಧ್ರಪ್ರದೇಶಕ್ಕೆ ಸೇರಿದ ಬಸ್‌ಗೆ ಬೆಂಕಿ ಹಚ್ಚಿದ ಕೆಲ ಕಿಡಿಗೇಡಿಗಳು ಅಶಾಂತಿ ವಾತಾವರಣ ಉಂಟು ಮಾಡಲೆತ್ನಿಸಿದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಜಿಲ್ಲಾ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಬೆಳಿಗ್ಗೆ 6ರಿಂದಲೇ ಪ್ರತಿಭಟನಾ ಮೆರವಣಿಗೆ, ಬೈಕ್ ರ್ಯಾಲಿ ಮುಂತಾದವುಗಳನ್ನು ನಡೆಸಿದ ಪ್ರತಿಭಟನಾಕಾರರು ನೀರಾವರಿಗೆ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಪ್ರವಾಸಿ ಮಂದಿರದಲ್ಲಿ ಜಮೆಯಾದ ವಿವಿಧ ಸಂಘಟನೆಗಳ ಸದಸ್ಯರು ಬಳಿಕ ಪ್ರಮುಖ ರಸ್ತೆಗಳಲ್ಲಿ ಮತ್ತು ವೃತ್ತಗಳಲ್ಲಿ ಪ್ರತಿಭಟನೆ ನಡೆಸಿದರು. ನಗರದ ವಾಪಸಂದ್ರದ ಮೂಲಕ ಸಾಗಿ ರಾಷ್ಟ್ರೀಯ ಹೆದ್ದಾರಿ ಬಳಿ ಕೆಲ ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದರು. ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಲೆತ್ನಿಸಿದರು.ನಗರದ ಬ್ಯಾಂಕುಗಳು, ಸರ್ಕಾರಿ ಕಚೇರಿಗಳು, ಚಿತ್ರಮಂದಿರಗಳು, ಅಂಚೆ ಕಚೇರಿ ಮುಂತಾದವು ಮುಚ್ಚಲ್ಪಟ್ಟಿದ್ದವು. ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ವರ್ತಕರು ಸ್ವಯಂ-ಪ್ರೇರಣೆಯಿಂದ ಮುಚ್ಚಿದ್ದ ಕಾರಣ ವ್ಯಾಪಾರ-ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಶಾಲಾ-ಕಾಲೇಜುಗಳಿಗೂ ಸಹ ರಜೆ ಘೋಷಿಸಲಾಗಿತ್ತು. ಬಸ್ ಮತ್ತು ಆಟೊರಿಕ್ಷಾಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ವಾಹನಗಳ ಸಂಚಾರವಿಲ್ಲದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಿತ್ತು.ಪ್ರತಿಭಟನೆ ಸಂದರ್ಭದಲ್ಲಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ಶಾಶ್ವತ ನೀರಾವರಿ ಯೋಜನೆಗಾಗಿ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿದ್ದೇವೆ. ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.ಮಳೆಗಾಲದಲ್ಲಿ ಪಶ್ಚಿಮ ಘಟ್ಟದಲ್ಲಿ ಬಿದ್ದು ವ್ಯರ್ಥವಾಗಿ ಸಮುದ್ರದ ಪಾಲಾಗುವ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸುವ ಮೂಲಕ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಬೇಕು. ಜನರಿಗೆ ಮತ್ತು ಜಾನುವಾರಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಎರಡೂ ಜಿಲ್ಲೆಗಳ ಕೆರೆಗಳ ಸಂರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಜಿಲ್ಲೆಯ ಜನರು ಬಂದ್ ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಯತ್ನಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸರ್ಕಾರ ನಿರಾಸಕ್ತಿ ತೋರುವುದನ್ನು ಮುಂದುವರೆಸಿದ್ದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಕೆ.ವಿ.ನಾಗರಾಜ, ಕಾಂಗ್ರೆಸ್ ಮುಖಂಡರಾದ ಯಲುವಹಳ್ಳಿ ರಮೇಶ್, ಎಂ.ಎಸ್.ಶ್ರೀಧರ್, ಜೆಡಿಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ್, ಯಲುವಳ್ಳಿ ಸೊಣ್ಣೆಗೌಡ, ಕನ್ನಡಪರ ಸಂಘಟನೆಗಳ ಮುಖಂಡರಾದ ಚಲಪತಿ, ಹೈಟೆಕ್ ಶ್ರೀನಾಥ್ ಮುಂತಾದವರು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.ಕಾಂಗ್ರೆಸ್, ಜೆಡಿಎಸ್‌ನ ಕಾರ್ಯಕರ್ತರು, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ, ಕನ್ನಡ ಸೇನೆ, ಕರುನಾಡ ಸೇನೆ, ರೈತ ಸಂಘ, ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಮುಂತಾದ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.