ಬುಧವಾರ, ಮೇ 25, 2022
29 °C

ಶಾಸಕರ ಊರಿನಲ್ಲಿ ದಲಿತರಿಗೆ ಬಹಿಷ್ಕಾರ:16 ಮಂದಿ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ಗಣಪತಿ ವಿಸರ್ಜನೆ ವೇಳೆ ತಮಟೆ ಬಡಿಯಲಿಲ್ಲ ಎಂಬ ಕಾರಣಕ್ಕೆ ತಾಲ್ಲೂಕಿನ ಶಾಸಕ ಸುರೇಶ್ ಗೌಡರ ತವರು ಊರಿನಲ್ಲಿ ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.

ದಲಿತ ಜನಾಂಗಕ್ಕೆ ಸೇರಿದ ಶಿವರಾಜು ಬಿನ್ ಗಿಡ್ಡಯ್ಯ, ಮಾಯಣ್ಣ ಮತ್ತು ಸೀತಾರಾಮು ಬಿನ್ ಮಾಯಣ್ಣ ಎಂಬುವವರು ತಮಟೆ ಬಡಿಯಲು ಹಣ ಕೇಳಿದರು ಎಂಬ ಕಾರಣಕ್ಕೆ ಅವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕುಡಿಯುವ ನೀರು ಪಡೆಯಲು ಬೋರ್‌ವೆಲ್ ಬಳಿ ಹೋದ ಹೆಂಗಸರಿಗೆ, ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಶ್ಲೀಲವಾಗಿ ಬೈಯ್ಯಲಾಗಿದೆ.

ಗ್ರಾಮದ 8 ಮನೆಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಕುಡಿಯಲು ನೀರು ಕೊಡದಂತೆ ಹಾಗು ಗ್ರಾಮದ ಒಳಗಡೆ ಬಾರದಂತೆ ನಿಷೇಧ ಹೇರಲಾಗಿದೆ. ಗ್ರಾಮದಲ್ಲಿದ್ದ ಬಡಗೂಡಮ್ಮ  ಸ್ತ್ರೀ ಶಕ್ತಿ ಸಂಘದಿಂದ ದಲಿತ ಮಹಿಳೆಯರ ಹೆಸರು ಕೈ ಬಿಡಲಾಗಿದೆ ಎಂದು ದಲಿತರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 6ರಿಂದ 9ರವರೆಗೆ ಗ್ರಾಮದಲ್ಲಿ ಸಂಪೂರ್ಣ ಬಹಿಷ್ಕಾರ ಹಾಕಲಾಗಿತ್ತು. ಪೊಲೀಸರಿಗೆ ದೂರು ನೀಡಲು ಹೋದಾಗ ಶಾಸಕರ ಗ್ರಾಮವಾಗಿರುವುದರಿಂದ ಶಾಸಕರೇ ಸಮಸ್ಯೆ ಬಗೆಹರಿಸುತ್ತಾರೆ ಎಂಬ ಉತ್ತರ ದೊರೆಯಿತು. ಇದರಿಂದ ಅ.6ರಂದು ದೂರು ನೀಡಲು ಹೋದ ಮಾಯಣ್ಣ ವಾಪಸ್ ಬಂದಿದ್ದಾರೆ.

ಯಶಸ್ವಿಯಾಗದ ಶಾಸಕರ ಸಂಧಾನ: ಅ.9 ಶಾಸಕ ಸುರೇಶ್‌ಗೌಡ ಎರಡು ಸಮುದಾಯದವರನ್ನು ಕರೆಸಿ ತಿಳಿ ಹೇಳಿದ್ದಾರೆ. ಸಾಮಾಜಿಕ ಬಹಿಷ್ಕಾರ ಮಾಡುವುದು ಮಾನವೀಯತೆಯಲ್ಲ. ಮುಂದೆ  ಇಂತಹ ಘಟನೆಗಳು ಮರುಕಳಿಸಬಾರದು ಎಂದು ರಾಜಿ ಮಾಡಿಸಿದ್ದಾರೆ. ಆದರೆ ಅ.10 ಬೆಳಗ್ಗೆ ದಲಿತ ಮಹಿಳೆಯರು ಹಾಲಿನ ಡೈರಿ ಬಳಿ ಹೋದಾಗ ದಲಿತ ಮಹಿಳೆಯರನ್ನು ಜಾತಿ ನಿಂದನೆ ಮಾಡಿ ಅಪಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅ.10 ರ ರಾತ್ರಿ ನಾಗಮಂಗಲ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

16 ಮಂದಿ ವಿರುದ್ಧ ಎಫ್‌ಐಆರ್: ಪ್ರಕರಣ ಕುರಿತು ಕಸುವಿನಹಳ್ಳಿ ಗ್ರಾಮದವರಾದ ಪರೀಗೌಡ, ಮುದ್ದೇಗೌಡ, ಎಂ.ಕೃಷ್ಣಪ್ಪ, ಪುಟ್ಟಪ್ಪ, ಹಲಗಣ್ಣ, ಕೆ.ಪಿ.ಪಾಪೇಗೌಡ, ಶಂಕರ, ತೂಬಿನಕೆರೆ ವೆಂಕಟೇಶ, ಪುಟ್ಟ, ಕೆ.ಎಂ.ಪುಟ್ಟೇಗೌಡ, ಮಂಜ, ಶಿವಣ್ಣ, ಹಲಗೇಗೌಡ, ರಮೇಶ, ನಿಂಗಮ್ಮ ಕೋಂ ಜವರಯ್ಯ, ಅಕ್ಕಮ್ಮ ಕೋಂ ಮೆಡ್ಡಣ್ಣ ಎಂ 16 ಮಂದಿ ಮೇಲೆ ಎಸ್ಸಿ ಎಸ್ಟಿ ಕಾಯ್ದೆ ಕಲಂ 143. 427, 504, 114, 506 ಮತ್ತು 149 ಸೆಕ್ಷನ್ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೋಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಎಸ್ಪಿ ಭೇಟಿ: ಗೊಂದಲ ವಾತಾವರಣದಿಂದ ಕೂಡಿದ ಕಸುವಿನಹಳ್ಳಿ ಗ್ರಾಮಕ್ಕೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಭೇಟಿ ನೀಡಿ ನೊಂದ ದಲಿತ ಕುಟುಂಬಗಳ ಜೊತೆ ಮಾತನಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿವೈಎಸ್ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆಯಾಗುತ್ತಿದ್ದು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಒಂದು ತುಕಡಿಯನ್ನು ನಿಯೋಜಿಸಲಾಗಿದೆ. ಮಂಡ್ಯ ಜಿಲ್ಲಾ ಡಿವೈಎಸ್ಪಿ ಚನ್ನಬಸವಣ್ಣ, ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಡಿ.ರಾಜು,ಪಟ್ಟಣ ಠಾಣೆಯ ಪಿಎಸ್‌ಐ ವೆಂಕಟೇಗೌಡ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.