ಸೋಮವಾರ, ಮೇ 17, 2021
31 °C

ಶಾಸಕರ ದೂರವಾಣಿ: ಶಿಕ್ಷಕರ ಅಮಾನತು ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಶಾಲೆಯ ಸ್ವಚ್ಛತೆಗೆ ಮಕ್ಕಳನ್ನು ಬಳಕೆ ಮಾಡಿಕೊಂಡು ತಪ್ಪು ಮಾಡಿ ಅಮಾನತುಗೊಂಡ ಶಿಕ್ಷಕರೊಬ್ಬರ ರಕ್ಷಣೆಗೆ ಶಾಸಕರೇ ಪೌರೋಹಿತ್ಯ ವಹಿಸಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.ತಾಲ್ಲೂಕಿನ ನಾಗನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಚ್.ಎನ್.ಪಾಟೀಲ ಅವರು, ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆಯನ್ನು ಸ್ವಚ್ಛಗೊಳಿಸಲು ಕೂಲಿಗಳನ್ನು ಬಳಸದೇ ಮಕ್ಕಳನ್ನು ಬಳಕೆ ಮಾಡಿಕೊಂಡು ತಪ್ಪು ಮಾಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇ 31 ರಂದು ಆ ಮುಖ್ಯಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿದ್ದರು.ಆಮಾನತುಗೊಂಡ ಮುಖ್ಯಶಿಕ್ಷಕ ಪಾಟೀಲ ಅವರನ್ನು ಕೇವಲ ಮೂರು ದಿನಗಳಲ್ಲಿ ಅಮಾನತು ರದ್ದುಗೊಳಿಸಿ ಹಾವೇರಿ ತಾಲ್ಲೂಕಿನ ಕಳ್ಳಿಹಾಳ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರನ್ನಾಗಿ ಮರು ನೇಮಕ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮರು ಆದೇಶ ಮಾಡಿದ್ದಾರೆ.ಆದರೆ, ಅಮಾನತು ರದ್ದುಗೊಳಿಸಲು ಹಾಗೂ ಮರು ನೇಮಕ ಮಾಡಲು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಅವರು ದೂರವಾಣಿ ಮೂಲಕ ತಿಳಿಸಿದ ಹಿನ್ನೆಲೆಯಲ್ಲಿ ಅವರ ಅಮಾನತು ರದ್ದುಗೊಳಿಸಿ, ಶಾಲೆಗೆ ಮರು ನಿಯುಕ್ತಿ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊರಡಿಸಿದ ಮರು ಆದೇಶದಲ್ಲಿ ತಿಳಿಸಿದ್ದಾರೆ.ಇದರಿಂದ ಶಾಸಕರು ತಪ್ಪಿತಸ್ಥ ಶಿಕ್ಷಕನನ್ನು ರಕ್ಷಿಸುವ ಮೂಲಕ ತಪ್ಪು ಮಾಡುವ ಶಿಕ್ಷಕರ ಬೆನ್ನ ಹಿಂದೆ ನಾವಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಶಾಲಾ ಮಕ್ಕಳಿಂದಲೇ ಶಾಲೆಯ ಕಸ ಗೂಡಿಸುವುದು, ಅದನ್ನು ಬೇರೆಡೆಗೆ ಸಾಗಿಸುವುದು ಅಲ್ಲದೇ ರಜೆಯ ಅವಧಿಯಲ್ಲಿ ಒಡೆದು ಶಾಲೆಯ ಮೇಲ್ಛಾವಣಿ ಹೆಂಚುಗಳನ್ನು ಬದಲಾವಣೆ ಮಾಡಿಸಲಾಗಿದೆ ಎಂಬ ವಿಷಯವನ್ನು ಮೇ 31 ರಂದು `ಪ್ರಜಾವಾಣಿ' ಪತ್ರಿಕೆ `ಶಾಲೆಗೆ ಬರುವ ಮುನ್ನವೇ ಸ್ವಚ್ಛತೆ ಶಿಕ್ಷೆ' ಎಂಬ ಶಿರ್ಷಿಕೆಯಡಿ ಚಿತ್ರ ಸಹಿತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಮಕ್ಕಳನ್ನು ಶಾಲಾ ಸ್ವಚ್ಛತಾ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ಮುಖ್ಯ ಶಿಕ್ಷಕರು ಕರ್ತವ್ಯಲೋಪ ಎಸಗಿರುವುದು ಹಾಗೂ ಸರ್ಕಾರಿ ನೌಕರಿಗೆ ಭೂಷಣವಲ್ಲದ ರೀತಿತಯಲ್ಲಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮಶೆಟ್ಟಿ ಅವರು ಅಮಾನತು ರದ್ದು ಪಡಿಸಿದ  ಆದೇಶದಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.