ಶುಕ್ರವಾರ, ಜನವರಿ 24, 2020
28 °C
ನಾದಲೋಕದಲ್ಲಿ ಹೊಸ ಪ್ರಯತ್ನ

ಶಾಸ್ತ್ರೀಯ-ಯಕ್ಷಸಂಗೀತದ ಸಮ್ಮಿಲನ

ಪ್ರಜಾವಾಣಿ ವಾರ್ತೆ/ ಕೋಡಿಬೆಟ್ಟು ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ:  ಆಳ್ವಾಸ್ ವಿಶ್ವ ವಿರಾಸತ್ ಕಾರ್ಯಕ್ರಮದ ಉದ್ಘಾ­ಟನಾ ದಿನ ನಡೆದ ‘ನಾದ ಲೋಕ’ ಕಾರ್ಯಕ್ರಮದಲ್ಲಿ ಯಕ್ಷಗಾನ ಮತ್ತು ವಯಲಿನ್, ಕೊಳಲು ವಾದನವನ್ನು ಸಮ್ಮಿಲನಗೊಳಿಸಿದ ಹೊಚ್ಚ ಹೊಸ ಪ್ರಯತ್ನ ನಡೆಯಿತು.ವಯಲಿನ್‌ನಲ್ಲಿ ಡಾ. ಮೈಸೂರು ಮಂಜುನಾಥ್ ಕೊಳಲಿನಲ್ಲಿ ವಿದ್ವಾನ್ ಪ್ರವೀಣ್ ಗೋಡ್ಖಿಂಡಿ ಹಾಗೂ ಯಕ್ಷ­ಗಾನ ಭಾಗವತಿಕೆಯಲ್ಲಿ ಪದ್ಯಾಣ ಗಣ­ಪತಿ ಭಟ್ ಈ ಹೊಸ ಪ್ರಯತ್ನಕ್ಕೆ ಮುಂದಾದರು. ವಯಲಿನ್ –ಕೊಳಲು ವಾದನದೊಂದಿಗೆ ಸಾಂಪ್ರದಾಯಿಕವಾಗಿ ಆದಿತಾಳದಲ್ಲಿ ಶುರುವಾದ ಕಛೆೇರಿ ಹಂಸಧ್ವನಿ ರಾಗ­ದೊಂದಿಗೆ ಆರಂಭವಾ­ಯಿತು. ಬಳಿಕ ಕೀರವಾಣಿ ರಾಗವನ್ನು ಕೈಗೆತ್ತಿಕೊಂಡ ಸಂಗೀತ ದಿಗ್ಗಜರಿಬ್ಬರೂ ರಾಗ ವಿಸ್ತಾರದೊಂದಿಗೆ ತಮ್ಮ ಪ್ರಸ್ತುತಿಯನ್ನು ಮುಗಿಸುತ್ತಿದ್ದಂತೆಯೇ ಪದ್ಯಾಣ ಗಣಪತಿ ಭಟ್ ಯಕ್ಷಗಾನದ ಮಟ್ಟುಗಳೊಂದಿಗೆ ಸಜ್ಜಾಗಿದ್ದರು.ಶ್ರೀ ಗುರುಗಣಾಧಿಪತೆಯೇ ಎನ್ನುತ್ತಾ ಅವರು ಹೊರಳಿದ್ದು “ಸಖಿಯರೆಲ್ಲ ಬನ್ನಿ ವನಕೆ ಪೋಗುವ/ ಸಕಲರೆಲ್ಲ ಕೂಡಿ ವನ­ದ ಅಂದ ಚಂದವಾ...ಎನ್ನುವ ಹಾಡಿಗೆ. ವಯಲಿನ್ ಮತ್ತು ಬಾನ್ಸುರಿ, ಭಾಗವ­ತರ ಜಾಗಟೆ ದನಿಯ ಜಾಡನ್ನು ಹಿಡಿದು ಮೋಹನ ರಾಗದ ವಿಸ್ತಾರದ ಸಾಧ್ಯತೆ­ಗಳನ್ನು ಅನ್ವೇಷಿಸುತ್ತಾ ಸಾಗಿದರು.ಯಾವುದೇ ಪೂರ್ವ ತಯಾರಿ ಇಲ್ಲದೆ­ಯೇ ನಡೆಸಿದ ಈ ನಾದ ಸಮ್ಮಿಲವನ್ನು ಪ್ರೇಕ್ಷಕರೂ ಕುತೂಹಲದಿಂದ ಆಸ್ವಾದಿಸಿ­ದರು. ಅಪ್ಪಟ ಯಕ್ಷ ಪ್ರಿಯರು ಸ್ವೀಕ­ರಿ­ಸುವುದಕ್ಕೆ ಕೊಂಚ ಹೊತ್ತು ಹಿಂದೇಟು ಹಾಕಿದರೂ ಸಭೆಯಲ್ಲಿ ಸಂಗೀತಪ್ರಿ­ಯರೇ ಪ್ರಧಾನವಾಗಿದ್ದರಿಂದ ಪ್ರಸ್ತುತಿ ಮುಗಿಯುವ ವೇಳೆಗೆ ಚಪ್ಪಾಳೆಯ ಸುರಿ­ಮಳೆ ಬಿತ್ತು. ಮೃದಂಗದಲ್ಲಿ ವಿದ್ವಾನ್ ಅರ್ಜು­ನ್ ಕುಮಾರ್, ತವಿಲ್‌ನಲ್ಲಿ ವಿದ್ವಾ­ನ್ ಆನೂರು ಅನಂತಕೃಷ್ಣ ಶರ್ಮ­, ಖಂಜೀರ­ದಲ್ಲಿ ವಿದ್ವಾನ್ ಅಮೃತ, ಡ್ರಮ್‌್ಸನಲ್ಲಿ ವಿದ್ವಾನ್ ಅರುಣ್ ಕುಮಾ­ರ್, ಮದ್ದಳೆಯಲ್ಲಿ ಪದ್ಮನಾಭ ಉಪಾ­ಧ್ಯಾಯ, ಚೆಂಡೆಯಲ್ಲಿ ದೇವಾ­ನಂದ ಭಟ್ ಸಹಕರಿಸಿದರು. ನಾದ­ಲೋಕದ ಬಳಿಕ ಕೋಲ್ಕತ್ತದ ಉಪಾಸನ ಸೆಂಟರ್ ಫಾರ್ ಡಾನ್ಸ್ ವತಿಯಿಂದ ‘ಪರಿಕ್ರಮ ಎ ಜರ್ನಿ’ - ಕಥಕ್ ಪ್ರದರ್ಶನ ನಡೆಯಿತು.

ಪ್ರತಿಕ್ರಿಯಿಸಿ (+)