ಶನಿವಾರ, ಏಪ್ರಿಲ್ 17, 2021
22 °C

ಶಿಕ್ಷಕನ ಹೊಡೆತದಿಂದ ಬಾಲಕಿ ತೀವ್ರ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕನ ಹೊಡೆತದಿಂದ ಬಾಲಕಿ ತೀವ್ರ ಅಸ್ವಸ್ಥ

ಹೊಳೆನರಸೀಪುರ: `ಹೋಮ್ ವರ್ಕ್ ಮಾಡದ ಕಾರಣಕ್ಕೆ ಶಿಕ್ಷಕನಿಂದ ಥಳಿತಕ್ಕೆ ಒಳಗಾದ ಬಾಲಕಿಯೊಬ್ಬಳು ಈಗ ಎದ್ದು ನಿಲ್ಲಲೂ ಆಗದಂಥ ಸ್ಥಿತಿಗೆ ಬಂದಿದ್ದಾಳೆ. ಆ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಾಲಕರು ಮತ್ತು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಓಡನಹಳ್ಳಿದಾಖಲೆ ಮೂಡಲಕೊಪ್ಪಲು ಗ್ರಾಮದ ಶಾಲೆಯ ಶಿಕ್ಷಕ ವೀರಭದ್ರಪ್ಪ ಎಂಬುವವರು ಸುಮಾರು ಒಂದು ತಿಂಗಳ ಹಿಂದೆ ನಾಲ್ಕನೇ ತರಗತಿಯ ಬಾಲಕಿ ಪುಷ್ಪಾಳನ್ನು ಥಳಿಸಿದ್ದರು. ತಲೆಯನ್ನು ಗೋಡೆಗೆ ಜಜ್ಜಿದ್ದರಿಂದ ಬಾಲಕಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.ಸಂಜೆ ಮನೆಗೆ ಬಂದರೆ ಬಾಲಕಿ ನಿಲ್ಲಲೂ ಆಗದೆ ಅಲ್ಲಲ್ಲೇ ಕುಸಿದು ಬೀಳುತ್ತಿದ್ದಳು. ಮನೆಯವರು ಈಕೆಯ ಸಹಪಾಠಿಗಳನ್ನು ವಿಚಾರಿಸಿದಾಗ ಶಿಕ್ಷಕ ಥಳಿಸಿದ ವಿಚಾರ ತಿಳಿಯಿತು. ಪೋಷಕರು ಹೊಳೆನರಸೀಪುರ ಆಸ್ಪತ್ರೆಯಲ್ಲಿ ಬಳಿಕ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಬಾಲಕಿ ಗುಣಮಖಳಾಗಲಿಲ್ಲ.ಆಕೆಯನ್ನು ನಿಮ್ಹಾನ್ಸ್‌ಗೆ ಸೇರಿಸುವಂತೆ ವೈದ್ಯರು ಸೂಚಿಸಿದ್ದರು. ಆರ್ಥಿಕವಾಗಿ ಅಷ್ಟು ಶಕ್ತಿ ಇಲ್ಲದ ಪಾಲಕರು ಬಾಲಕಿಯನ್ನು ಮನೆಗೆ ಕರೆತಂದಿದ್ದರು. ಅಷ್ಟರಲ್ಲಿ ಶಾಲೆಗೆ ದಸರಾ ರಜೆ ಬಂದಿದ್ದರಿಂದ ವಿಚಾರಿಸೋಣ ಎಂದರೆ ಶಿಕ್ಷಕರೂ ಲಭ್ಯವಾಗಲಿಲ್ಲ.ರಜೆ ಮುಗಿದು ಶಾಲೆ ಆರಂಭವಾದಾಗ ಗ್ರಾಮಸ್ಥರ ಜತೆಗೆ ಶಾಲೆಗೆ ಬಂದ ಪಾಲಕರು ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ವಿಚಾರಿಸಿದ್ದರು. ಆಗ ಚಿಕಿತ್ಸೆಗೆ ಹಣ ಕೊಡುವುದಾಗಿ ಒಪ್ಪಿದ್ದ ಶಿಕ್ಷಕ, ಅದರಂತೆ ಬೆಂಗಳೂರಿಗೆ ಕರೆದೊಯ್ದು ನಿಮ್ಹಾನ್ಸ್‌ಗೆ ಸೇರಿಸಿ ಬಂದಿದ್ದರು. ಅದರೆ ಆಸ್ಪತ್ರೆಯಲ್ಲೇ ಕೆಲವು ದಿನಗಳ ಕಾಲ ನಿಲ್ಲಬೇಕು ಎಂದಾಗ ಪಾಲಕರಿಗೆ ಮತ್ತೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಅವರು ಮತ್ತೆ ಬಾಲಕಿಯನ್ನು ಊರಿಗೆ ಕರೆತಂದರು.ಈಗ ಬಾಲಕಿ ಪುಷ್ಪಾಳ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು ನೆನಪಿನ ಶಕ್ತಿಯೂ ಕ್ಷೀಣಿಸಲು ಆರಂಭವಾಗಿದೆ ಎಂದು ಮನೆಯವರು ದೂರಿದ್ದಾರೆ. ಇತ್ತ ಮಗು ಥಳಿಸಿದ ಶಿಕ್ಷಕರೂ ಲಭ್ಯವಾಗುತ್ತಿಲ್ಲ. ದಾರಿ ಕಾಣದೆ ಗ್ರಾಮಸ್ಥರು ಹಾಗೂ ಪಾಲಕರು ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಮಗುವನ್ನು ಥಳಿಸಿದ ಶಿಕ್ಷಕನ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಬಾಲಕಿ ಸಂಪೂರ್ಣ ಗುಣವಾಗುವವರೆಗೂ ಚಿಕಿತ್ಸೆ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ಶಿಕ್ಷಕ ವೀರಭದ್ರಪ್ಪ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.ಕಡೆಗೆ ಸ್ಥಳಕ್ಕೆ ಬಂದಿದ್ದ ಶಿಕ್ಷಕ ಸಂಘದ ಸದಸ್ಯರು ಹಾಗೂ ಕೆಲವು ಶಿಕ್ಷಕರು 12 ಸಾವಿರ ರೂಪಾಯಿ ಸಂಗ್ರಹಿಸಿ ಪಾಲಕರಿಗೆ ನೀಡಿದರು. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಲ್ಲಿ ಆರೋಗ್ಯ ಚೇತನ ಯೋಜನೆಯಡಿ ಕೊಡಿಸುತ್ತೇವೆ, ಶಿಕ್ಷಕನ ವಿರುದ್ಧ ಕ್ರಮ ಜರುಗಿಸಲು ಉಪನಿರ್ದೇಶಕರಿಗೆ ಇಂದೇ ವರದಿ ನೀಡುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ಸೂಚಿಸಿದ ಬಳಿಕ ಪ್ರತಿಭಟನೆ ಕೊನೆಗೊಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.