ಗುರುವಾರ , ಮೇ 19, 2022
21 °C
ಇದು ಚಿಗಳ್ಳಿ ಶಾಲೆಯ ಶಿಕ್ಷಕರ ಪಾಡು..

ಶಿಕ್ಷಕರಿಗೆ ಮಕ್ಕಳ ಕಾಯುವುದೇ ಕಾಯಕ

ಪ್ರಜಾವಾಣಿ ವಾರ್ತೆ / ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

ಮುಂಡಗೋಡ: ಮಕ್ಕಳಿಗೆ ಪಾಠ ಹೇಳುವುದು ಬಿಟ್ಟು ಕಾಲುವೆ ಮೇಲಿನ ಹಲಿಗೆ ಜಾರಿ ಬೀಳದಂತೆ ನೋಡುವುದೇ ಚಿಗಳ್ಳಿ ಮಾದರಿ ಶಾಲೆಯ ಶಿಕ್ಷಕರ ದಿನನಿತ್ಯದ ಕಾಯಕವಾಗಿದೆ.ಶಾಲೆಯ ಎದುರಿನ ಗುಂಡಿಯಲ್ಲಿ ಮಕ್ಕಳು ಬೀಳದಂತೆ ಎಚ್ಚರಿಕೆ ವಹಿಸುತ್ತ ತರಗತಿಯ ಕೋಣೆಯಿಂದ ಹೊರಗೆ ಬಂದು ನೋಡಿ ಹೋಗಬೇಕಾದ ಅನಿವಾರ್ಯತೆ ಇವರಿಗಿದೆ. ದನಗಳು ಶಾಲೆಯ ಆವರಣದೊಳಗೆ ಬಂದರೆ ಓಡಿಸಲು ಹೋಗುವುದು ಇವರೇ. ಒಟ್ಟಿನಲ್ಲಿ ಬೋಧನೆಯ ಜೊತೆಗೆ ಹೆಚ್ಚಾಗಿ ಮಕ್ಕಳ ಜೀವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ.ಶತಮಾನೋತ್ಸವ ಕಂಡ ತಾಲ್ಲೂಕಿನ ಚಿಗಳ್ಳಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ತುಸು ಹೆಚ್ಚಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದರಿಂದ ಎಂಟನೇ ತರಗತಿವರೆಗೆ ಇರುವ ಶಾಲೆಯಲ್ಲಿ 400ಕ್ಕಿಂತ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯ ಹಿಂದುಗಡೆ ಕಳೆದ ಮೂರು ವರ್ಷಗಳ ಹಿಂದೆ ಒಂದೂವರೆ ಮೀಟರನಷ್ಟು ಅಗಲವಾದ ಕಾಲುವೆ ನಿರ್ಮಾಣ ಕಾರ್ಯ ನಡೆದಿದ್ದು ಸತತ ಮೂರು ಮಳೆಗಾಲ ಮುಗಿದರೂ ಇನ್ನೂತನಕ ಪೂರ್ಣಗೊಂಡಿಲ್ಲ. ಚಿಗಳ್ಳಿ ಗ್ರಾಮದಲ್ಲಿರುವ ಹೊಂಡಕ್ಕೆ ಈ ಕಾಲುವೆಯ ಮೂಲಕ ನೀರು ಸೇರುತ್ತಿದೆ.ಕಾಲುವೆಯ ಮತ್ತೊಂದು ಬದಿಗೆ ಶೌಚಾಲಯವಿದೆ. ಮಕ್ಕಳು ಶೌಚಾಲಯಕ್ಕೆ ಹೋಗಬೇಕಾದರೆ ಕೈಯಲ್ಲಿ ಜೀವ ಹಿಡಿದುಕೊಂಡು ಈ ಕಾಲುವೆಯನ್ನು ದಾಟಬೇಕಾಗಿದೆ. ಶಾಲಾ ಆವರಣದಲ್ಲಿಯೇ ಕಾಲುವೆ ಹಾದು ಹೋಗಿರುವುದರಿಂದ ಶೌಚಾಲಯ ಹಾಗೂ ಶಾಲೆಯನ್ನು ಬೇರ್ಪಡಿಸಿದೆ. ಮಳೆಗಾಲದಲ್ಲಿ ಕಾಲುವೆ ತುಂಬಿ ಹರಿಯುತ್ತಿದ್ದು ಇದನ್ನು ದಾಟಿಕೊಂಡೇ ಶೌಚಾಲಯಕ್ಕೆ ಹೋಗಬೇಕಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಈ ಕಾಲುವೆಯಲ್ಲಿ ಮೂರು ಮಳೆಗಾಲದ ನೀರು ಹರಿದಿದೆ. ಮಕ್ಕಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾದವರು ಮಾತ್ರ ಇನ್ನೂ ತನಕ ಎಚ್ಚರಗೊಂಡಿಲ್ಲ.ಹಲಿಗೆ ಇಡುವುದೇ ಶಿಕ್ಷಕರ ಕಾಯಕ:ಶಾಲೆಗೆ ಬಂದವರೇ ಶಿಕ್ಷಕರು ಮೊದಲು ಮಾಡುವ ಕೆಲಸವೆಂದರೆ ಕಾಲುವೆಯ ಮೇಲೆ ಎರಡು ಹಲಿಗೆಗಳನ್ನು ಸಮನಾಗಿ ಜೋಡಿಸಿ ಇಡುವುದಾಗಿದೆ. ಅಲ್ಪ ಸಮಯದ ವಿಶ್ರಾಂತಿಗೆ ಬಿಟ್ಟ ಸಂದರ್ಭದಲ್ಲಿ ಶಿಕ್ಷಕರು ಕಾಲುವೆ ಸನಿಹ ನಿಂತುಕೊಂಡು ಮಕ್ಕಳನ್ನು ಜಾಗರೂಕತೆಯಿಂದ ದಾಟುವಂತೆ ನೋಡಿಕೊಳ್ಳುವುದು ಹಾಗೂ ಮರಳಿ ಕರೆದುಕೊಂಡು ಬರುವುದು ದಿನನಿತ್ಯದ ಕೆಲಸವಾಗಿದೆ. ಸಂಜೆ ಶಾಲೆ ಬಿಟ್ಟ ನಂತರ ಜೋಡಿಸಿರುವ ಹಲಿಗೆಗಳನ್ನು ಮರಳಿ ಶಾಲೆಯಲ್ಲಿ ಇಡುವುದು ಶಿಕ್ಷಕರ ಹೆಚ್ಚುವರಿ ಕೆಲಸವಾಗಿದೆ. ಒಂದೊಂದು ಸಲ ಹಲಿಗೆಗಳನ್ನು ಅಲ್ಲಿಯೇ ಮರೆತುಬಂದರೆ ಮರುದಿನ ಹಲಿಗೆಗಳು ನಾಪತ್ತೆಯಾಗಿರುತ್ತವೆ ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಕರು ಹೇಳುತ್ತಾರೆ.ಗ್ರಾಮಸಭೆಯಲ್ಲಿ ಹೇಳಿದರೂ ಉಪಯೋಗವಾಗಿಲ್ಲ:`ಕಳೆದ ಮೂರು ವರ್ಷಗಳಿಂದ ಕಾಲುವೆ ಸಮಸ್ಯೆ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಗ್ರಾಮಸಭೆಗೆ ಹಾಜರಾಗಿ ಸಮಸ್ಯೆಯ ಕುರಿತು ಹೇಳಿದರೂ ಸೂಕ್ತ ಪ್ರತಿಕ್ರಿಯೆ ದೊರಕುತ್ತಿಲ್ಲ. ಕಾಮಗಾರಿ ಪೂರ್ಣಗೊಳಿಸಿ ಕಾಲುವೆ ಮೇಲೆ ಸ್ಲ್ಯಾಬ್ ಹಾಕಿ ಸಮತಟ್ಟು ಮಾಡುವಂತೆ ವಿನಂತಿಸಿದರೂ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮಾಡುತ್ತೇವೆ ಎಂದು ಹೇಳಿದ ಮರುಗಳಿಗೆಯಲ್ಲಿ ಮರೆತುಬಿಡುತ್ತಿದ್ದಾರೆ' ಎಂದು ಗುಡ್ಡಪ್ಪ ದೂರುತ್ತಾರೆ.ಶಾಲೆಗೆ ಸರಿಯಾದ ಗೇಟ್ ಇಲ್ಲದಿರುವುದರಿಂದ ಶಾಲಾ ಆವರಣದಲ್ಲಿ ನಾಯಿ, ದನಗಳು ಆವರಣದೊಳಗೆ ಓಡಾಡುತ್ತವೆ. ಅಲ್ಲದೇ ರಾತ್ರಿ ಸಮಯದಲ್ಲಿ ಶಾಲೆಯೊಳಗೆ ದನಗಳು ಬಿಡಾರ ಹೂಡುತ್ತಿವೆ. ಬಿಸಿಯೂಟದ ಸಮಯದಲ್ಲಿ ನಾಯಿಗಳು ಆವರಣದೊಳಗೆ ಬರುವುದು ಮಕ್ಕಳು ಮತ್ತು ಶಿಕ್ಷಕರು ಅವುಗಳನ್ನು ಓಡಿಸುವುದು ದಿನಚರಿಯಂತಾಗಿದೆ.ಹಳೆ ಶಾಲೆಯ ಕಟ್ಟಡದ ಎದುರಿಗೆ ಸಭಾಭವನ ನಿರ್ಮಾಣ ಕಾರ್ಯ ನಡೆದಿದ್ದು ಅಲ್ಲಿಯೂ ಸಹ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ನೀರು ಸಂಗ್ರಹವಾಗಿದೆ. ಮಣ್ಣಿನ ದಿಬ್ಬದ ಕೆಳಗೆ ಗುಂಡಿಯಲ್ಲಿ ನೀರು ನಿಂತು ಮಕ್ಕಳ ಓಡಾಟಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಜಾರಿ ಬೀಳುವ ಸಂಭವ ಹೆಚ್ಚಾಗಿದೆ. ತೆರೆದಿರುವ ಗುಂಡಿಗಳನ್ನು ಮುಚ್ಚಿ ಮಣ್ಣು ಸಮತಟ್ಟು ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ಆದರೆ ಗುತ್ತಿಗೆದಾರರಿಗೆ ಈ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ ಎಂದು ಮಕ್ಕಳ ಪಾಲಕರು ದೂರುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.