ಸೋಮವಾರ, ಏಪ್ರಿಲ್ 19, 2021
25 °C

ಶಿಕ್ಷಕರ ನೇಮಕ ಅಕ್ರಮ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಶಿಕ್ಷಕರ ನೇಮಕಾತಿಗೆ ನಕ್ಸಲ್‌ಪೀಡಿತ ಪ್ರದೇಶದ ಅರ್ಹ ಯುವಕ, ಯುವತಿಯರು ಅರ್ಜಿ ಸಲ್ಲಿಸಿದ್ದರೂ ಅವರನ್ನು ಕಡೆಗಣಿಸಿ ಬೇರೆಯವರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ವೇದಿಕೆ ಕಾರ್ಯಕರ್ತೆ ಸುಮಾ ನಾಗೇಶ್ ಆರೋಪಿಸಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಕರ ನೇಮಕಾತಿ ಪಾರದರ್ಶಕವಾಗಿ ನಡೆದಿದೆ. ಅದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ನಕ್ಸಲ್ ಪೀಡಿತ ಪ್ರದೇಶದವರನ್ನು ಕೈಬಿಟ್ಟು ಬೇರೆ ಪ್ರದೇಶದವರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಜಿಲ್ಲಾಡಳಿತ ನಕ್ಸಲ್ ಪೀಡಿತ ಪ್ರದೇಶದ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಈ ಭಾಗದವರಿಗೆ ಆದ್ಯತೆ ನೀಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮನವಿ ಮಾಡಿದರು.ಶಿಕ್ಷಣ ಇಲಾಖೆ ಕೆಲವು ಅಧಿಕಾರಿಗಳು ತಮಗೆ ಬೇಕಾ ದವರನ್ನು ಆಯ್ಕೆ ಮಾಡಿಕೊಳ್ಳಲು ಪಟ್ಟಿ ತಯಾರಿಸುತ್ತಿದ್ದಾರೆ ಎಂದು ದೂರಿದರು. ಗಿರಿಜನರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ಅಧಿಕಾರಿಗಳು ಮುಕ್ತವಾಗಿ ಕೆಲಸ ನಿರ್ವಹಿಸುವ ಅವಕಾಶ ಜನ ಪ್ರತಿನಿಧಿಗಳು ಮಾಡಿಕೊಡುವುದು ಅಗತ್ಯವಾಗಿದೆ ಎಂದು ಹೇಳಿದರು.ಯುನೆಸ್ಕೊ ಸ್ವಯಂ ಸೇವಾ ಸಂಸ್ಥೆ, ಪಶ್ಚಿಮಘಟ್ಟಪ್ರದೇಶ ವಿಶ್ವಪಾರಂಪರಿಕೆ ಪಟ್ಟಿಗೆ ಸೇರಿದರೆ ಲಾಭವೂ ಇಲ್ಲ. ನಷ್ಟವೂ ಇಲ್ಲ. ಇದರಿಂದ ಜನವಸತಿ ಪ್ರದೇಶಕ್ಕೆ ಧಕ್ಕೆ ಇಲ್ಲ. ಪಶ್ಚಿಮಘಟ್ಟವನ್ನು ಕಾಪಾಡಿಕೊಳ್ಳುವ ವ್ಯವಸ್ಥೆ ರಾಜ್ಯದಲ್ಲಿಯೇ ಇದೆ. ಆದರೆ ರಾಜ್ಯ ಸರ್ಕಾರ ವಿಶ್ವಪಾರಂಪರಿಕ ಪಟ್ಟಿಗೆ ಪಶ್ಚಿಮಘಟ್ಟ ಸೇರ್ಪಡೆಯನ್ನು ವಿರೋಧಿಸುತ್ತಿರುವ ಹಿಂದೆ ಗಣಿಲಾಭಿಗಳ ಕೈವಾಡ ಇದೆ ಎಂದು ಆರೋಪಿಸಿದರು.ಹುಲಿಯೋಜನೆಯ ವಾಸ್ತವಾಂಶವನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಹುಲಿ ಯೋಜನೆಯ ನೋಟೀಫಿಕೇಷನ್‌ಮಾಡುವಾಗ ಜನವಸತಿಗೆ ಅನುಕೂಲವಾಗುವಂತೆ ಕೆಲವು ಮಾರ್ಪಾಡು ಮಾಡಲು ಅವಕಾಶ ಇದೆ. ಹೀಗೆ ನೋಟಿಫಿಕೇಷನ್ ಮಾಡಿದ್ದನ್ನು ನೆಪವಾಗಿಟ್ಟುಕೊಂಡು ವಿವಿಧ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು  ಹೇಳಿದರು.ಕುದುರೆಮುಖದಲ್ಲಿ ರಷ್ಯಮೂಲದ ಕಂಪೆನಿಯಿಂದ ಮತ್ತೆ ಗಣಿಗಾರಿಕೆ ನಡೆಸುವ ಹುನ್ನಾರ ನಡೆದಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಗಣಿಗಾರಿಕೆಗೆ ಸರ್ಕಾರ ಸಹಿಮಾಡಿದೆ. ಇದಕ್ಕೆ ಪೂರಕವಾಗಿ ರಾಜ್ಯದ ಸದನ ಸಮಿತಿ ಯೊಂದು ಕುದುರೆಮುಖಕ್ಕೆ ಭೇಟಿ ನೀಡಿ ಲಕ್ಯಾಅಣೆಕಟ್ಟೆಯಲ್ಲಿ ಹೂಳೆತ್ತುವ ಮಾತನಾಡಿದೆ. ಖಾಸಗಿ ಕಂಪೆನಿಗಳ ಹಿಡಿತಕ್ಕೆ ಪಶ್ಚಿಮಘಟ್ಟವನ್ನು ಒಪ್ಪಿಸುವ  ಹುನ್ನಾರ ನಡೆಯುತ್ತಿದೆ ಇದನ್ನು ವೇದಿಕೆ ವಿರೋಧಿಸಲಿದೆ ಎಂದು ತಿಳಿಸಿದರು. ನಾಗೇಶ್‌ಅಂಗಿರಸ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.