ಮಂಗಳವಾರ, ಮೇ 18, 2021
30 °C

ಶಿಕ್ಷಣದಲ್ಲಿ ಶುಚಿ-ಜಿಲ್ಲೆಯ ಮಿಂಚಿನ ಪ್ರಗತಿ

ಪ್ರಜಾವಾಣಿ ವಾರ್ತೆ/ ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ಮಂಗಳೂರು: ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯದಲ್ಲಿ 26ನೇ ಸ್ಥಾನಕ್ಕೆ ಕುಸಿದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಪ್ರಯತ್ನವೇನೋ ನಡೆದಿದೆ. ಆಟದ ಮೈದಾನ, ಕಾಂಪೌಂಡ್ ನಿರ್ಮಾಣ, ಏಕ ಶಿಕ್ಷಕರ ಶಾಲೆಯಲ್ಲಿ ಇಬ್ಬರು ಶಿಕ್ಷಕರ ನಿಯೋಜನೆಯಂತಹ ಪ್ರಮುಖ ಮೂಲಸೌಲಭ್ಯ ಅಭಿವೃದ್ಧಿಗಳ ಜತೆಗೆ ಶೌಚಾಲಯ ಸಹಿತ ಶುಚಿತ್ವಕ್ಕೆ ವಿಶೇಷ ಗಮನ ಹರಿಸಿರುವುದು ಗಮನಕ್ಕೆ ಬರತೊಡಗಿದೆ.ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಪ್ರಕಾರ ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡುವುದು ಮಾತ್ರ ಮುಖ್ಯ ವಿಷಯವಾಗುತ್ತಿದೆ. ಈ ಬಾರಿ ಲಭ್ಯ ಇರುವ ಸೀಟುಗಳ ಪೈಕಿ ಶೇ 65ರಷ್ಟು ಭರ್ತಿಯಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡು ಹೆಮ್ಮೆಪಡುತ್ತಿದ್ದಾರೆ. ಆದರೆ ಆರ್‌ಟಿಇ ಪ್ರಕಾರ ಆಟದ ಮೈದಾನ, ಶಾಲಾ ಕಾಂಪೌಂಡ್‌ನಂತಹ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.ಆರ್‌ಟಿಇಯಲ್ಲಿ ಏಕ ಶಿಕ್ಷಕ ಶಾಲೆ ಎಂಬುದೇ ಇರಬಾರದು ಎಂದೂ ಸೂಚಿಸಲಾಗಿದೆ. ಸರ್ಕಾರಿ ಶಾಲೆಗಳು ಆರ್‌ಟಿಇ ನಿಯಮದಂತೆ ಬಹುತೇಕ ಅಗತ್ಯಗಳನ್ನು ಪೂರ್ಣಗೊಳಿಸಿರುವುದು ಕಾಣಿಸತೊಡಗಿದೆ.`ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ವಹಿಸುವ ಅಧಿಕಾರಿಗಳು ಖಾಸಗಿ ಶಾಲೆಗಳ ಮೂಲಸೌಲಭ್ಯಗಳತ್ತಲೂ ಗಮನ ಹರಿಸಬೇಕು. ಆದರೆ ಅಂತಹ ಪ್ರಯತ್ನ ನಡೆದಂತಿಲ್ಲ. ಎಷ್ಟು ಖಾಸಗಿ ಶಾಲೆಗಳಲ್ಲಿ ಮೈದಾನ ಇಲ್ಲ, ಎಷ್ಟು ಶಾಲೆಗಳಿಗೆ ಕಾಂಪೌಂಡ್ ಇಲ್ಲ ಎಂಬ ಲೆಕ್ಕಾಚಾರವನ್ನು ನಮಗೆ ಇನ್ನೂ ಇಲಾಖೆ ಒದಗಿಸಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಇಂದು ಖಾಸಗಿ ಕ್ಷೇತ್ರದ ಪಾತ್ರ ದೊಡ್ಡದಿರುವುದರಿಂದ ಅಲ್ಲಿನ ಮೂಲಸೌಲಭ್ಯಗಳನ್ನು ಹೆಚ್ಚು ಮುತುವರ್ಜಿಯಿಂದ ನೋಡಬೇಕಾಗಿದೆ' ಎಂದು ಆರ್‌ಟಿಇ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ನಗರದ `ಪಡಿ' ಸಂಸ್ಥೆಯ ಮುಖ್ಯಸ್ಥ ರೆನ್ನಿ ಡಿಸೋಜ ಸೋಮವಾರ `ಪ್ರಜಾವಾಣಿ'ಗೆ ತಿಳಿಸಿದರು.ಆರ್‌ಟಿಇನಲ್ಲಿ ಹೇಳಿದಂತಹ ಹಲವಾರು ನಿಯಮಗಳನ್ನು ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಪಾಲಿಸಲಾಗಿದೆ. ತರಗತಿ ಕೊಠಡಿ, ಶೌಚಾಲಯ, ಮುಖ್ಯಾಧ್ಯಾಪಕರ ಕೊಠಡಿ, ಗ್ರಂಥಾಲಯ ಸಹಿತ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಕಳೆದ ವರ್ಷ 5.81 ಕೋಟಿ ರೂಪಾಯಿ ವೆಚ್ಚದಲ್ಲಿ 33,200 ಮೀಟರ್ ಶಾಲಾ ಕಾಂಪೌಂಡ್ ನಿರ್ಮಿಸಲಾಗಿದೆ. ಇನ್ನು 120 ಶಾಲೆಗಳಲ್ಲಿ ಮಾತ್ರ ಆಟದ ಮೈದಾನ ನಿರ್ಮಿಸುವುದು ಬಾಕಿ ಉಳಿದಿದೆ. ಏಕ ಶಿಕ್ಷಕ ಶಾಲೆ ಎಂಬುದೂ ಜಿಲ್ಲೆಯಲ್ಲಿ ಇಲ್ಲ, ಕೆಲವೆಡೆ ಇನ್ನೊಬ್ಬ ಶಿಕ್ಷಕರ ನಿಯೋಜನೆ ಮಾತ್ರ ಬಾಕಿ ಉಳಿದಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್ ಹೇಳಿದರು.ಶುಚಿತ್ವದತ್ತ ವಿಶೇಷ ಚಿತ್ತ: ಆಟದ ಮೈದಾನ, ಕಾಂಪೌಂಡ್‌ಗಿಂತಲೂ ಜಿಲ್ಲೆಯ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಶುಚಿತ್ವಕ್ಕೆ ವಿಶೇಷ ಗಮನ ಹರಿಸಿದ್ದು ಮಾತ್ರ ಮನದಟ್ಟಾಗತೊಡಗಿದೆ. ಜಿಲ್ಲೆಯ ಎಲ್ಲಾ 651 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನ್ಯಾಪ್‌ಕಿನ್ ಉರಿಸುವ ಒಲೆ ನಿರ್ಮಿಸುವ ಕಾರ್ಯ ಈ ವರ್ಷ ಪೂರ್ಣಗೊಳ್ಳಲಿದೆ. ಒಂದೊಂದು ಒಲೆಗೆ ತಗಲುವ ವೆಚ್ಚ 3,500ರಿಂದ 4 ಸಾವಿರ ರೂಪಾಯಿ ಮಾತ್ರ. ಜಿಲ್ಲೆಯ ಎಲ್ಲಾ 931 ಶಾಲೆಗಳಲ್ಲಿ ವಿಶೇಷ ಮಕ್ಕಳಿಗಾಗಿ ಶೌಚಾಲಯ ನಿರ್ಮಸುವ ಕಾರ್ಯಕ್ಕೆ ಸಹ ಇದೀಗ ವೇಗ ದೊರೆತಿದ್ದು, 400 ಶಾಲೆಗಳಲ್ಲಿ ಈಗಾಗಲೇ ಇದು ಪೂರ್ಣಗೊಂಡಿದೆ. ಈ ವರ್ಷದೊಳಗೆ ಎಲ್ಲಾ ಶಾಲೆಗಳಲ್ಲಿ ಇಂತಹ  ಶೌಚಾಲಯಗಳು ನಿರ್ಮಾಣಗೊಳ್ಳಲಿದೆ, ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಈಗಾಗಲೇ ನಿರ್ಮಾಣಗೊಂಡು ಜಿಲ್ಲೆ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಗಮನ ಸೆಳೆದಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ಉಪ ಸಮನ್ವಯಾಧಿಕಾರಿ ಎನ್.ಶಿವಪ್ರಕಾಶ್ ಹೇಳಿದರು.ಎರಡು ವರ್ಷಗಳ ಹಿಂದೆ ಪ್ರೌಢಾವಸ್ಥೆಗೆ ಬರುವ ಬಾಲಕಿಯರ ತಿಳಿವಳಿಕೆಗಾಗಿ `ಕೇಳು ಕಿಶೋರಿ' ಎಂಬ ವಿನೂತನ ಮಾಹಿತಿ ನೀಡಿಕೆ ಕಾರ್ಯಕ್ರಮ ಆರಂಭಿಸಲಾಗಿತ್ತು. ಮೂರು ದಿನಗಳ ಮಾಹಿತಿ ಕಾರ್ಯಕ್ರಮ ಯಶಸ್ವಿಯೂ ಆಗಿತ್ತು. ಈ ವರ್ಷ ಪ್ರೌಢಾವಸ್ಥೆಗೆ ಬರುತ್ತಿರುವ ಬಾಲಕರಿಗಾಗಿ `ಕೇಳು ಕಿಶೋರ' ಎಂಬ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಉತ್ತಮ ಆಹಾರ ಕ್ರಮ, ಉತ್ತಮ ಹವ್ಯಾಸ, ಮಾದಕ ಪದಾರ್ಥ, ಕುಡಿತದಿಂದ ಉಂಟಾಗುವ ಆಪತ್ತುಗಳ ಬಗ್ಗೆ ತಿಳಿವಳಿಕೆ ನೀಡಲು ಉದ್ದೇಶಿಸಲಾಗಿದೆ. ಆಗಸ್ಟ್‌ನಿಂದ ಈ ಕಾರ್ಯಕ್ರಮ ಆರಂಭವಾಗಲಿದೆ.ಶಾಲೆಗಳ ಸುತ್ತಮುತ್ತ ಶುಚಿತ್ವಕ್ಕೆ ಜಿಲ್ಲೆ ವಿಶೇಷ ಗಮನ ಹರಿಸಿದ್ದು ಸ್ಪಷ್ಟವಾಗಿದ್ದು, ಇದು ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಹೇಗೆ ಪ್ರಭಾವ ಬೀರುತ್ತದೆ ಎಂಬ ಕುತೂಹಲ ಶಿಕ್ಷಣ ಪ್ರೇಮಿಗಳಲ್ಲಿ ನೆಲೆಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.